ಅನುದಾನ (ಸಾಂರ್ಭಿಕ ಚಿತ್ರ)
– ಐಸ್ಟಾಕ್ ಚಿತ್ರ
ಕೇಂದ್ರ ಸರ್ಕಾರ ‘ಮನರೇಗಾ’ ಯೋಜನೆಯ ಹೆಸರನ್ನು ಬದಲಾವಣೆ ಮಾಡುವುದಾದರೆ ಮಾಡಲಿ. ಆದರೆ ಅದರ ಅನುದಾನದ ಶೇ 40ರಷ್ಟನ್ನು ರಾಜ್ಯ ಸರ್ಕಾರಗಳ ಮೇಲೆ ಹೇರುತ್ತಿರುವುದು ಒಕ್ಕೂಟ ತತ್ತ್ವಕ್ಕೆ ಬಿದ್ದ ದೊಡ್ಡ ಪೆಟ್ಟು. ತೀವ್ರತರನಾದ ವಿತ್ತೀಯ ಬಿಕ್ಕಟ್ಟನ್ನು ಎದುರಿಸುತ್ತಿರುವ ಅನೇಕ ರಾಜ್ಯಗಳ ಹಣಕಾಸು ಸ್ಥಿತಿಯು ಇದರಿಂದ ಬಿಗಡಾಯಿಸುತ್ತದೆ. ಎನ್‌ಡಿಎ ಸರ್ಕಾರವು 2014ರಿಂದಲೂ ‘ಮನರೇಗಾ’ದ ಬಗ್ಗೆ ಅಸಹಕಾರದ ಧೋರಣೆ ತಳೆಯುತ್ತಾ ಬಂದಿದೆ ಮತ್ತು ಅನುದಾನವನ್ನು ವರ್ಷದಿಂದ ವರ್ಷಕ್ಕೆ ಕಡಿತ ಮಾಡುತ್ತಾ ಬರುತ್ತಿದೆ. ಇದೀಗ ಅದನ್ನು ಅಪ್ರಸ್ತುತಗೊಳಿಸುವ ಕೆಲಸವನ್ನು ಮಾಡುತ್ತಿದೆ. ಒಕ್ಕೂಟ ತತ್ತ್ವಕ್ಕೆ ಮತ್ತು ಗ್ರಾಮೀಣ ಅಸಂಘಟಿತ ಕೂಲಿಕಾರರ ಹಿತಾಸಕ್ತಿಗೆ ವಿರುದ್ಧವಾದ ಕೇಂದ್ರ ಸರ್ಕಾರದ ಕ್ರಮವನ್ನು ತೀವ್ರವಾಗಿ ವಿರೋಧಿಸಬೇಕಾಗಿದೆ.
-ಟಿ.ಆರ್. ಚಂದ್ರಶೇಖರ, ಬೆಂಗಳೂರು
****
ಕನ್ನಡ ಸಿನಿಮಾ: ಶೀರ್ಷಿಕೆಗಳಿಗೆ ಬರವೆ?
‘ಕುಡುಕ ನನ್ಮಕ್ಳು’ ಹೆಸರಿನ ಕನ್ನಡ ಸಿನಿಮಾ ಸೆಟ್ಟೇರಿದ ಬಗ್ಗೆ ವರದಿಯಾಗಿದೆ (ಪ್ರ.ವಾ., ಡಿ. 16). ಯಾವುದೇ ಒಂದು ಊರಿನ, ವ್ಯಕ್ತಿಯ, ಪುಸ್ತಕದ ಹಾಗೂ ಕಟ್ಟಡದ ಹೆಸರು ಕೇಳಲು ಹಿತವಾಗಿದ್ದರೆ, ಅದರ ಬಗ್ಗೆ ಅಕ್ಕರೆ ಹುಟ್ಟೀತು. ಕಿವಿಯಲ್ಲಿ ಕೇಳಿಸಿಕೊಳ್ಳುವುದಕ್ಕೆ ಮತ್ತು ಬೇರೆಯವರಿಗೆ ಹೇಳುವುದಕ್ಕೆ ಮುಜುಗರ ಆಗುವಂಥ ಹೆಸರನ್ನೋ, ಶೀರ್ಷಿಕೆಯನ್ನೋ ಇಟ್ಟರೆ, ಆ ಕಲಾಕೃತಿಯ ಬಗ್ಗೆ ಸದಭಿಪ್ರಾಯ ಮೂಡುವುದಾದರೂ ಹೇಗೆ?
ಇತ್ತೀಚೆಗೆ ಕನ್ನಡ ಸಿನಿಮಾಗಳಿಗೆ ಇಂಗ್ಲಿಷ್ ಶೀರ್ಷಿಕೆ ಇಡುವುದು ಖಯಾಲಿಯಾಗಿದೆ. ಕ್ಲಾಸ್ ಆಫ್ ಮೈಸೂರ್, ಫಸ್ಟ್ ಸ್ಯಾಲರಿ, ಡ್ರ್ಯಾಗನ್, ದಿ ಟಾಸ್ಕ್, ಮಾರ್ಕ್, ಐ ಆಮ್ ಗಾಡ್, ಫ್ಲರ್ಟ್, ರಿವಾಲ್ವರ್ ರೀಟಾ, ಡೆವಿಲ್, ಗ್ರೀನ್, ರೌಡಿ ಬಾಯ್ – ಹೀಗೆ ಹತ್ತಾರು ಸಿನಿಮಾಗಳ ಹೆಸರನ್ನು ಹೇಳಬಹುದು. ಅಲ್ಲೊಂದು ಇಲ್ಲೊಂದು ಕನ್ನಡ ಹೆಸರಿನ ಸಿನಿಮಾಗಳೂ ಬರುತ್ತಿವೆಯಾದರೂ ಅವುಗಳ ಹೆಸರು ಗಟ್ಟಿಯಾಗಿ ಹೇಳುವುದಕ್ಕೆ ಹಿಂಜರಿಕೆಯಾಗುತ್ತದೆ. ಕನ್ನಡದಲ್ಲಿ ಸೊಗಸಾದ ಶೀರ್ಷಿಕೆಗಳಿಗೆ ಬರವಿಲ್ಲ ಎಂಬುದು ಹಳೆ ಕನ್ನಡ ಸಿನಿಮಾಗಳ ಪಟ್ಟಿಯನ್ನು ನೋಡಿದ ಯಾರಿಗಾದರೂ ವೇದ್ಯವಾಗದಿರದು.
-ಸಿ. ಚಿಕ್ಕತಿಮ್ಮಯ್ಯ, ಹಂದನಕೆರೆ
****
ಮೆಸ್ಸಿ ಬಂದಾಯ್ತು... ಮಸಿ ತೊಳೆದಾಯ್ತು!
ದಾವಣಗೆರೆಯ ಗುಂಡಿ ವೃತ್ತದಲ್ಲಿ ಫುಟ್‌ಬಾಲ್ ಪ್ರತಿಕೃತಿಯನ್ನು ಇಡಲಾಗಿದೆ. ನಾನು ಕಂಡಂತೆ ದಾವಣಗೆರೆಯ ರಾಜಕೀಯ ಬಣ್ಣ ಬದಲಾದಂತೆ ಫುಟ್‌ಬಾಲ್ ಪ್ರತಿಕೃತಿಯ ಬಣ್ಣವೂ ಆಗಾಗ ಬದಲಾವಣೆ ಆಗುತ್ತಿದೆ. ಕಳೆದ ನಾಲ್ಕೈದು ವರ್ಷಗಳಿಂದ ವಾಹನಗಳ ಸಂಚಾರದಿಂದಾಗಿ ಕಪ್ಪು ಮಸಿ ಚೆಂಡಿನ ಪ್ರತಿಕೃತಿಯ ಮೇಲೆ ಅಲ್ಲಲ್ಲಿ ಕೂತು, ಚೆಂಡು ವಿರೂಪಗೊಂಡಿತ್ತು. ವಿಶ್ವದ ಖ್ಯಾತ ಫುಟ್‌ಬಾಲ್ ಆಟಗಾರ ಅಂರ್ಜೆಟೀನಾದ ಲಯೊನೆಲ್ ಮೆಸ್ಸಿ ಭಾರತದ ಪ್ರವಾಸಕ್ಕೆ ಬರುತ್ತಿದ್ದಂತೆ, ಫುಟ್‌ಬಾಲ್ ಭಾಗ್ಯವೂ ಬದಲಾಗಿದೆ; ಮಸಿ ತೊಳೆದುಕೊಂಡು ಆಕರ್ಷಕವಾಗಿದೆ. ಮೆಸ್ಸಿ... ಮೆಸ್ಸಿ... ಬಂದಾಯ್ತು... ನಮ್ಮೂರ ಫುಟ್ಬಾಲ್ ಮಸಿ ಶುಭ್ರವಾಯ್ತು!
-ರಘುನಾಥರಾವ್ ತಾಪ್ಸೆ, ದಾವಣಗೆರೆ
****
ನೇಪಥ್ಯಕ್ಕೆ ಮಹಾತ್ಮ: ವಿಷಾದದ ಸಂಗತಿ
‘ರಾಷ್ಟ್ರಕ್ಕಾಗಿ ಹುತಾತ್ಮರಾದವರಿಗೆ ಉಳಿಗಾಲವಿಲ್ಲ’ ಎನ್ನುವುದು ‘ಮನರೇಗಾ’ ಯೋಜನೆ ಸಂದರ್ಭದಲ್ಲೂ ನಿಜವಾಗಿದೆ. ‘ವಿಬಿ–ಜಿ ರಾಮ್ ಜಿ’ ಯೋಜನೆ ಮೂಲಕ ಮಹಾತ್ಮಾರನ್ನು ಪಕ್ಕಕ್ಕೆ ಸರಿಸಲಾಗುತ್ತಿದೆ. ಇದು ಅತ್ಯಂತ ದುರದೃಷ್ಟಕರ ಹಾಗೂ ನೋವಿನ ಸಂಗತಿ.
-ಪುಟ್ಟಮಾದಯ್ಯ ಎಚ್.ಎಂ., ಮೈಸೂರು
****
ಸಾಮಾನ್ಯ ಪ್ರಯಾಣಿಕರ ಲೆಕ್ಕಿಸೋರಾರು?
ವಾಯುಯಾನ ಕ್ಷೇತ್ರದಲ್ಲಿ ಇಂಡಿಗೋ ವಿಮಾನ ಸಂಸ್ಥೆ ಉಂಟುಮಾಡಿದ ಬಿಕ್ಕಟ್ಟು ಇನ್ನೂ ಪೂರ್ಣವಾಗಿ ಬಗೆಹರಿದಂತಿಲ್ಲ. ವಿಮಾನ ನಿಲ್ದಾಣಗಳಲ್ಲಿ ದೇಶದ ಕೆಲವೇ ಕೆಲವರು ಕಾಯುವಂತಾದುದು, ಮೂಲ ಸೌಕರ್ಯಗಳ ಕೊರತೆಯಿಂದ ಒದ್ದಾಡಿದ್ದು, ದೇಶದ ಗಮನಸೆಳೆವ ಸುದ್ದಿಯಾಯಿತು. ಆದರೆ, ಅಸಂಖ್ಯಾತ ಜನಸಾಮಾನ್ಯರು ಪ್ರತಿ ದಿನವೂ ತಡವಾಗಿ ಬರುವ ರೈಲು–ಬಸ್ಸುಗಳಲ್ಲಿ ಜಾಗ ಸಿಗದೆ ನರಳುತ್ತಾ ಪ್ರಯಾಣಿಸುತ್ತಲೇ ಇದ್ದಾರೆ. ಇಂತಹ ಬಡ ವರ್ಗದ ಜನರ ಬಗ್ಗೆ ಯಾಕೆ ಚರ್ಚೆಯಾಗುವುದಿಲ್ಲ?
-ನಾಗಾರ್ಜುನ ಹೊಸಮನಿ, ಕಲಬುರಗಿ.
****
ಭಾಷೆ–ಚಿಂತನೆ ದೂರವಾದರೆ ಕತ್ತಲೇ ಗತಿ
ಪುರುಷೋತ್ತಮ ಬಿಳಿಮಲೆ ಅವರ ‘ಸಾವಿನತ್ತ ಭಾಷೆ–ತತ್ತ್ವಶಾಸ್ತ್ರ?’ ವಿಶ್ಲೇಷಣೆ
(ಪ್ರ.ವಾ., ಡಿ. 16) ಚಿಂತನಾರ್ಹ. ಭಾಷೆ ಮತ್ತು ಚಿಂತನೆಯನ್ನು ಕಳೆದುಕೊಂಡರೆ ನಾವು ಮನುಷ್ಯರಾಗಿ ಉಳಿಯುವುದಾದರೂ ಹೇಗೆ? ಯಾಂತ್ರಿಕ ಜೀವನ ಯಾರಿಗೆ ಸಹನೀಯ? ಈ ಕುರಿತು ಜನ ಗಂಭೀರವಾಗಿ ಯೋಚಿಸಬೇಕಿದೆ. ಈ ದಿಸೆಯಲ್ಲಿ ನಮ್ಮ ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳು ಕಾರ್ಯ ತತ್ಪರವಾಗಬಲ್ಲವೆ?
-ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.