ADVERTISEMENT

ವಾಚಕರ ವಾಣಿ: ಕನ್ನಡದ ಅವಜ್ಞೆಗೆ ನಾನಾ ಕಾರಣ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2020, 15:58 IST
Last Updated 19 ಆಗಸ್ಟ್ 2020, 15:58 IST

ಬೆಂಗಳೂರಿನಲ್ಲಿ ಬಸವಣ್ಣನವರ ಪ್ರತಿಮೆಯ ಕೆಳಗೆ ಕನ್ನಡ, ಇಂಗ್ಲಿಷ್ ಜೊತೆಗೆ ಹಿಂದಿಯಲ್ಲಿದ್ದ ಬರಹವನ್ನು ಬಣ್ಣದಿಂದ ಅಳಿಸಿಹಾಕಿರುವ ಬಗ್ಗೆ ಸತ್ಯಬೋಧ ಅವರು ಪ್ರಸ್ತಾಪಿಸಿದ್ದಾರೆ (ವಾ.ವಾ., ಆ. 19). ಅವರ ಅಭಿಪ್ರಾಯಗಳು ಒಪ್ಪತಕ್ಕವೇ ಆದರೂ ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಹಿಂದಿಯ ಬಗ್ಗೆ ಆಕ್ರೋಶ ಉಂಟಾಗುವ ಸನ್ನಿವೇಶ ಏಕೆ ನಿರ್ಮಾಣವಾಗಿದೆ ಎನ್ನುವುದನ್ನು ಸ್ವಲ್ಪ ವಿಚಾರ ಮಾಡಬೇಕಾಗುತ್ತದೆ.

ಬೆಂಗಳೂರಿನಲ್ಲಿ ಕನ್ನಡವು ಒಂದರ್ಥದಲ್ಲಿ ಮೂಲೆಗುಂಪಾಗಿದೆ ಎಂದರೆ ಅದೇನೂಉತ್ಪ್ರೇಕ್ಷೆಯಲ್ಲ. ಇದಕ್ಕೆ ಕಾರಣಗಳಲ್ಲಿ ಎದ್ದು ತೋರುವುದು ಹಲವು ಉದ್ದಿಮೆಗಳಲ್ಲಿ ಕನ್ನಡಿಗರಿಗೆ ನೌಕರಿಯಲ್ಲಿ ಆದ್ಯತೆ ಇಲ್ಲದಿರುವುದು. ಇನ್ನಿತರ ವ್ಯಾಪಾರ, ವ್ಯವಹಾರ ಕ್ಷೇತ್ರಗಳಲ್ಲೂ ಕನ್ನಡಿಗರ ಸಂಖ್ಯೆ ಗಣನೀಯವಾಗಿ ಇಲ್ಲ. ಕರ್ನಾಟಕವು ಶಾಂತಿ ಮತ್ತು ನೆಮ್ಮದಿಯ ತಾಣ ಎಂದು ಹೆಸರು ಗಳಿಸಿದ್ದರಿಂದ ಹೊರ ರಾಜ್ಯಗಳವರು ಬೆಂಗಳೂರಿನಲ್ಲಿ ನೆಲೆಸಿ ವ್ಯಾಪಾರ, ಉದ್ಯೋಗಗಳಲ್ಲಿ ತೊಡಗಿಕೊಂಡರು. ಇದರಿಂದ ಇಲ್ಲಿ ಕನ್ನಡೇತರರ ಸಂಖ್ಯೆ ವಿಪರೀತ ಹೆಚ್ಚಾಯಿತು.

ಕನ್ನಡಿಗರು ಉದಾರಚರಿತರು. ಎಲ್ಲಕ್ಕೂ ಕಿರೀಟವಿಟ್ಟ ಹಾಗೆ ಇಂಗ್ಲಿಷ್ ಮಾಧ್ಯಮ ಶಿಕ್ಷಣದ ಬಗೆಗಿನ ವ್ಯಾಮೋಹ ಸಹ ಕನ್ನಡದ ಅವಜ್ಞೆಗೆ ತನ್ನ ಕೊಡುಗೆಯನ್ನು ಮುಕ್ತವಾಗಿ ನೀಡಿದೆ. ಬೇರೆ ರಾಜ್ಯಗಳವರು ತಮ್ಮ ನೆಲದ ಭಾಷೆ ಬಗ್ಗೆ ಮೆರೆದ ಅಭಿಮಾನ, ಆಸಕ್ತಿಯ ಎದುರು, ಇಲ್ಲಿ ಆಡಳಿತ ನಡೆಸಿದ ಸರ್ಕಾರಗಳು ಕನ್ನಡದ ಬಗ್ಗೆ ತೋರಿದ ಒಲವು ಅಷ್ಟಕ್ಕಷ್ಟೇ. ಲಾಗಾಯ್ತಿನಿಂದ ಕೇಂದ್ರದ ಹಿಂದಿ ಪರ ಧೋರಣೆ ಸಹ ಒಂದು ಪ್ರಮುಖ ಕಾರಣ. ಈ ಎಲ್ಲದರ ಒಟ್ಟು ಪರಿಣಾಮವೇ ಕೆಲವು ಕನ್ನಡಪರ ಸಂಘ– ಸಂಸ್ಥೆಗಳು ಆಗಾಗ್ಗೆ ವ್ಯಕ್ತಪಡಿಸುವ ಆಕ್ರೋಶ ಮತ್ತು ಪ್ರತಿಭಟನೆ.

ADVERTISEMENT

-ಸಾಮಗ ದತ್ತಾತ್ರಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.