ಖಾಂಡವವನ ಸ್ಥಿತಿ ಲಾಲ್‌ಬಾಗ್‌ಗೆ ಬೇಕೆ?
ಸರ್ಕಾರವು ಲಾಲ್‌ಬಾಗ್‌ನೊಳಗೆ ಜೋಡಿ ಸುರಂಗ ರಸ್ತೆ ನಿರ್ಮಾಣಕ್ಕೆ ಮುಂದಾಗಿರುವುದು ದುರದೃಷ್ಟಕರ. ಬೆಂಗಳೂರಿಗರಿಗೆ ಉಸಿರಾಡಲು ಶುದ್ಧ ಗಾಳಿ ಬೇಡವೆ? ಪರಿಸರ ಪ್ರೇಮಿಗಳು ಲಾಲ್‌ಬಾಗಿನ ದಯನೀಯ ಸ್ಥಿತಿ ಕಂಡು ನೀರವ ಮೌನಕ್ಕೆ ಜಾರಿದ್ದಾರೆ. ಕಬ್ಬನ್ ಪಾರ್ಕ್ ಪರಿಸ್ಥಿತಿ ಇದಕ್ಕಿಂತ ಭಿನ್ನವಿಲ್ಲ. ಈಗಾಗಲೇ, ಉದ್ಯಾನದ 330 ಎಕರೆ ವಿಸ್ತೀರ್ಣವು, 196 ಎಕರೆಗೆ ಇಳಿದಿರುವುದು ನಮ್ಮೆಲ್ಲರ ಪರಿಸರ ಪ್ರಜ್ಞಾಶೂನ್ಯತೆಗೆ ಹಿಡಿದ ಕನ್ನಡಿ. ಬ್ರಿಟಿಷರು ಇಡೀ ಬೆಂಗಳೂರನ್ನೇ ಲಾಲ್‌ಬಾಗ್ ಮಾಡಲು ಬಯಸಿದ್ದರಂತೆ. ಅಂತಹ ಲಾಲ್‌ಬಾಗನ್ನೇ ಇಲ್ಲವಾಗಿಸುವ ಹುಂಬತನ ಸರಿಯಲ್ಲ. ಇಂದ್ರಪ್ರಸ್ಥ ನಿರ್ಮಾಣಕ್ಕಾಗಿ ಖಾಂಡವವನ ಧ್ವಂಸ ಮಾಡಿದ ಮಹಾ ಭಾರತದ ಕಥೆಯಂತೆ ಈ ಎರಡೂ ಉದ್ಯಾನಗಳನ್ನು ಬಲಿ ನೀಡಬಾರದು. ರಾಜ್ಯದಲ್ಲಿ ಪರಿಸರ ಉಳಿಸುವ ಹೋರಾಟಕ್ಕೆ ದೊಡ್ಡ ಪರಂಪರೆ ಇದೆ. ಪರಿಸರವಾದಿಗಳು ಮತ್ತು ಲಾಲ್‌ಬಾಗ್ ಉಳಿಸಿ ಮನಃಸ್ಥಿತಿಯ ಜನರನ್ನು ಸರ್ಕಾರವು ಆಹ್ವಾನಿಸಿ ಪರ್ಯಾಯ ಮಾರ್ಗ ಕಂಡುಕೊಳ್ಳುವ ಅವಶ್ಯಕತೆ ಇದೆ.
-ಟಿ. ನಾರಾಯಣ ಗೌಡ, ಬೆಂಗಳೂರು
**
ನಿಜವಾದ ಸಾಧಕರಿಗೆ ಪ್ರಶಸ್ತಿ ದೊರಕಲಿ
ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವವನ್ನು ಅತ್ಯಂತ ಸಡಗರದಿಂದ ಆಚರಿಸುತ್ತೇವೆ. ಅದರ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದವರಿಗೆ ಪ್ರಶಸ್ತಿ ಪ್ರದಾನ ಮಾಡುವ ಪರಿಪಾಟವಿದೆ. ಪ್ರಶಸ್ತಿಯು ಅನರ್ಹರ ಪಾಲಾಗದಂತೆ ಸರ್ಕಾರ ಎಚ್ಚರವಹಿಸಲಿ. ಆಗಷ್ಟೇ ಅದರ ಮೌಲ್ಯ ಹೆಚ್ಚಲಿದೆ.
-ಪ್ರೊ. ಟಿ. ನಾರಾಯಣಪ್ಪ, ಬೆಂಗಳೂರು
**
ತುಂಗಭದ್ರಾ ಕ್ರಸ್ಟ್ ಗೇಟ್ ದುರಸ್ತಿ ವಿಳಂಬ
ತುಂಗಭದ್ರಾ ನದಿಯ ಸುತ್ತಮುತ್ತ ಕಾರ್ಖಾನೆಗಳು ತಲೆಯೆತ್ತಿವೆ. ವ್ಯಾಪಕ ಪ್ರಮಾಣದಲ್ಲಿ ಅನುಪಯುಕ್ತ ತ್ಯಾಜ್ಯ, ಮಾಲಿನ್ಯಕಾರಕ ಕರಿಬೂದಿ ಹಾಗೂ ದೂಳು ನದಿಯ ಒಡಲು ಸೇರುತ್ತಿವೆ. ನದಿಯಲ್ಲಿ ಹೂಳು ತುಂಬಿ ನೀರಿನ ಸಂಗ್ರಹ ಪ್ರಮಾಣ ಕಡಿಮೆಯಾಗುತ್ತಿದೆ. ಕ್ರಸ್ಟ್‌ಗೇಟ್‌ಗಳು ದುರಸ್ತಿಯಾಗದೆ ನಲುಗುತ್ತಿವೆ. ಈ ಬಗ್ಗೆ ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ. ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುವ ಕೆಲಸ ಮಾಡುವುದನ್ನು ಬಿಟ್ಟು ಕೂಡಲೇ ತುಂಗಭದ್ರಾ ಉಳಿಸುವ ಕೆಲಸ ಆಗಬೇಕಿದೆ.
-ಎಸ್.ಜಿ. ಗಡ್ಡಿ, ಹೊಸಪೇಟೆ
**
ಮತದಾರರ ಪಟ್ಟಿಯಲ್ಲಿ ಅಕ್ರಮ ತಪ್ಪಿಸಿ
ವಿಧಾನ ಪರಿಷತ್ ತನ್ನದೇ ಆದ ಘನತೆ ಹೊಂದಿದೆ. ಪರಿಷತ್‌ಗೆ ಆಯ್ಕೆ ಆಗುವವರು ಹಾಗೂ ಆಯ್ಕೆ ಮಾಡುವ ಮತದಾರರು ಸಾರ್ವಜನಿಕರಿಗಿಂತ ಭಿನ್ನರು. ಅಭ್ಯರ್ಥಿಗಳು ಪರಿಷತ್ ಚುನಾವಣೆಯಲ್ಲಿ ಶತಾಯಗತಾಯ ಗೆಲುವು ಸಾಧಿಸಲು ತಂತ್ರಗಾರಿಕೆ ರೂಪಿಸುವುದು ಒಂದೆಡೆಯಾದರೆ, ಚುನಾವಣಾ ಅಕ್ರಮಗಳು ಇನ್ನೊಂದೆಡೆ. ಪರಿಷತ್‌ನ ಪದವಿ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಗಳಲ್ಲಿ ನಕಲಿ ಮತದಾರರ ಸೃಷ್ಟಿಯು ವ್ಯವಸ್ಥೆಯನ್ನೇ ಅಣಕಿಸುವಂತಿದೆ. ಪ್ರತಿ ಚುನಾವಣೆಯಲ್ಲೂ ಮತದಾರರ ಪಟ್ಟಿ ಸಿದ್ಧಪಡಿಸುವಾಗ ನಕಲಿ ಮತದಾರರು ಸೇರ್ಪಡೆಗೊಳ್ಳುತ್ತಾರೆ. ಇದು ನಿಜಕ್ಕೂ ಕೌತುಕ. ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯು ನಿಧಾನವಾಗಿ ನಡೆಯುತ್ತದೆ. ಈ ಪ್ರಕ್ರಿಯೆಯನ್ನು ಆನ್‌ಲೈನ್ ಮಾಡಿದರೆ ಅಕ್ರಮಗಳಿಗೆ ಕಡಿವಾಣ ಬೀಳಲಿದೆ.
-ಪ್ರಹ್ಲಾದ ವಾ. ಪತ್ತಾರ, ಬೆಂಗಳೂರು
**
ಮತಕ್ಕಾಗಿ ರೀಲ್ಸ್ ಪ್ರಚೋದನೆ ಸರಿಯಲ್ಲ
ಬಿಹಾರದ ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ‘ರೀಲ್ಸ್ ಮಾಡುವುದರಿಂದ ಬಿಹಾರದ ಯುವಜನತೆ ಸಾಕಷ್ಟು ಒಳ್ಳೆಯ ಸಂಪಾದನೆ ಮಾಡುತ್ತಿದ್ದಾರೆ. ದಿನದ ಒಂದು ಜಿಬಿ ಡೇಟಾ ಬೆಲೆ ಒಂದು ಕಪ್ ಚಹಾದ ದರಕ್ಕಿಂತಲೂ ಕಡಿಮೆಯಿದೆ. ಇದರಿಂದ ರೀಲ್ಸ್ ಹಾಗೂ ಇಂಟರ್‌ನೆಟ್ ಬಳಕೆ ಹೆಚ್ಚಾಗುತ್ತಿದೆ. ಇದಕ್ಕೆ ಬಿಜೆಪಿ ಸರ್ಕಾರವೇ ಕಾರಣ’ ಎಂದಿದ್ದಾರೆ. ಪ್ರಧಾನಿ ಅವರ ಈ ಹೇಳಿಕೆಯು ಯುವಜನರನ್ನು ಹಾದಿ ತಪ್ಪಿಸುವಂತಿದೆ. ಯುವಜನರಿಗೆ ಉದ್ಯೋಗ ಸೃಷ್ಟಿಸಲು ಬೇಕಾದ ಮಾರ್ಗ, ಅವಕಾಶ ಕಲ್ಪಿಸಿಕೊಡಬೇಕಾದವರೇ ನೇರವಾಗಿ ರೀಲ್ಸ್ ಮಾಡಲು ಪ್ರೋತ್ಸಾಹ ನೀಡುವುದು ಎಷ್ಟು ಸರಿ? ರೀಲ್ಸ್‌ನಿಂದ ನಿರುದ್ಯೋಗ ಪ್ರಮಾಣ ಕಡಿಮೆಯಾಗಿದ್ದರೆ ದೇಶದಲ್ಲಿರುವ ನಿರುದ್ಯೋಗಿ ಯುವಜನರಿಗೆ ಯುವನಿಧಿ ಘೋಷಿಸುವ ಅವಶ್ಯಕತೆಯಾದರೂ ಇದೆಯೇ? ಮತಕ್ಕಾಗಿ ರೀಲ್ಸ್ ಮಾಡುವಂತೆ ಪ್ರಚೋದಿಸುವುದು ಸರಿಯಲ್ಲ.
-ಸುರೇಂದ್ರ ಪೈ, ಭಟ್ಕಳ
**
ಸಾವಯವ ಕೃಷಿ ಅಭಿಯಾನ ನಡೆಯಲಿ ನೆಲ ಮತ್ತು ಜಲ ಸಂರಕ್ಷಣೆ ಹಾಗೂ ಪರಿಸರ ಸಮತೋಲನಕ್ಕಾಗಿ ಶ್ರಮಿಸುತ್ತಿರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ತನ್ನ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಸರಿಯಷ್ಟೆ. ವಾಸ್ತವವಾಗಿ ಈ ಮಂಡಳಿಯು ವಿಷಯುಕ್ತ ಆಹಾರ ಸೇವನೆಯ ನಿಯಂತ್ರಣದ ಬಗ್ಗೆ ಪ್ರಸ್ತಾಪಿಸದೆ ಇರುವುದು ನಿಜಕ್ಕೂ ಸೋಜಿಗ. ರಾಸಾಯನಿಕ ಹಾಗೂ ಕೀಟನಾಶಕಗಳ ವಿಪರೀತ ಬಳಕೆಯಿಂದಾಗಿ ಭೂಮಿ ತನ್ನ ಫಲವತ್ತತೆ ಕಳೆದುಕೊಳ್ಳುತ್ತಿದೆ. ವಿಷಯುಕ್ತ ಆಹಾರ ಸೇವನೆ ಮೂಲಕ ಜನರ ಆರೋಗ್ಯ ತೀವ್ರವಾಗಿ ಹದಗೆಡುತ್ತಿದೆ. ಜಲಮಾಲಿನ್ಯದ ಜೊತೆಗೆ ಇತರ ಜೀವಸಂಕುಲದ ನಾಶವೂ ಆಗುತ್ತಿದೆ. ಇನ್ನಷ್ಟು ಭೀಕರ ಅನಾಹುತಗಳು ಸಂಭವಿಸುವ ಮುನ್ನವೇ ಸಾವಯವ ಕೃಷಿಗೆ ಪ್ರೋತ್ಸಾಹಿಸುವ ಅಭಿಯಾನ ಆರಂಭಿಸಬೇಕಿದೆ. ಆ ಮೂಲಕ ಸುವರ್ಣ ಮಹೋತ್ಸವಕ್ಕೆ ನಿಜವಾದ ಘನತೆ ಪ್ರಾಪ್ತಿಯಾಗುತ್ತದೆ.
-ಭೀಮಾನಂದ ಮೌರ್ಯ, ಮೈಸೂರು
**
ಭ್ರೂಣಹತ್ಯೆ
ಹೆಣ್ಣು
ಜಗದ ಬೆಡಗು
ಜಗದ ಸೊಬಗು
ಜಗದ ಬೆರಗು
ಜಗದ ಬೆಳಕಾಗಿ
ಹೆಣ್ಣೇ ನೀ ಮಿನುಗು
ತೊಲಗಲಿ
ಭ್ರೂಣಹತ್ಯೆ ಪಿಡುಗು!
-ಆರ್. ನಾಗರಾಜ್, ಗೊರೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.