ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

2026ರ ಫೆಬ್ರುವರಿ 2, ಸೋಮವಾರ

ವಾಚಕರ ವಾಣಿ
Published 1 ಫೆಬ್ರುವರಿ 2026, 22:34 IST
Last Updated 1 ಫೆಬ್ರುವರಿ 2026, 22:34 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ರಕ್ಷಕರೇ ಭಕ್ಷಕರಾದರೆ ಜನರ ರಕ್ಷಣೆ ಹೇಗೆ?

ರಾಜ್ಯದ ರಕ್ಷಣೆಯ ಹೊಣೆ ಹೊತ್ತ ಪೊಲೀಸ್ ಅಧಿಕಾರಿಗಳು ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬೀಳುತ್ತಿದ್ದಾರೆ. ಈ ಬೆಳವಣಿಗೆ ನೋಡಿದರೆ ಜನಸಾಮಾನ್ಯರು ಯಾರನ್ನು ರಕ್ಷಣೆ ನೀಡುವಂತೆ ಕೇಳುವುದು? ಪೊಲೀಸ್‌ ಇಲಾಖೆಯಲ್ಲಿ ಬೇಲಿಯೇ ಎದ್ದು ಹೊಲ ಮೇಯುವಂತಹ ಸ್ಥಿತಿ ಸೃಷ್ಟಿಯಾಗಿದೆ. ಜನಸಾಮಾನ್ಯರ ಬಗ್ಗೆ ಜನಪ್ರತಿನಿಧಿಗಳಿಗಾಗಲೀ ಸರ್ಕಾರಿ ಅಧಿಕಾರಿಗಳಿಗಾಗಲೀ ಕಿಂಚಿತ್ತು ಮಾನವೀಯತೆ ಇಲ್ಲ. ಲಂಚ ಪಡೆಯುವುದಕ್ಕಾಗಿಯೇ ಇಡೀ ಸೇವಾವಧಿಯನ್ನು ಮೀಸಲಿಟ್ಟಂತೆ ಕಾಣುತ್ತದೆ. ಲೋಕಾಯುಕ್ತ ಅಧಿಕಾರಿಗಳು ಲಂಚಕೋರರನ್ನು ಸೆರೆ ಹಿಡಿದರೆ ಸಾಲದು; ಸಕಾಲದಲ್ಲಿ ಅವರಿಗೆ ಶಿಕ್ಷೆ ಕೊಡಿಸುವ ಬಗ್ಗೆಯೂ ಜಾಗ್ರತೆವಹಿಸಬೇಕಿದೆ.

ADVERTISEMENT

– ಶ್ರುತಿ ಎ.ಸಿ. ರಾಂಪುರ, ಚನ್ನಪಟ್ಟಣ

**********

ದೈಹಿಕ ಶಿಕ್ಷಣದ ಬಗ್ಗೆ ಸರ್ಕಾರದ ತಾತ್ಸಾರ

ಮಕ್ಕಳಿಗೆ ಯೋಗ, ಆರೋಗ್ಯ, ವ್ಯಾಯಾಮ, ಆಟ, ರಾಷ್ಟ್ರೀಯ ಮೌಲ್ಯ ಶಿಕ್ಷಣವನ್ನು ಇತರೆ ವಿಷಯಗಳಂತೆ ಬೋಧಿಸಲು ಸರ್ಕಾರವು 2008ರಲ್ಲಿ ದೈಹಿಕ ಶಿಕ್ಷಣ ಪಠ್ಯಪುಸ್ತಕವನ್ನು ರಚಿಸಿದೆ. ಮಕ್ಕಳು ಅದರ ಲಾಭವನ್ನೂ ಪಡೆಯುತ್ತಿದ್ದಾರೆ. ಹೀಗಿದ್ದರೂ, ಪ್ರತ್ಯೇಕವಾಗಿ ಯೋಗ ಶಿಕ್ಷಕರನ್ನು ನೇಮಿಸಲು ಆದೇಶ ಹೊರಡಿಸಿರುವುದು ಎಷ್ಟರಮಟ್ಟಿಗೆ ಸರಿ? ಮಹಾರಾಷ್ಟ್ರ, ತಮಿಳುನಾಡು, ಗೋವಾ ಸೇರಿ ಇತರ ರಾಜ್ಯಗಳು ದೈಹಿಕ ಶಿಕ್ಷಣ ಶಿಕ್ಷಕರನ್ನು ಇತರೆ ಶಿಕ್ಷಕರಂತೆ ಪರಿಗಣಿಸಿ ಕೆಲಸ ಮಾಡಲು ಉತ್ಸಾಹ ತುಂಬುತ್ತಿವೆ. ಕರ್ನಾಟಕದಲ್ಲಿ ಮಾತ್ರ ದೈಹಿಕ ಶಿಕ್ಷಣದ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.

– ಜಿ. ಪಳನಿಸ್ವಾಮಿ ಜಾಗೇರಿ, ಕೊಳ್ಳೇಗಾಲ

**********

ರಂಗ ಪರಿಷೆಯಲ್ಲಿ ಮಕ್ಕಳ ಬಗ್ಗೆ ಉಪೇಕ್ಷೆ

ಫೆ. 1ರಿಂದ 6ರ ವರೆಗೆ ಬೆಂಗಳೂರಿನ ಕಲಾಗ್ರಾಮದಲ್ಲಿ ರಾಷ್ಟ್ರೀಯ ರಂಗೋತ್ಸವ ಏರ್ಪಡಿಸಲಾಗಿದೆ. ಕೇಂದ್ರ ಸಂಸ್ಕೃತಿ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಷ್ಟ್ರೀಯ ನಾಟಕ ಶಾಲೆ, ಕರ್ನಾಟಕ ನಾಟಕ ಅಕಾಡೆಮಿಯಿಂದ ನಡೆಯುತ್ತಿರುವ ಈ ರಂಗ ಪರಿಷೆಯಲ್ಲಿ ಬಹುಭಾಷಾ ನಾಟಕಗಳು, ಬೀದಿನಾಟಕಗಳಿವೆ. ರಂಗಭೂಮಿ ಕುರಿತು ಚಿತ್ರ ಪ್ರದರ್ಶನ, ವಿಚಾರ ಗೋಷ್ಠಿ, ಹಿರಿಯ ರಂಗಕರ್ಮಿಗಳಿಗೆ ರಂಗ ಗೌರವ ಎಲ್ಲವೂ ಇದೆ. ಆದರೆ, ಮಕ್ಕಳ ರಂಗಭೂಮಿ ಕುರಿತು ಗೋಷ್ಠಿಗಳೇ ಇಲ್ಲ; ಮಕ್ಕಳ ನಾಟಕಗಳೂ ಇಲ್ಲ. ಇಂತಹ ಮಹತ್ವದ ವಿಚಾರ ಅನುಭವಿ ಆಯೋಜಕರ ಗಮನಕ್ಕೆ ಬರಲಿಲ್ಲವೇಕೆ? 62 ಮಂದಿಯ ಕವಿಗೋಷ್ಠಿಯನ್ನೂ ಏರ್ಪಡಿಸಲಾಗಿದೆ. ರಂಗಭೂಮಿಗೆ ನೇರ ಸಂಬಂಧವಿಲ್ಲದ ಕವಿಗೋಷ್ಠಿ ಏರ್ಪಡಿಸುವ ಬದಲು, ಮಕ್ಕಳ ರಂಗಭೂಮಿ ಕುರಿತು ಚರ್ಚೆ, ನಾಟಕಗಳ ಪ್ರದರ್ಶನವನ್ನು ಏರ್ಪಡಿಸಬಹುದಿತ್ತಲ್ಲವೆ?

– ಗಿರಿಧರ ಕಾರ್ಕಳ, ಬೆಂಗಳೂರು

**********

ವಯೋಮಿತಿ ಸಡಿಲಿಕೆ ಪರಿಷ್ಕರಣೆ ಅಗತ್ಯ

ಸರ್ಕಾರಿ ಹುದ್ದೆಗಳಿಗೆ ನೇರ ನೇಮಕಾತಿಗೆ ಸಂಬಂಧಿಸಿದಂತೆ ಗರಿಷ್ಠ ವಯೋಮಿತಿ
ಯನ್ನು ಒಂದು ಬಾರಿಗೆ ಐದು ವರ್ಷ ವಿಸ್ತರಿಸಿರುವುದು ಸ್ವಾಗತಾರ್ಹ. ಈ ಆದೇಶವು 2026ರ ಜನವರಿ 29ರಿಂದ ಅನುಮೋದನೆ ಆಗಿ 2027ರ ಡಿಸೆಂಬರ್ 31ರ ವರೆಗೆ ಜಾರಿಯಲ್ಲಿ ಇರಲಿದೆ. ಇದು ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಸಂತಸ ತಂದಿದೆ. ಆದರೆ, ಜನವರಿ 1ರಿಂದ 28ರ ವರೆಗೆ ಜನಿಸಿದವರ ಪಾಲಿಗೆ ಮರಣಶಾಸನವಾಗಿದೆ. ನಾಲ್ಮೈದು ವರ್ಷಗಳಿಂದ ಹೊಸದಾಗಿ ನೇಮಕಾತಿಯೇ ನಡೆದಿಲ್ಲ. ಹಾಗಾಗಿ, ವಯೋಮಿತಿ ವಿಸ್ತರಣೆ ಆದೇಶದಿಂದ ಈ ಅವಧಿಯಲ್ಲಿ ಜನಿಸಿದವರಿಗೆ ಅನ್ಯಾಯವಾಗಲಿದೆ. ಜನವರಿ 1ರಿಂದ ಅನ್ವಯಿಸುವಂತೆ ಆದೇಶ ಪರಿಷ್ಕರಿಸಿ ಹೊರಡಿಸಿದರೆ ಅನುಕೂಲವಾಗಲಿದೆ.

– ಗಣೇಶ್‌, ಬೆಂಗಳೂರು

**********

ಪುಸ್ತಕ ಸಂಸ್ಕೃತಿ ಕಡೆಗಣಿಸಿದ್ದು ಸರಿಯೆ?

ಈ ಹಿಂದೆ ಸರ್ಕಾರ ಆಯಾ ವರ್ಷ ಪ್ರಕಟಗೊಂಡಿರುವ ಪುಸ್ತಕಗಳನ್ನು ಆಯ್ಕೆ ಮಾಡಿಕೊಂಡು 300 ಪ್ರತಿಗಳನ್ನು ಸಗಟು ಖರೀದಿಸಿ ರಾಜ್ಯದ ಗ್ರಂಥಾಲಯಗಳಿಗೆ ಸರಬರಾಜು ಮಾಡುತ್ತಿತ್ತು. ಈ ವ್ಯವಸ್ಥೆ ಕ್ರಮಬದ್ಧವಾಗಿ ನಡೆಯುತ್ತಿತ್ತು. ಇದರಿಂದ ಓದುಗ ಸಮುದಾಯ ಮತ್ತು ಲೇಖಕರಿಗೆ ಪ್ರಯೋಜನವಾಗುತ್ತಿತ್ತು. ಹೊಸ ಸರ್ಕಾರ ಬಂದ ಮೇಲೆ 2023ನೇ ಸಾಲಿನಲ್ಲಿ ಪ್ರಕಟಗೊಂಡ ಪುಸ್ತಕಗಳನ್ನೇನೊ ಆಯ್ಕೆ ಮಾಡಿತು. ಆದರೆ, ಪುಸ್ತಕ ಖರೀದಿ ಮಾಡಲಿಲ್ಲ. ನಂತರ ಪುಸ್ತಕ ಆಯ್ಕೆ ವ್ಯವಸ್ಥೆಯೇ ಸ್ಥಗಿತಗೊಂಡು ಬಿಟ್ಟಿದೆ. ಇದೆಂತಹ ಧೋರಣೆ? ಈ ವರ್ಷ ಪ್ರಕಾಶಕರು ಮತ್ತು ಲೇಖಕರ ಒತ್ತಡ, ಒತ್ತಾಯಕ್ಕೆ ಪ್ರತಿಕ್ರಿಯೆಯಾಗಿ ಪುಸ್ತಕ ಖರೀದಿಗೆ ಸೂಕ್ತ ಅನುದಾನ ಒದಗಿಸಲಾಗುವುದೆಂದು ಸರ್ಕಾರ ಹೇಳಿಕೊಂಡು ಬಂದಿದೆ. ಆದರೂ, ಇಲ್ಲಿಯವರೆಗೆ ಯಾವುದೇ ಕ್ರಮಕೈಗೊಂಡಿಲ್ಲ.‌ ಇಂತಹ ಅವಜ್ಞೆ ಏಕೆ?

– ಹರೀಶ್‌ ಕುಮಾರ್‌ ಕುಡ್ತಡ್ಕ, ಮಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.