ADVERTISEMENT

ಹುತ್ತವ ಬಡಿದೊಡೆ...

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 20:12 IST
Last Updated 24 ಜನವರಿ 2020, 20:12 IST

ಪಕ್ಷಾಂತರ ಮಾಡಿದ ಶಾಸಕರ ‘ಅರ್ಹತೆ’ಯನ್ನು ನಿರ್ಧರಿಸುವ ಅಧಿಕಾರವನ್ನು, ಮೂಲತಃ ರಾಜಕೀಯ ಪಕ್ಷವೊಂದರಿಂದ ಆಯ್ಕೆಯಾಗಿರುವ ಶಾಸನಸಭಾಧ್ಯಕ್ಷರಿಂದ ಉನ್ನತ ನ್ಯಾಯಾಂಗದ ನಿವೃತ್ತ ನ್ಯಾಯಮೂರ್ತಿಯೊಬ್ಬರನ್ನು ಒಳಗೊಂಡ ಸಮಿತಿ ಅಥವಾ ಅಂಥದ್ದೇ ಮತ್ತೊಂದು ಸ್ವತಂತ್ರ ಸಂಸ್ಥೆಗೆ ವರ್ಗಾಯಿಸುವ ಬಗ್ಗೆ ಸಂಸತ್ತು ಚಿಂತನೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ ಸಲಹೆ ನೀಡಿದೆ.

ಇದೇ ತರ್ಕ ಅನುಸರಿಸಿದರೆ, ಶಾಸನಸಭಾಧ್ಯಕ್ಷರ ಶಾಸನಸಭೆಗಳ ಕಾರ್ಯ ಕಲಾಪಗಳನ್ನು ನಡೆಸುವ ನಿಷ್ಪಕ್ಷಪಾತತನವೂ ಪ್ರಶ್ನಾರ್ಹವಾಗುತ್ತದೆ ಎಂದು ಸಂಪಾದಕೀಯ (ಪ್ರ.ವಾ., ಜ. 23) ಅಭಿಪ್ರಾಯಪಟ್ಟಿರುವುದು ಸರಿಯಾಗಿಯೇ ಇದೆ. ಈ ದೃಷ್ಟಿಯಿಂದ ಸುಪ್ರೀಂ ಕೋರ್ಟ್‌ ಸಲಹೆ ‘ಹುತ್ತವ ಬಡಿದಡೆ ಹಾವು ಸಾಯಬಲ್ಲದೆ?’ ಎಂಬ ವಚನವನ್ನು ನೆನಪಿಗೆ ತರುತ್ತದೆ.

ಮುಖ್ಯವಾಗಿ ನ್ಯಾಯಾಲಯವು ಇಂದು ಯೋಚಿಸಬೇಕಾಗಿರುವುದು, ಚುನಾವಣೆಗಳು ನಡೆದ ಕೆಲವೇ ತಿಂಗಳುಗಳಲ್ಲಿಯೇ (ಇತ್ತೀಚೆಗೆ ಗೋವಾ, ಗುಜರಾತ್‍ನಲ್ಲಿ ಕಂಡಂತೆ ಕೆಲವೇ ದಿನಗಳಲ್ಲಿ) ನಮ್ಮ ಜನಪ್ರತಿನಿಧಿಗಳು ತಾವು ಆಯ್ಕೆಯಾದ ಪಕ್ಷಗಳನ್ನು ತೊರೆದು ಹೋಗಲು ಏನು ಕಾರಣ ಮತ್ತು ಈ ಪ್ರವೃತ್ತಿಯನ್ನು ಹೇಗೆ ತಡೆಯಬಹುದು ಎಂಬುದರ ಬಗ್ಗೆ. ಈ ಪ್ರವೃತ್ತಿ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲುಗೊಳಿಸುತ್ತಿದೆ.

ಕರ್ನಾಟಕದ ಇತ್ತೀಚಿನ ಪಕ್ಷಾಂತರ ಪ್ರಕರಣದ ಸಂದರ್ಭದಲ್ಲೇ ಈ ಪಕ್ಷಾಂತರದ ಹಿಂದಿನ ಕಾರಣಗಳನ್ನು ಸೂಚಿಸುವ ಬಲವಾದ ಸಾಕ್ಷ್ಯವೊಂದನ್ನು ಸುಪ್ರೀಂ ಕೋರ್ಟ್‌ ಗಮನಕ್ಕೆ ತರಲಾಗಿತ್ತು. ಆದರೆ ನ್ಯಾಯಾಲಯವು ತಾಂತ್ರಿಕ ಕಾರಣಗಳ ಮೇಲೆ ಅದನ್ನು ಗಣನೆಗೆ ತೆಗೆದುಕೊಳ್ಳಲು ನಿರಾಕರಿಸಿತು. ಹೀಗಾಗಿ, ಕೋರ್ಟ್‌ನ ಸದ್ಯದ ಕಾಳಜಿಯು ಪ್ರಜಾಪ್ರಭುತ್ವದ ತಿರುಳಿಗಿಂತ ಹೆಚ್ಚಾಗಿ ಸಿಪ್ಪೆಯ ಕಡೆಗೇ ಇದೆ ಎಂಬ ಅಭಿಪ್ರಾಯ ಮೂಡಿಸಿ, ಜನರನ್ನು ನಿರಾಶೆಗೊಳಿಸಿದೆ ಎಂದೇ ಹೇಳಬೇಕು.

ADVERTISEMENT

–ಡಿ.ಎಸ್.ನಾಗಭೂಷಣ,ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.