ADVERTISEMENT

ವಾಚಕರ ವಾಣಿ: ಮೇಧಾವಿಯೋ? ಸ್ವಜನಪಕ್ಷಪಾತಿಯೋ?

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 16:56 IST
Last Updated 4 ಜನವರಿ 2021, 16:56 IST

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಸಲಹೆಗಾರರೂ ಆಗಿರುವ ಅವರ ಅಳಿಯ ಜರೇಡ್‌ ಕುಶ್ನರ್‌ ಅವರ ಕುರಿತ ಸುಧೀಂದ್ರ ಬುಧ್ಯ ಅವರ ಲೇಖನ (ಪ್ರ.ವಾ., ಜ. 2) ಉತ್ಪ್ರೇಕ್ಷೆಗಳಿಂದ ಕೂಡಿದೆ. ಟ್ರಂಪ್ ಅಧಿಕಾರಾವಧಿಯು ಇಸ್ರೇಲ್ ಪಾಲಿಗೆ ನಿಸ್ಸಂಶಯವಾಗಿ ಹರ್ಷದಾಯಕವಾಗಿತ್ತು. ಆದರೆ ಈ ಅವಧಿಯಲ್ಲಿ ಪ್ಯಾಲೆಸ್ಟೀನ್‌ ಮತ್ತು ಇಸ್ರೇಲ್ ನಡುವಿನ ಶಾಂತಿ ಮಾತುಕತೆ ಅಮೆರಿಕದ ಪಕ್ಷಪಾತಿ ನಿಲುವಿನಿಂದಾಗಿ ಪ್ರಗತಿ ಕಾಣಲಿಲ್ಲ. ಅಷ್ಟೇ ಏಕೆ, ಟ್ರಂಪ್ ಆಡಳಿತವು ಪ್ಯಾಲೆಸ್ಟೀನೀಯರನ್ನು ಉದ್ದೇಶಪೂರ್ವಕವಾಗಿ ದುರ್ಬಲರನ್ನಾಗಿಸಿ ಇತರ ಅರಬ್ಬರಿಂದ ಅವರನ್ನು ಪ್ರತ್ಯೇಕಿಸಲು ಯತ್ನಿಸಿತು. ಹಾಗೆಯೇ ಅಮೆರಿಕದ ಮಧ್ಯಸ್ಥಿಕೆಯಲ್ಲಿ ತೀರ್ಮಾನವಾದ ಇಸ್ರೇಲ್, ಯುಎಇ ಮತ್ತು ಬಹರೇನ್ ನಡುವಿನ ‘ಅಬ್ರಹಾಂ ಒಪ್ಪಂದ’ಗಳು ಈ ಹಿಂದಿನ ಇಸ್ರೇಲ್, ಈಜಿಪ್ಟ್ ಶಾಂತಿ ಸಂಧಾನ ಮತ್ತು ಓಸ್ಲೋ ಒಪ್ಪಂದಗಳಿಗೆ ಹೋಲಿಸಿದರೆ ಶಾಂತಿ ಸ್ಥಾಪಿಸುವ ನಿಟ್ಟಿನಿಂದ ಅಷ್ಟೇನೂ ಮಹತ್ವದವಲ್ಲ.

ಕುಶ್ನರ್‌ ಅವರ ಮಧ್ಯಪ್ರಾಚ್ಯ ನೀತಿ, ಕನಿಷ್ಠಪಕ್ಷ ಇಸ್ರೇಲ್‌ಗೆ ಸಮಾಧಾನ ತಂದಿರಬಹುದು. ಆದರೆ ಅಧ್ಯಕ್ಷರ ಹಿರಿಯ ಸಲಹೆಗಾರರಾಗಿ ಕೋವಿಡ್- 19 ನಿಯಂತ್ರಣದಲ್ಲಿ ಅವರು ನಿರ್ವಹಿಸಿದ ಕಾರ್ಯ ಯಾರಿಗೂ ಸಮಾಧಾನ ತರಲಿಲ್ಲ. ಅಪರಾಧಿಯಾಗಿ ಜೈಲುವಾಸ ಅನುಭವಿಸಿದ್ದ ಇವರ ತಂದೆಗೆ ಟ್ರಂಪ್ ತಮ್ಮ ಅಧಿಕಾರ ಬಳಸಿ ಕ್ಷಮಾಪಣೆ ನೀಡಿದ್ದು ಸಹ ವಿವಾದಕ್ಕೆ ಕಾರಣವಾಯಿತು. ಕುಶ್ನರ್ ಮಧ್ಯಪ್ರಾಚ್ಯದಲ್ಲಿ ಬದಲಾವಣೆ ತಂದ ಮೇಧಾವಿಯೋ ಅಥವಾ ಸ್ವಜನಪಕ್ಷಪಾತಕ್ಕೆ ಉದಾಹರಣೆಯೋ ಎಂಬುದನ್ನು ಕಾಲವೇ ನಿರ್ಧರಿಸುವುದು.

–ಸುನೀಲ ನಾಯಕ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.