ADVERTISEMENT

ವಾಚಕರ ವಾಣಿ: ಎಲ್ಲ ಉಪಯುಕ್ತ ಮರಗಳ ಸ್ಥಿತಿ ಅರಿಯಬೇಕಿದೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2022, 19:31 IST
Last Updated 8 ಜೂನ್ 2022, 19:31 IST

ಪಠ್ಯಪುಸ್ತಕ ಗಲಾಟೆಯ ನಡುವೆ ಬಂದ ‘ಕರ್ನಾಟಕದ ಕಾಡಿನ ಸ್ವರೂಪ ಬದಲು’ ಎಂಬ ವಿಶ್ಲೇಷಣಾತ್ಮಕ ಲೇಖನ (ಪ್ರ.ವಾ., ಜೂನ್ 6) ಆತಂಕ ಹುಟ್ಟಿಸುವಂತಿದೆ. 60 ಸೆಂ.ಮೀ.ಗಿಂತಲೂ ಹೆಚ್ಚು ಕಾಂಡದ ಸುತ್ತಳತೆ ಇರುವ ಬೃಹತ್ ಮರಗಳ ಪ್ರದೇಶ ಹೆಚ್ಚಿದೆ, ಪೊದೆ, ಕಳೆ ಸಸ್ಯಗಳದು ಶೇ 50ರಷ್ಟು ಕಡಿಮೆಯಾಗಿದೆ... ಇದು ಕೊರೊನಾ ಕಾಲದಲ್ಲಿ ಆರ್ಥಿಕವಾಗಿ ಯಾವ್ಯಾವ ವರ್ಗಗಳಿಗೆ ಏನಾಯಿತು ಎಂಬ ವಿಶ್ಲೇಷಣೆಯನ್ನು ಹೋಲುತ್ತದೆ. ಬಿದಿರಿನ ಪ್ರದೇಶದಲ್ಲಿ ಆಗಿರುವ ಇಳಿಕೆ (ಶೇ 15) ಆಳುವವರ ಕಣ್ತೆರೆಸಬೇಕು.

‘ಸ್ಟೇಟ್ ಆಫ್ ಎನ್ವಿರಾನ್‌ಮೆಂಟ್’ನಂತಹ ವರದಿಗಳು ಹೊರಬಂದಾಗ ಒಂದಿಷ್ಟು ಗಮನ ನೀಡಿದಂತೆ ಮಾಡಿ, ಮತ್ತೆ ಆಸಕ್ತಿ ಕಳೆದುಕೊಳ್ಳುವ ಉನ್ನತ ಅಧಿಕಾರಿಗಳಿದ್ದಾರೆ. ಕಾಡು ಹೆಚ್ಚಾಯಿತು ಎಂದು ಬೆನ್ನು ತಟ್ಟಿಕೊಳ್ಳುವ ಬದಲು, ಐದು ಜಾತಿಯ ಬೃಹತ್ ಮರಗಳನ್ನು ಹೊರತುಪಡಿಸಿ ಇತರ ಉಪಯುಕ್ತ ಮರಗಳ ಸ್ಥಿತಿಯನ್ನೂ ತಿಳಿಯುವ ಅಗತ್ಯ ಇದೆ. ಮುಖ್ಯವಾಗಿ ಕಾಡು ವಿವಿಧ ಜೀವಿಗಳಿಗೆ ಆಸರೆ ಎಂಬ ಪರಿಗಣನೆ ಅಗತ್ಯ.

ಮಹಾನಗರಗಳಲ್ಲಂತೂ ಅಭಿವೃದ್ಧಿಯ ಭರದಲ್ಲಿ ಟ್ರೀ ಕವರ್ ತೆಳುವಾಗುತ್ತಲೇ ಇದೆ. ಗ್ರಾಮೀಣ, ಅರೆಪಟ್ಟಣ ಪ್ರದೇಶಗಳಲ್ಲಿ ಹೆದ್ದಾರಿ, ಹೈಟೆನ್ಷನ್ ಲೈನ್, ಕೈಗಾರಿಕಾ ಪ್ರದೇಶ ಸ್ಥಾಪನೆಯಂತಹ ಕಾರಣ ಇರುವಾಗ ಈಗಾಗಲೇ ಇರುವ ಮರಗಳ ಭವಿಷ್ಯದ ಬಗೆಗೂ ಗಮನ ನೀಡಬೇಕಾಗಿದೆ.

ADVERTISEMENT

-ಎಚ್.ಎಸ್.ಮಂಜುನಾಥ, ಗೌರಿಬಿದನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.