ADVERTISEMENT

ವಾಚಕರ ವಾಣಿ | ಗೃಹ ಸಚಿವರ ಬಾಯಿಂದ ಅಸಹಾಯಕತೆಯ ಮಾತೇಕೆ?

​ಪ್ರಜಾವಾಣಿ ವಾರ್ತೆ
Published 16 ಜನವರಿ 2023, 19:30 IST
Last Updated 16 ಜನವರಿ 2023, 19:30 IST
   

ಸ್ಯಾಂಟ್ರೊ ರವಿಯಂಥವರಿಂದ ಹಣ ತೆಗೆದುಕೊಳ್ಳುವ ಸಂದರ್ಭ ಬಂದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಗೃಹ ಸಚಿವರು ಹೇಳಿದ್ದಾಗಿ ವರದಿಯಾಗಿದೆ (ಪ್ರ.ವಾ., ಜ. 16). ಸಚಿವರು ಪ್ರಾಮಾಣಿಕರಿರಬಹುದು, ಇಲ್ಲವೆಂದಲ್ಲ. ಆದರೆ ಅವರ ಬಾಯಿಂದ ಇಂಥ ಅಸಹಾಯಕತೆಯ ಮಾತೇಕೆ? ಇಲಾಖೆಯ ಆಡಳಿತದಲ್ಲಿ ಬೇರೆ ಮೂಲಗಳಿಂದ ಹಸ್ತಕ್ಷೇಪವೇನಾದರೂ ಇದೆಯೇ? ಇಲ್ಲವೇ, ಪ್ರಥಮ ಬಾರಿಗೆ ಮಂತ್ರಿಯಾಗಿರುವ ಅವರಿಗೆ, ಇಲಾಖೆಯ ಅಧಿಕಾರಿಗಳು ನಿರೀಕ್ಷಿತ ಸಹಕಾರ ನೀಡದೆ, ಕೆಲ ವಿಷಯಗಳಲ್ಲಿ ಅವರನ್ನು ಕತ್ತಲಲ್ಲಿ ಇಟ್ಟಿರುವರೇ? ಅಥವಾ ಅವರನ್ನು ಸುತ್ತವರಿದಿರುವವರು ಅವರ ಅರಿವಿಗೇ ಬರದಂತೆ ದಿಕ್ಕುತಪ್ಪಿಸುತ್ತಿರುವರೇ? ಇಲ್ಲದಿದ್ದರೆ, ಅತ್ಯಾಚಾರದ ಆರೋಪ ಹೊತ್ತಿರುವ ವ್ಯಕ್ತಿಯೊಬ್ಬ ಗೃಹ ಇಲಾಖೆಯ ಆಡಳಿತದಲ್ಲಿ ಇಷ್ಟು ಸಲೀಸಾಗಿ ಕೈಯಾಡಿಸಬಲ್ಲಷ್ಟು ಮತ್ತು ತನ್ನ ‘ದಂಧೆ’ಗೆ ಸರ್ಕಾರಿ ಅತಿಥಿಗೃಹವನ್ನೇ ‘ಅಡ್ಡ’ವನ್ನಾಗಿಸಿಕೊಳ್ಳುವಷ್ಟು ಪ್ರಭಾವಿ ಹಾಗೂ ಸಶಕ್ತನಾಗಲು ಸಾಧ್ಯವಾದದ್ದಾದರೂ ಹೇಗೆ?

ಇಲಾಖೆಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಈ ಆರೋಪಗಳು ಎತ್ತಿ ತೋರಿಸುವುದಿಲ್ಲವೇ? ಒಂದು ವೇಳೆ ಇಲಾಖೆಯ ಗಮನಕ್ಕೇ ವಿಷಯ ಬಂದಿಲ್ಲವೆಂದರೆ, ಅದು ಸಂಬಂಧಿಸಿದವರ ಅಸಾಮರ್ಥ್ಯ ಮತ್ತು ಕರ್ತವ್ಯಲೋಪ ಎನಿಸುವುದಿಲ್ಲವೇ? ಆತನಿಂದ ಉಪಕೃತರಾಗಿರಬಹುದಾದ, ಆತನ ಉಪಕಾರ ಪಡೆಯಲು ಬಯಸಿರಬಹುದಾದ ಇಲಾಖೆಯಲ್ಲಿನ ಹೆಗ್ಗಣಗಳೇ ಆತನಿಗೆ ಸಹಕರಿಸಿರುವ ಸಾಧ್ಯತೆಯನ್ನು ಸುಲಭವಾಗಿ ಅಲ್ಲಗಳೆಯಲಾಗುವುದೇ? ಇಂತಹ ಗುರುತರ ಲೋಪಗಳ ಹೊಣೆಯನ್ನು ಯಾರು ಹೊರಬೇಕು? ತಮ್ಮ ಅಸಹಾಯಕತೆಯನ್ನು ಪ್ರದರ್ಶಿಸದೆ, ಪ್ರಾಮಾಣಿಕತೆಯ ಜೊತೆಗೆ ದಕ್ಷತೆ ಮತ್ತು ನಿಷ್ಠುರತೆಯನ್ನು ಸಹ ಮೈಗೂಡಿಸಿಕೊಂಡು, ಇಲಾಖೆಯನ್ನು ಸಮರ್ಥವಾಗಿ ಮುನ್ನಡೆಸುವ ಜವಾಬ್ದಾರಿ ಗೃಹ ಸಚಿವರ ಮೇಲಿದೆ.
ತಿಪ್ಪೂರು ಪುಟ್ಟೇಗೌಡ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.