ADVERTISEMENT

ವಾಚಕರ ವಾಣಿ: ಓದುಗರ ಪತ್ರಗಳು- 11 ಸೆಪ್ಟೆಂಬರ್ 2025

ವಾಚಕರ ವಾಣಿ
Published 11 ಅಕ್ಟೋಬರ್ 2025, 0:26 IST
Last Updated 11 ಅಕ್ಟೋಬರ್ 2025, 0:26 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ವಿದೇಶಗಳಲ್ಲಿ ನೌಕರಿ: ಎಚ್ಚರಿಕೆ ಇರಲಿ

ಇಸ್ರೇಲ್‌ನ ಮಂತ್ರಿಮಂಡಲವು ಡೊನಾಲ್ಡ್‌ ಟ್ರಂಪ್ ಸೂಚಿತ ಶಾಂತಿ ಸೂತ್ರ‌ಕ್ಕೆ ಒಪ್ಪಿಗೆ ನೀಡಿದೆ. ಆ ಮೂಲಕ ಎರಡು ವರ್ಷಗಳಿಂದ ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ‘ಸಮರ’ ಕೊನೆಗೊಳ್ಳುವ ಆಶಾಭಾವ ಮೂಡಿದೆ. ಕರ್ನಾಟಕದಿಂದ ಹಲವಾರು ಉದ್ಯೋಗಾಕಾಂಕ್ಷಿಗಳು ಇಸ್ರೇಲ್‌ಗೆ ಹೋಗಬಯಸಿ ಕಾಯುತ್ತಿದ್ದಾರೆಂಬ ಮಾಹಿತಿಯಿದೆ. ಅಮೆರಿಕ, ಕೆನಡಾ, ಇಂಗ್ಲೆಂಡ್‌ನಲ್ಲಿ ಭಾರತೀಯರಿಗೆ ಈಗ ಪ್ರತಿಕೂಲ‌ ಪರಿಸ್ಥಿತಿಯಿದೆ. ಇಸ್ರೇಲ್‌ಗೆ ಹೋಗಬಯಸುವವರ ವಿಷಯದಲ್ಲಿ ಕೇಂದ್ರ ಸರ್ಕಾರವಷ್ಟೇ ಅಲ್ಲ, ರಾಜ್ಯ ಸರ್ಕಾರವೂ ಕೆಲವು ಎಚ್ಚರಿಕೆಯ ಕ್ರಮಗಳನ್ನು ಸಮನ್ವಯದಿಂದ ಕೈಗೊಳ್ಳಬೇಕಿದೆ. ಯುದ್ಧ ಅಥವಾ ಆಂತರಿಕ ಸಂಘರ್ಷ ಇರುವ ದೇಶಗಳಲ್ಲಿ ಭಾರತೀಯರು ತೊಂದರೆಗೆ ಸಿಲುಕಿದಾಗ, ಅವರನ್ನು ವಾಪಸು ಕರೆತರಲು ಪಟ್ಟ ಶ್ರಮ ನೆನಪಿನಲ್ಲಿ ಇರಲಿ.

- ಎಚ್.ಎಸ್. ಮಂಜುನಾಥ, ಗೌರಿಬಿದನೂರು

ADVERTISEMENT

ಜೀವಪರ ಆಲೋಚನೆಗಳು ಹೆಚ್ಚಾಗಲಿ

ಹಗಲಿರುಳು ಕುಟುಂಬಕ್ಕಾಗಿ ಸಮಯ ಮೀಸಲಿಡುವ ಮಹಿಳಾ ಉದ್ಯೋಗಿಗಳ ಆರೋಗ್ಯದ ದೃಷ್ಟಿಯಿಂದ ‘ಒಂದು ದಿನದ ವೇತನಸಹಿತ ಋತುಚಕ್ರ ರಜೆ’ ಘೋಷಿಸಲಾಗಿದೆ. ಇದು ಜೀವಪರ ಮತ್ತು ಮಾನವೀಯ ಆಲೋಚನೆ ಎಂದು ಹೇಳಬಹುದು. ಸರ್ಕಾರದ ಈ ತೀರ್ಮಾನಕ್ಕೆ ರಾಜ್ಯದ ಎಲ್ಲ ಉದ್ಯೋಗಸ್ಥ ಮಹಿಳೆಯರ ಪರವಾಗಿ ಅನಂತ ಧನ್ಯವಾದಗಳು. ಋತುಚಕ್ರದ ಅವಧಿಯಲ್ಲಿ ಮಹಿಳೆ ಮಾನಸಿಕ ಮತ್ತು ಶಾರೀರಿಕ ಬದಲಾವಣೆಯ ಸಂಕಷ್ಟಕ್ಕೆ ಒಳಗಾಗುತ್ತಾಳೆ. ಆದರೆ, ಮುಟ್ಟಿನ ಸಮಯದಲ್ಲಿ ರಜೆ ತೆಗೆದುಕೊಳ್ಳುವುದು ಎಲ್ಲಾ ಉದ್ಯೋಗಸ್ಥ ಮಹಿಳೆಯರಿಗೂ ಸುಲಭವಾಗಿರಲಿಲ್ಲ. ಸರ್ಕಾರ ಇಂತಹ ಸಮಯದಲ್ಲಿ ‘ರಜೆ ನಮ್ಮ ಹಕ್ಕು’ ಎಂದು ಘೋಷಿಸಿದೆ. ಸರ್ಕಾರದ ಜೀವಪರ ಆಲೋಚನೆಗಳು ಮತ್ತು ಮಹಿಳಾಪರ ಯೋಜನೆಗಳು ಇನ್ನೂ ಹೆಚ್ಚಾಗಲಿ.

- ನಿರ್ಮಲ ನಾಗೇಶ್, ಕಲಬುರಗಿ

ಅಧಿಕಾರ ದಾಹ ಮತ್ತು ಧರ್ಮ ಸಂಘರ್ಷ

ಸಂವಿಧಾನದ ಬಲದಿಂದ ನಾವು ದೇಶದಲ್ಲಿ ಜಾತಿ ನಿರ್ಮೂಲನೆಯ ಅಂಚಿನಲ್ಲಿದ್ದೇ ವೆಂದು ಭಾವಿಸಿದ್ದೆವು. ಆದರೆ, ಈಗ ಅಧಿಕಾರದ ದಾಹದಿಂದಾಗಿ ರಾಜಕೀಯ ಪಕ್ಷಗಳು ಧರ್ಮದ ಹೆಸರಿನಡಿ ಜನರ ನಡುವೆ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸುತ್ತಿವೆ. ಇದು ಹೀಗೆಯೇ ಮುಂದುವರಿದರೆ, ದೇಶದಲ್ಲಿ ಧರ್ಮ ಧರ್ಮಗಳ ನಡುವೆ ಘೋರ ಸಂಘರ್ಷಕ್ಕೆ ಕಾರಣ ಆಗಬಹುದು. ರಾಜಕೀಯ ನೇತಾರರು ದ್ವೇಷ ಬದಿಗಿಟ್ಟು ಶಾಂತಿ, ಸಮಾನತೆಗಾಗಿ ಶ್ರಮಿಸಿದರಷ್ಟೇ ದೇಶದ ಅಭಿವೃದ್ಧಿ ಸಾಧ್ಯ.

- ಆಂಜನೇಯ ಯರಮರಸ್, ರಾಯಚೂರು

ಮೃಗೀಯ ನಡವಳಿಕೆಗೆ ತಕ್ಕ ಶಿಕ್ಷೆ ಆಗಲಿ

ದಾಂಪತ್ಯ ಕಲಹದಿಂದಾಗಿ ಗಾಢನಿದ್ದೆಯಲ್ಲಿದ್ದ ಪತಿಯ ಮೇಲೆ ಪತ್ನಿಯು ಕುದಿಯುತ್ತಿದ್ದ ಎಣ್ಣೆ ಸುರಿದ ಸುದ್ದಿ ಓದಿ ನೋವಾಯಿತು. ನರಕದಲ್ಲಿ ಪಾಪಿಗಳಿಗೆ ಕಾದ ಎಣ್ಣೆ ಕಡಾಯಿಗಳಲ್ಲಿ ಮುಳುಗಿಸುವ ಶಿಕ್ಷೆ ನೀಡುತ್ತಾರೆಂದು ಕಥೆಗಳಲ್ಲಿ ಓದಿದ್ದು ನೆನಪಿಗೆ ಬಂತು. ಸಂತ್ರಸ್ತ ವ್ಯಕ್ತಿ ಆ ಕ್ಷಣದಲ್ಲಿ ಎಷ್ಟೊಂದು ಘೋರ ನೋವು

ಅನುಭವಿಸಿರಬಹುದೆನ್ನುವ ಕಲ್ಪನೆಯಿಂದಲೇ ಮನಸ್ಸಿಗೆ ತುಂಬಾ ಬೇಸರವಾಯಿತು. ಮಾರಣಾಂತಿಕ ಹಿಂಸೆ ಅತ್ಯಂತ ಘೋರ. ಅಂತಹ ಉಗ್ರ ಶಿಕ್ಷೆ ನೀಡಿದ ಪತ್ನಿಗೆ ಕಾನೂನುರೀತ್ಯ ಶಿಕ್ಷೆ ವಿಧಿಸಬೇಕಿದೆ. ಮಾನವನಲ್ಲಿ ಎಂತಹ ಕ್ರೌರ್ಯ, ಮೃಗೀಯತೆ ಅಡಗಿದೆ ಎನ್ನುವುದಕ್ಕೆ ಈ ಘಟನೆ ನಿದರ್ಶನ.

- ಎಲ್. ಚಿನ್ನಪ್ಪ, ಬೆಂಗಳೂರು

ಅರ್ಹರಿಗೆ ಸಂದ ನೊಬೆಲ್ ಶಾಂತಿ ಪ್ರಶಸ್ತಿ

ವೆನಿಜುವೆಲಾದ ರಾಜಕಾರಣಿ ಮಾರಿಯಾ ಕೊರಿನಾ ಮಚಾದೊ ಅವರಿಗೆ ನೊಬೆಲ್‌ ಶಾಂತಿ ಪ್ರಶಸ್ತಿ ಸಂದಿದೆ. ನೊಬೆಲ್ ಶಾಂತಿ ಪ್ರಶಸ್ತಿಗಾಗಿ ಹಪಹಪಿಸುತ್ತಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಭಾರಿ ನಿರಾಸೆಯಾಗಿರುವುದು ದಿಟ.

- ಎಂ. ಪರಮೇಶ್ವರ, ಹಿರಿಯೂರು

ದಪ್ಪ ಚರ್ಮದ ಬಂದಿಖಾನೆ ಇಲಾಖೆ

ನಟ ದರ್ಶನ್‌ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್ ವಿಚಾರಣಾಧೀನ ಕೈದಿಗಳಿಗೆ ಜೈಲಿನ ನಿಯಮಾನುಸಾರ ಕನಿಷ್ಠ ಸೌಲಭ್ಯಗಳನ್ನಷ್ಟೇ ನೀಡಬೇಕು. ಹೆಚ್ಚಿನ ಸೌಲಭ್ಯ ನೀಡಿದರೆ ಸಂಬಂಧಿಸಿದ ಅಧಿಕಾರಿಗಳೇ ನೇರ ಹೊಣೆಗಾರರೆಂದು ಎಚ್ಚರಿಕೆ ನೀಡಿತ್ತು. ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ರಾಜ್ಯಗಳ ಕಾರಾಗೃಹಗಳಿಗೆ ಸುತ್ತೋಲೆ ಕಳುಹಿಸಲು ನಿರ್ದೇಶಿಸಿತ್ತು. ಈ ಆದೇಶದ ನಡುವೆಯೂ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರೌಡಿಶೀಟರ್ ಹಾಗೂ ಆತನ ಸಹಚರರು ಹುಟ್ಟುಹಬ್ಬ ಆಚರಿಸಿಕೊಂಡಿರುವುದು ವರದಿಯಾಗಿದೆ. ಇದು ನ್ಯಾಯಾಲಯ ಆದೇಶದ ಸ್ಪಷ್ಟ ಉಲ್ಲಂಘನೆ. ಜೈಲಿನ ಅಧಿಕಾರಿಗಳಿಗೆ, ಅಲ್ಲಿನ ವ್ಯವಸ್ಥೆ ಬಗ್ಗೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದ ನಂತರವೂ ರಾಜ್ಯ ಬಂದೀಖಾನೆ ಇಲಾಖೆಯು ಮೈಮರೆತಿರುವುದು ಸೋಜಿಗ.

- ಚಂದ್ರಕುಮಾರ್ ಡಿ., ‌ಬೆಂಗಳೂರು

ಹೀಗೊಂದು ಆಸೆ ಈಡೇರುವುದೇ?

ನನಗೊಂದು ಆಸೆ ಇದೆ. ಒಂದು ಸಲವಾದರೂ ಬೆಂಗಳೂರಿನಲ್ಲಿ, ನಿಲುಗಡೆ ಸ್ಥಳದಲ್ಲಿಯೇ ನಿಂತ ಬಿಎಂಟಿಸಿ ಬಸ್ ಹತ್ತಿ, ಸೀಟು ದೊರಕಿಸಿಕೊಂಡು, ನಿರ್ವಾಹಕನಿಂದ ತಕರಾರಿಲ್ಲದೆ ಅಗತ್ಯ ಚಿಲ್ಲರೆ ಪಡೆದುಕೊಂಡು, ಗುಂಡಿಗಳಿಲ್ಲದ ರಸ್ತೆಯಲ್ಲಿ ಪ್ರಯಾಣಿಸಿ, ರಸ್ತೆಯ ಮಧ್ಯೆಯೋ ಇನ್ನೆಲ್ಲೋ ಅಲ್ಲದೆ ನಿಲುಗಡೆ ಸ್ಥಳದಲ್ಲೇ ಇಳಿಯಬೇಕು ಎಂಬುದೇ ಆ ಆಸೆ. ಇಂಥ ಭಾರಿ ಆಸೆಯನ್ನು ಬಹುಶಃ ಆ ಭಗವಂತನೂ ಈಡೇರಿಸಲಾರನೇನೋ!

-ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.