ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

2026ರ ಮಾರ್ಚ್ 3, ಮಂಗಳವಾರ

ವಾಚಕರ ವಾಣಿ
Published 2 ಮಾರ್ಚ್ 2026, 20:30 IST
Last Updated 2 ಮಾರ್ಚ್ 2026, 20:30 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ಲೋಕದಿಂದ ಯುದ್ಧೋನ್ಮಾದ ತೊಲಗಲಿ

ಬಣ್ಣಗಳ ಹಬ್ಬ ಹೋಳಿ ಮತ್ತು ರಣದಾಹಿ ನಾಯಕರ ರಕ್ತದೋಕುಳಿ – ಎರಡೂ ದೃಶ್ಯಗಳನ್ನು ಒಂದೇ ಸಮಯದಲ್ಲಿ ಕಣ್ತುಂಬಿಕೊಳ್ಳುವಂತಾಗಿದೆ. ನಾವೆಲ್ಲರೂ ಭೂಮಿಯ ಸಮಸ್ಯೆಗಳಿಗೆ ತಂತ್ರಜ್ಞಾನ ಪರಿಹಾರವೆಂದು ನಂಬಿದ್ದೇವೆ; ಅದರ ಕೊಂಡಿಯಾಗಿ ದುಡಿಯುತ್ತಿದ್ದೇವೆ. ಇದಕ್ಕೆ ವ್ಯತಿರಿಕ್ತವಾಗಿ ತಂತ್ರಜ್ಞಾನ ಸುಧಾರಿಸಿ ದಂತೆ ಜಾಗತಿಕ ಹಿಂಸೆ, ಯುದ್ಧ, ಲೂಟಿಕೋರತನ ಹೆಚ್ಚುತ್ತಿದೆ.

ADVERTISEMENT

ಯಾವುದೋ ದೇಶದ ಮೂಲೆಯಲ್ಲಿ ಸಿಡಿದ ಪರಮಾಣು ಸಿಡಿತಲೆ, ನಮ್ಮೂರಿನ ಕೆರೆ ತುಂಬ ಬೇಕೋ ಬೇಡವೋ ಎಂಬುದನ್ನು ನಿರ್ಧರಿಸುತ್ತದೆ. ಮಳೆ, ಚಳಿ, ಬಿಸಿಲು ವಾತಾವರಣದ ವ್ಯತ್ಯಯದಿಂದಲೇ ಸಂಭವಿಸುವುದರಿಂದ ಎಲ್ಲಿಯೋ ಯುದ್ಧದ ಮಾಲಿನ್ಯ ನಮ್ಮ ಭವಿಷ್ಯ ನಿರ್ಧರಿಸುತ್ತದೆ. ಮನುಷ್ಯತ್ವದ ಪರ ಎನ್ನುವ ವ್ಯಕ್ತಿ–ಗಡಿಗಳು ಒಟ್ಟಾಗಿ ಯುದ್ಧವನ್ನು ವಿರೋಧಿಸದಿದ್ದರೆ, ಮುಂದೊಂದು ದಿನ ವಿರೋಧಿಸುವವರೇ ಇಲ್ಲವಾಗಿ ಎಲ್ಲಾ ಗಡಿಗಳೂ ಯುದ್ಧಗಳಿಗೆ ಮುಕ್ತವಾಗಿರುತ್ತವೆ. ಕೊನೆಗೆ ಉಳಿಯುವವರಿಬ್ಬರೆ: ಯುದ್ಧಪೀಡಕ ಮತ್ತು ಯುದ್ಧಪೀಡಿತ.

– ಶಾಂತರಾಜು ಎಸ್‌., ಬೆಂಗಳೂರು

_______________

ಕಾಯಕಲ್ಪ ನಿರೀಕ್ಷೆಯಲ್ಲಿ ಗ್ರಂಥಾಲಯಗಳು

ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಗ್ರಂಥಾಲಯ ಇಲಾಖೆಯ ನಿರ್ವಹಣೆ ಮತ್ತು ಪುಸ್ತಕಗಳ ಖರೀದಿ ಪ್ರಕ್ರಿಯೆ ಸೊರಗುತ್ತಿದೆ. ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿಮಟ್ಟದ ಗ್ರಂಥಾಲಯಗಳ ಸ್ಥಿತಿ ಹೇಳತೀರದು.

ತಮಗೆ ಹೆಚ್ಚು ಓಟು ಬಾರದಿರುವ ಗ್ರಾಮಗಳ ಬಗ್ಗೆ ಜನಪ್ರತಿನಿಧಿಗಳಿಗೆ ತಾತ್ಸಾರ. ಊರನ್ನೇ ನಿರ್ಲಕ್ಷಿಸುವವರಿಗೆ ಅಲ್ಲಿನ ಗ್ರಂಥಾಲಯದ ಅಭಿವೃದ್ಧಿ ಮುಖ್ಯವಾದೀತೆ? ಇದಕ್ಕೆ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಕೇಂದ್ರ ಗ್ರಂಥಾಲಯ ನಿದರ್ಶನದಂತಿದೆ. ರಾಜ್ಯದ ಇತರೆ ಗ್ರಂಥಾಲಯಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಇದು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ಮೇಲೆ ಗಂಭೀರ ಪರಿಣಾಮ ಬೀರಲಿದೆ.

– ಸಂಜೀವ ಅಲದಿ, ಗುಳೇದಗುಡ್ಡ

_______________

ಅಸ್ಪೃಶ್ಯತೆ: ಕ್ರಮ ಬೇಕು, ಪರ್ಯಾಯವಲ್ಲ

ಗದಗ ಜಿಲ್ಲೆಯ ಸಿಂಗಟಾಲೂರಿನಲ್ಲಿ ದಲಿತರಿಗೆ ಕ್ಷೌರ ಮಾಡಲು ನಿರಾಕರಿಸಲಾಗಿದೆ. ಕ್ಷೌರದಂಗಡಿಯವರ ಮೇಲೆ ಕ್ರಮಕೈಗೊಳ್ಳುವುದು ಸರ್ಕಾರದ ಜವಾಬ್ದಾರಿ. ಆದರೆ, ಸ್ಥಳೀಯ ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಪ್ರತ್ಯೇಕ ಕ್ಷೌರದಂಗಡಿ ತೆರೆದು ಬೇರೆ ಗ್ರಾಮದ ಕ್ಷೌರಿಕನನ್ನು ನಿಯುಕ್ತಿ ಮಾಡಿರುವುದು ಸಂವಿಧಾನಕ್ಕೆ ಮಾಡಿದ ಅಪಮಾನ.

ಅಧಿಕಾರಿಗಳು ಜಾತಿ ತಾರತಮ್ಯ ಮಾಡುವವರ ಮೇಲೆ ಕ್ರಮಕೈಗೊಂಡು ಸಂವಿಧಾನದ ಘನತೆ ಎತ್ತಿ ಹಿಡಿಯುವ ಕೆಲಸ ಮಾಡಬೇಕು. ದಲಿತರಿಗೆ ಮಂದಿರ ಪ್ರವೇಶ ನಿರಾಕರಿಸಿದರೆ ಮತ್ತೊಂದು ಮಂದಿರ ಕಟ್ಟುವುದು, ನೀರು ತುಂಬಲು ಬಿಡದಿದ್ದರೆ ಮತ್ತೊಂದು ಕೆರೆ, ಬಾವಿ ತೋಡುವುದು ಸರಿಯಲ್ಲ. ಅಸ್ಪೃಶ್ಯತೆ ನಿವಾರಣೆಯ ಬದಲಾಗಿ ಅದನ್ನು ಸರ್ಕಾರವೇ ಪೋಷಿಸಿದಂತಾಗುತ್ತದೆ.

– ಮಲ್ಲಿಕಾರ್ಜುನ ಹೆಗ್ಗಳಗಿ, ಮುಧೋಳ

_______________

ನಿರುದ್ಯೋಗ ಹೆಚ್ಚಳ: ಯುವಜನ ಹೈರಾಣು

ದೇಶ ಮತ್ತು ರಾಜ್ಯದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಸರ್ಕಾರ ಗಳಿಂದ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಕೆಲಸವಾಗುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಕೋಟಿ ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಆಶ್ವಾಸನೆ ನೀಡುತ್ತವೆ.

ಮತ ಪಡೆದು ಅಧಿಕಾರಕ್ಕೆ ಬಂದ ನಂತರ ಉದ್ಯೋಗ ಸೃಷ್ಟಿ ಮಾಡುವುದಿಲ್ಲ. ಇದರಿಂದ ನಿರುದ್ಯೋಗ ಸಮಸ್ಯೆ ತಾಂಡವ ವಾಡುತ್ತಿದೆ. ಶ್ರೀಮಂತರು ಮತ್ತು ರಾಜಕಾರಣಿಗಳ ಮಕ್ಕಳು ವಿದೇಶಗಳಲ್ಲಿ ವಿದ್ಯಾಭ್ಯಾಸ ಮಾಡಿ ಅಲ್ಲಿಯೇ ಉದ್ಯೋಗ ಗಿಟ್ಟಿಸಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಬಡವರ ಮಕ್ಕಳು ಉನ್ನತ ಶಿಕ್ಷಣ ಅಥವಾ ವೃತ್ತಿಪರ ಶಿಕ್ಷಣ ಪಡೆದರೂ ಅರ್ಹತೆಗೆ ತಕ್ಕಂತೆ ಉದ್ಯೋಗವಿಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಅವರ ಕುಟುಂಬಗಳಿಗೆ ಆಸರೆ ಇಲ್ಲದಂತಾಗಿದೆ. ಯುವಜನತೆ ಘನತೆಯ ಬದುಕು ನಡೆಸಲು ಉದ್ಯೋಗದ ಹಕ್ಕು ನೀಡುವುದು ಸರ್ಕಾರಗಳ ಜವಾಬ್ದಾರಿ. ಕೇಂದ್ರ ಮತ್ತು ರಾಜ್ಯ ಸರ್ಕಾರವು ಖಾಲಿ ಇರುವ ಉದ್ಯೋಗಗಳ ಭರ್ತಿಗೆ ಮುಂದಾಗಲಿ.

– ಮಹೇಶ್‌ ಕೂದುವಳ್ಳಿ, ಚಿಕ್ಕಮಗಳೂರು

_______________

‘ಬಾಲ್ಯದ ನಂದನ’ ಕಮರಿಸುವ ವಿವಾಹ

ಸಮಾಜ ಮುಂದುವರಿದಿದೆ ಎಂದು ಬೀಗಿದರೂ ಬಾಲ್ಯವಿವಾಹದ ಕಪಿಮುಷ್ಟಿ ಇಂದಿಗೂ ಸಡಿಲಗೊಂಡಿಲ್ಲ‌. ಮೈಸೂರಿನಂತಹ ಸಾಂಸ್ಕೃತಿಕ ಜಿಲ್ಲೆಯಲ್ಲೇ ಒಂದೂ ಗ್ರಾಮ ಪಂಚಾಯಿತಿ ‘ಬಾಲ್ಯವಿವಾಹ ಮುಕ್ತ’ವೆಂದು (ಪ್ರ.ವಾ., ಮಾ. 2) ಘೋಷಿಸಿಕೊಳ್ಳಲು ಸಾಧ್ಯವಾಗಿಲ್ಲವೆಂದರೆ ನಾವು ಸೋತಿರುವುದಾದರೂ ಎಲ್ಲಿ? ​ಆಟ ಆಡುವ ವಯಸ್ಸಿನಲ್ಲಿ ಹಸೆಮಣೆ ಏರಿಸುವುದು ಹೆಣ್ಣುಮಕ್ಕಳ ಕನಸುಗಳಿಗೆ ಕೊಳ್ಳಿ ಇಟ್ಟಂತೆ. ಶಿಕ್ಷಣದಿಂದ ವಂಚಿತರಾಗುವ ಈ ಹೆಣ್ಣುಮಕ್ಕಳ ಮೌನರೋದನಕ್ಕೆ ಸಮಾಜವೇ ಉತ್ತರಿಸಬೇಕಿದೆ. ಬದಲಾವಣೆ ಬರೀ ಕಡತಗಳಲ್ಲಿದ್ದರೆ ಸಾಲದು; ಪ್ರತಿಯೊಬ್ಬರ ಮನಃಸ್ಥಿತಿಯೂ ಬದಲಾಗಬೇಕಿದೆ.

– ಗೌರಿ ತ್ರಿವೇಣಿ, ಹೊಸಪೇಟೆ

_______________

ಕುರ್ಚಿ ಕಲಹ: ರಾಜ್ಯದ ಪ್ರಗತಿ ಮರೀಚಿಕೆ

‘ಕಥೆ ಅದೇ, ನಟರಷ್ಟೇ ಬೇರೆ’ ಲೇಖನವು (ಲೇ: ವೈ.ಎಸ್.ವಿ. ದತ್ತ, ಪ್ರ.ವಾ., ಮಾ. 2) ಸಕಾಲಿಕವಾಗಿದೆ. ರಾಜ್ಯದಲ್ಲಿ ಅಧಿಕಾರಕ್ಕಾಗಿ ಕಿತ್ತಾಟ ನಡೆಸುತ್ತಿ ರುವುದು ಮುಗಿಯದ ಅಧ್ಯಾಯ ಎಂಬಂತೆ ಗೋಚರವಾಗುತ್ತಿದೆ.

ಕಾಂಗ್ರೆಸ್‌ ನಾಯಕರ ಕುರ್ಚಿ ಕಿತ್ತಾಟದಿಂದ ಸಮಯ ವ್ಯರ್ಥವೇ ಹೊರತು, ರಾಜ್ಯಕ್ಕೇನೂ ಉಪಯೋಗವಿಲ್ಲ. ಅಧಿಕಾರ ಶಾಶ್ವತವಲ್ಲ. ಮೈಮರೆತರೆ ಚುನಾವಣೆ ಯಲ್ಲಿ ಮತದಾರ ಪಾಠ ಕಲಿಸದೆ ಬಿಡುವುದಿಲ್ಲ. ಹಾಗಾಗಿ, ಕಾಂಗ್ರೆಸ್‌ ಧುರೀಣರು ಇತಿಹಾಸದಿಂದ ಪಾಠ ಕಲಿಯಬೇಕಾದದ್ದು ಬಹಳಷ್ಟಿದೆ.

– ಹಕೀಮ್, ತೀರ್ಥಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.