ವಾಚಕರ ವಾಣಿ
ಪ್ರಾಧಿಕಾರದ ಅಧ್ಯಕ್ಷರ ನಿಲುವು ಪ್ರಶ್ನಾರ್ಹ
ರಾಜ್ಯ ಸರ್ಕಾರ ಒಂದು ಸಾವಿರ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳನ್ನು ತೆರೆಯುತ್ತಿರು ವುದು ಸಾಮಾಜಿಕ ಬದ್ಧತೆಯ ನಿದರ್ಶನವೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೇ ಹೇಳಿರುವುದು ಆಘಾತಕಾರಿ ಹಾಗೂ ಖಂಡನೀಯ. ಇದು ಗಾಂಧೀಜಿ, ಟ್ಯಾಗೋರ್, ಕುವೆಂಪು, ಎಂ. ಚಿದಾನಂದಮೂರ್ತಿ, ಯು.ಆರ್. ಅನಂತಮೂರ್ತಿ, ಎಸ್.ಎಲ್. ಭೈರಪ್ಪ, ದೇವನೂರ ಮಹಾದೇವ ಮುಂತಾದವರ ಜನಪರ ಭಾಷಾ ಚಿಂತನೆಗಳಿಗೆ ತದ್ವಿರುದ್ಧದ ಧೋರಣೆ. ಅದರಲ್ಲೂ ಕುವೆಂಪುರವರ ‘ಪಂಪನಿಲ್ಲಿ ಮುಖ್ಯಮಂತ್ರಿ, ನೃಪತುಂಗನೆ ಚಕ್ರವರ್ತಿ’ ಎನ್ನುವ ಮಾತನ್ನು ಅಣಕಿಸುವಂತೆ ನಿಲುವು ತಾಳಿರುವುದು ಪ್ರಶ್ನಾರ್ಹ.
‘ವಿಶ್ವ ಮಾತೃಭಾಷಾ ದಿನ’ದ (ಫೆ. 21) ಹೊಸ್ತಿಲಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಮುಖ್ಯಮಂತ್ರಿಗೆ ಉಘೇ... ಉಘೇ... ಎಂದಿರುವುದು ಕ್ರೂರ ವ್ಯಂಗ್ಯ. ಕೆಪಿಎಸ್ ಎಂದರೆ ಬೇರೇನೂ ಅಲ್ಲ, ಸರ್ಕಾರವೇ ಇಂಗ್ಲಿಷ್ ಮಾಧ್ಯಮ ಶಾಲೆ ತೆರೆಯುವುದಾಗಿದೆ. ಪ್ರಾಧಿಕಾರದ ಮೂಲ ಉದ್ದೇಶವೇ ಕನ್ನಡದ ಹಿತಕಾಯುವುದಲ್ಲವೇ? ಸರ್ಕಾರದ ನಡೆ ಕನ್ನಡಮಾಧ್ಯಮಕ್ಕೆ ಮರಣಶಾಸನವೇ ಸರಿ. ವಾಸ್ತವವಾಗಿ, ಬಿಳಿಮಲೆಯವರು ಇದನ್ನು ಖಂಡತುಂಡವಾಗಿ ವಿರೋಧಿಸಿ, ಕನ್ನಡಪರ ಆಂದೋಲನಕ್ಕೆ ಮುನ್ನುಡಿ ಬರೆಯಬೇಕಿತ್ತು. ಆದರೆ, ಅವರಿಂದಲೇ ರಾಜಸೇವಾ ಸಕ್ತಿಯ ಪ್ರದರ್ಶನವಾಗುತ್ತಿರುವುದು ಕುಚೋದ್ಯ.
-ರಾ.ನಂ. ಚಂದ್ರಶೇಖರ, ಬಿ.ಎಸ್. ಜಯಪ್ರಕಾಶ ನಾರಾಯಣ, ಬೆಂಗಳೂರು
ಮೃತ್ಯು ಗುಂಡಿಗೆ ಪ್ಲಾಸ್ಟಿಕ್ ರಸ್ತೆ ಪರಿಹಾರ
ಬೆಂಗಳೂರಿನಲ್ಲಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ಸ್ಕೂಟರ್‌ಗೆ ಕಾರು ಡಿಕ್ಕಿ ಹೊಡೆ
ದಿದ್ದು, ಕೆಳಗೆ ಬಿದ್ದ ಎರಡು ವರ್ಷದ ಮಗು ಸಾವು ಕಂಡಿದೆ. ಈ ದುರ್ಘಟನೆಯು ರಾಜ್ಯದಲ್ಲಿರುವ ರಸ್ತೆಗಳು ಎಷ್ಟು ಅಪಾಯಕಾರಿಯಾಗಿವೆ ಎಂಬುದಕ್ಕೆ ನಿದರ್ಶನ. ಅದರಲ್ಲೂ ಗ್ರಾಮೀಣ ರಸ್ತೆಗಳ ಸ್ಥಿತಿಯನ್ನು ಕೇಳುವವರಿಲ್ಲದಂತಾಗಿದೆ. ಪ್ಲಾಸ್ಟಿಕ್ ರಸ್ತೆ ನಿರ್ಮಿಸುವುದೇ ಇದಕ್ಕೆ ಪರಿಹಾರ. ಈಗಾಗಲೇ ತಮಿಳುನಾಡಿನಲ್ಲಿ
ಪ್ರೊ. ವಾಸುದೇವನ್ ಅವರ ಪ್ಲಾಸ್ಟಿಕ್ ರಸ್ತೆಗಳ ತಂತ್ರಜ್ಞಾನವನ್ನು ಅನುಸರಿಸಲಾಗು ತ್ತಿದೆ. ರಾಜ್ಯದಲ್ಲಿಯೂ ಪ್ಲಾಸ್ಟಿಕ್ ರಸ್ತೆ ಮಾಡುವತ್ತ ಯೋಚಿಸಬೇಕಾಗಿದೆ. ಪ್ಲಾಸ್ಟಿಕ್ ಅನ್ನು ಬಿಟುಮೆನ್‌ನೊಂದಿಗೆ ಬೆರೆಸುವುದರಿಂದ ರಸ್ತೆಗಳು ದೀರ್ಘಕಾಲ ಬಾಳಿಕೆ ಬರುತ್ತವೆ. ಪರಿಸರಸ್ನೇಹಿ ಮತ್ತು ವೆಚ್ಚದ ದೃಷ್ಟಿಯಿಂದಲೂ ಇದು ಉತ್ತಮ.
-ಆನಂದ ಮೇಷ್ಟ್ರು, ಕಲಬುರಗಿ
ಸಭ್ಯರ ಆಟಕ್ಕೆ ಅಹಂಕಾರ ಭೂಷಣವಲ್ಲ
2023ರಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಏಕದಿನ ವಿಶ್ವಕಪ್ ಗೆದ್ದಿತ್ತು. ಟ್ರೋಫಿಯು ನಮಗೆ ಕಾಲಿನ ದೂಳಿಗೆ ಸಮ ಎಂಬಂತೆ ಅದರ ಮೇಲೆಯೇ ಕಾಲು ಹಾಕಿಕೊಂಡು ತಂಡದ ನಾಯಕ ಮಿಚೆಲ್ ಮಾರ್ಷ್ ಗರ್ವದಿಂದ ಫೋಟೊ ತೆಗೆಸಿಕೊಂಡಿದ್ದರು. ಆಗ ಅವರಾಡಿದ್ದ ಮಾತುಗಳು ಫೈನಲ್‌ನಲ್ಲಿ ಮುಗ್ಗರಿಸಿದ್ದ ಭಾರತೀಯರಿಗೆ ನೋವು ಉಂಟು ಮಾಡಿತ್ತು. ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲೂ ಜಿಂಬಾಬ್ವೆ ತಂಡದ ಎದುರು ಹೀನಾಯವಾಗಿ ಸೋತಿರುವ ಆಸ್ಟ್ರೇಲಿಯಾ ಲೀಗ್ ಹಂತದಲ್ಲಿಯೇ ನಿರ್ಗಮಿಸಿದೆ. ಯಾರೇ ಆಗಲಿ, ಸೋತಾಗ ತಾಳ್ಮೆ ಇರಬೇಕು, ಗೆದ್ದಾಗ ಸೌಜನ್ಯ ಇರಬೇಕು. ಅತಿಯಾದ ಅಹಂಕಾರವೇ ಈ ಸೋಲಿಗೆ ಕಾರಣ.
-ಶ್ರೀನಿವಾಸ ಎನ್. ದೇಸಾಯಿ, ಕುಷ್ಟಗಿ
ಪ್ರಧಾನಿಯವರದ್ದು ಹುರುಳಿಲ್ಲದ ಭರವಸೆ
‘ಎಐ ಹೊಸ ಅವಕಾಶ ಸೃಷ್ಟಿಸಲಿದೆ; ಉದ್ಯೋಗ ನಷ್ಟದ ಆತಂಕ ಬೇಡ’ವೆಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈ ಮಾತು ಹುಸಿ ಭರವಸೆಯಂತೆ ತೋರುತ್ತಿದೆ. ಮೋದಿಯವರು ಮೂರನೇ ಅವಧಿಗೆ ಅಧಿಕಾರದ ಗದ್ದುಗೆ ಏರಿದರೂ ದೇಶದ ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಸಾಧ್ಯವಾಗುತ್ತಿಲ್ಲ. ಉದ್ಯೋಗಾವಕಾಶ ಸೃಷ್ಟಿಸುವ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿಲ್ಲ. ಎಐ ತಂತ್ರಜ್ಞಾನ ವೇಗ
ವಾಗಿ ಮುನ್ನುಗ್ಗುತ್ತಿದೆ. ಹಲವಾರು ಕ್ಷೇತ್ರದ ಉದ್ಯೋಗ ಕಬಳಿಸಲು ಸಜ್ಜಾಗಿದೆ. ಹೀಗಿರುವಾಗ ಪ್ರಧಾನಿಯವರ ಈ ಭರವಸೆಯು ಹುರುಳಿಲ್ಲದಂತೆ ತೋರುತ್ತಿದೆ.
-ಅಶೋಕ ಪ. ಹೊನಕೇರಿ, ಧಾರವಾಡ
ಧರ್ಮಾಧಾರಿತ ಚರ್ಚೆ: ಜನತಂತ್ರಕ್ಕೆ ಧಕ್ಕೆ
ವಿಶ್ವವಿದ್ಯಾಲಯಗಳಲ್ಲಿ ಸಂವಿಧಾನದ ಆಶಯದಂತೆ ಬಹು ಧರ್ಮೀಯರು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ವಿ.ವಿಗಳಲ್ಲಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಅನುಗುಣವಾಗಿ ವಿಷಯ ತಜ್ಞರಿಂದ ಸಂವಾದ ನಡೆಸಬೇಕು. ಇದು ಜ್ಞಾನ ಕೌಶಲಕ್ಕೆ ಸಹಕಾರಿ. ಆದರೆ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು, ಲಖನೌ ವಿವಿಯಲ್ಲಿ ವಿದ್ಯಾರ್ಥಿಗಳು ಮತ್ತು ಸಂಶೋಧನಾರ್ಥಿಗಳೊಂದಿಗೆ ಸಂವಾದ ನಡೆಸಿರುವುದು ಅಕ್ಷಮ್ಯ. ಧರ್ಮಾಧಾರಿತ ಭಾಷಣದಿಂದ ವಿದ್ಯಾರ್ಥಿಗಳಲ್ಲಿ ಕೌಶಲ ಜ್ಞಾನ ವೃದ್ಧಿಯಾಗುವುದೆ? ಧರ್ಮಾಧಾರಿತ ನೆಲೆಗಟ್ಟಿನ ಸಂಘ–ಸಂಸ್ಥೆಗಳ ಮುಖ್ಯಸ್ಥ ರೊಂದಿಗೆ ನಡೆಸುವ ಸಂವಾದಗಳು ಜಾತ್ಯತೀತ ರಾಷ್ಟ್ರಕ್ಕೆ ಅಪಾಯಕಾರಿ.
-ಆರ್. ಕುಮಾರ್, ಬೆಂಗಳೂರು
ಆಗುಂಬೆ ಸುರಂಗ ಮಾರ್ಗ ಸುರಕ್ಷಿತವೆ?
ಆಗುಂಬೆ ಘಾಟಿಯಲ್ಲಿ ಸುರಂಗ ಮಾರ್ಗ ನಿರ್ಮಾಣದಿಂದ ಅಲ್ಲಿನ ಸೂಕ್ಷ್ಮ ಪರಿಸರಕ್ಕೆ ಧಕ್ಕೆಯಾಗುವುದು ನಿಶ್ಚಿತ (ಆಳ–ಅಗಲ, ಪ್ರ.ವಾ., ಫೆ. 19). ಹವಾಮಾನ ಬದಲಾವಣೆಯಿಂದಾಗಿ ಅಲ್ಲಿ ಪ್ರತಿವರ್ಷ ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದು, ‘ದಕ್ಷಿಣದ ಚಿರಾಪುಂಜಿ’ಯೆಂಬ ಬಿರುದನ್ನು ಕಳೆದು ಕೊಳ್ಳುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕಾಡು ಕಡಿದು, ಗುಡ್ಡ ಕೊರೆದು, ಬಂಡೆ ಸ್ಫೋಟಿಸಿ ಮಾಡಬೇಕಾದ ‘ಸುರಂಗ ಮಾರ್ಗ’ದ ಔಚಿತ್ಯವಾದರೂ ಏನು? ಕೇಂದ್ರದ ನಡೆ ಆಶ್ಚರ್ಯ ಹುಟ್ಟಿಸುತ್ತಿದೆ. ಭೂಕುಸಿತಗಳಿಂದ ಪಶ್ಚಿಮಘಟ್ಟ ನಲುಗಿದೆ. ಈ ಯೋಜನೆ ಜಾರಿಯಾದರೆ ಭವಿಷ್ಯದಲ್ಲಿ ಇಡೀ ಗುಡ್ಡವೇ ಸ್ಫೋಟಿಸಬಹುದು. ಹಣ ಕೇಂದ್ರಿತ ಯೋಜನೆಗಳನ್ನು ಕೈಬಿಟ್ಟು ಸುಸ್ಥಿರ ಅಭಿವೃದ್ಧಿಯತ್ತ ಗಮನಹರಿಸಬೇಕಿದೆ.
-ಮೋಹಿತ್ ಮೇಗರವಳ್ಳಿ, ತೀರ್ಥಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.