ADVERTISEMENT

ವಾಚಕರವಾಣಿ | ಈರುಳ್ಳಿ ಖರೀದಿ: ವಿವರ ಬಹಿರಂಗಪಡಿಸಲಿ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2020, 2:56 IST
Last Updated 30 ಏಪ್ರಿಲ್ 2020, 2:56 IST
ಬೆಳೆದಿರುವ ಈರುಳ್ಳಿಯೊಂದಿಗೆ ಪ್ರತಾಪ್‌–ವಸಂತಕುಮಾರಿ ದಂಪತಿ
ಬೆಳೆದಿರುವ ಈರುಳ್ಳಿಯೊಂದಿಗೆ ಪ್ರತಾಪ್‌–ವಸಂತಕುಮಾರಿ ದಂಪತಿ   

ಈರುಳ್ಳಿಗೆ ಮಾರುಕಟ್ಟೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ಹಿರಿಯೂರು ತಾಲ್ಲೂಕಿನ ಕಾಟನಾಯಕನಹಳ್ಳಿಯ ರೈತ ಮಹಿಳೆ ವಸಂತಕುಮಾರಿ ಅವರು ಫೇಸ್‌ಬುಕ್‌ ವಿಡಿಯೊ ಮೂಲಕ ತೋಡಿಕೊಂಡಿದ್ದ ಅಳಲಿಗೆ ಮುಖ್ಯಮಂತ್ರಿ ಸ್ಪಂದಿಸಿರುವುದನ್ನು ತಿಳಿದು ಸಂತೋಷವಾಯಿತು.

ಈರುಳ್ಳಿಯನ್ನು ಯಥೇಚ್ಛವಾಗಿ ಬೆಳೆಯುವ ವಿಜಯಪುರ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳ ಸಾವಿರಾರು ರೈತರು ಇಂತಹುದೇ ಸಂಕಷ್ಟ ಅನುಭವಿಸುತ್ತಿದ್ದಾರೆ. ಮುಂಗಾರಿನಲ್ಲಿ ಬೆಳೆದ ಈರುಳ್ಳಿಯು ಕೆಲವೆಡೆ ಮಳೆಯಿಂದ ಕೊಳೆತುಹೋಯಿತು.

ಈ ಬೇಸಿಗೆಯಲ್ಲಿ ಕೊಳವೆಬಾವಿ ನೆಚ್ಚಿಕೊಂಡು ಸಾವಿರಾರು ರೈತರು ಈರುಳ್ಳಿ ಬೆಳೆದಿದ್ದಾರೆ. ಆದರೆ, ಕೊರೊನಾ ಸೃಷ್ಟಿಸಿರುವ ಬಿಕ್ಕಟ್ಟಿನಿಂದಾಗಿ ಚಿಂತಾಕ್ರಾಂತರಾಗಿದ್ದಾರೆ.

ADVERTISEMENT

ಈ ಬಾರಿ ಎಷ್ಟು ರೈತರು ಈರುಳ್ಳಿ ಮಾರಾಟ ಮಾಡಿದ್ದಾರೆ, ಖರೀದಿಸಿದವರು ಯಾರು, ಎಷ್ಟು ಮೊತ್ತಕ್ಕೆ ಎಂಬ ವಿವರವನ್ನು ಸರ್ಕಾರ ಸಾರ್ವತ್ರಿಕವಾಗಿ ಬಹಿರಂಗಪಡಿಸಬೇಕು. ಈರುಳ್ಳಿಗೆ ಸಮಾಧಾನಕರ ಬೆಲೆ ದೊರೆತಿದ್ದರೆ, ಆ ಮಾರಾಟದ ಬಗೆಯನ್ನು ರಾಜ್ಯದ ಎಲ್ಲ ರೈತರ ಬೆಳೆಗೂ ಅನ್ವಯಿಸಬೇಕು. ಆ ಮೂಲಕ ಅವರ ನೆರವಿಗೆ ಧಾವಿಸಬೇಕು.

–ಕೆ.ಮಂಜುನಾಥ, ಮತ್ತಿಹಳ್ಳಿ ಚಂದ್ರಪ್ಪ, ಕೆ.ಕೊಟ್ರೇಶಿ ಚಪ್ಪರದಹಳ್ಳಿ, ಕೊಟ್ಟೂರು

ಸಮಸ್ಯೆ ಬರೀ ಒಬ್ಬರದ್ದಲ್ಲ

ಈರುಳ್ಳಿಗೆ ಸರಿಯಾದ ಬೆಲೆ ಸಿಗದಿದ್ದರಿಂದ ಅನುಭವಿಸಿದ ಕಷ್ಟ ಹೇಳಿಕೊಳ್ಳುವುದರ ಜೊತೆಗೆ ಸರ್ಕಾರಕ್ಕೆ ಪ್ರಶ್ನೆ ಹಾಕಿ ವಿಡಿಯೊ ಹರಿಬಿಟ್ಟ ವಸಂತಕುಮಾರಿ ಅವರಿಗೆ ಸ್ವತಃ ಮುಖ್ಯಮಂತ್ರಿ ಅವರೇ ಸ್ಪಂದಿಸಿರುವುದು ಸಂತಸದ ವಿಷಯ. ಆದರೆ ಈ ಸಮಸ್ಯೆ ಬರೀ ಒಬ್ಬರದ್ದಲ್ಲ. ಬಹುಪಾಲು ರೈತರದು ಇದೇ ಪರಿಸ್ಥಿತಿ.

ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸರಿಯಾದ ‌‌‌ಬೆಲೆ ದೊರೆಯುತ್ತಿಲ್ಲ. ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಸರ್ಕಾರ ಎಲ್ಲ ಜಿಲ್ಲೆಗಳನ್ನೂ ಗಣನೆಗೆ ತೆಗೆದುಕೊಂಡು ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಮುಖಾಂತರ ವಿವರ ಪಡೆದು ರೈತರ ಸಮಸ್ಯೆ ಬಗೆಹರಿಸಬೇಕು. ಎಲ್ಲರೂ ವಿಡಿಯೊ ಮಾಡಿ ಸಮಸ್ಯೆ ಹೇಳಿಕೊಳ್ಳುವುದಿಲ್ಲ ಅಲ್ಲವೇ? ಸರ್ಕಾರವೇ ನಿಗದಿತ ಬೆಲೆ ನೀಡಿ ಖರೀದಿಸಿದರೆ ಉತ್ತಮ.

-ಚೆಲುವರಾಜು ಕೆ., ಧನಗೆರೆ, ಕೊಳ್ಳೇಗಾಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.