ವಾಚಕರ ವಾಣಿ
ಭಾರತದಲ್ಲಿ ಪರಿಸರ ಜಾಗೃತಿ ಮತ್ತು ಪರಿಸರದ ಉಳಿವಿಗಾಗಿಯೇ ಅವತರಿಸಿದರು ಎನ್ನಬಹುದಾದ ವ್ಯಕ್ತಿತ್ವ ಪರಿಸರ ವಿಜ್ಞಾನಿ ಡಾ. ಮಾಧವ ಗಾಡ್ಗೀಳರದು. ಅವರ ವ್ಯಕ್ತಿತ್ವ ಮತ್ತು ಸಾಧನೆಗಳ ಅಚ್ಚುಕಟ್ಟಾದ ಚಿತ್ರಣವನ್ನು ನಾಗೇಶ ಹೆಗಡೆಯವರು ತಮ್ಮ ಅಂಕಣದಲ್ಲಿ (ಜ. 15) ನೀಡಿದ್ದಾರೆ; ಪರೋಕ್ಷವಾಗಿ ನಮಗೆ ಪರಿಸರದ ಉಳಿವಿನ ಮಹತ್ತ್ವವನ್ನು ತಿಳಿಸಿ ಎಚ್ಚರಿಸಿದ್ದಾರೆ.
ನನ್ನ ಅನುಭವದ ಪ್ರಕಾರ, ಹಳ್ಳಿಗಳಲ್ಲಿ ಜನರ ಚಟುವಟಿಕೆ ಮತ್ತು ಮಾತುಕತೆಗಳು, ಖಗಮೃಗಗಳೂ ಸೇರಿದಂತೆ ಪ್ರಕೃತಿ ಹಾಗೂ ಪರಿಸರದೊಡನೆ ಬಾಳಿಕೊಂಡುಹೋಗಲು ಪೂರಕವಾಗಿವೆ. ನಗರಗಳಲ್ಲಿ, ತಥಾಕಥಿತ ಪ್ರಗತಿಯ ಮುಸುಕು ಹೊದ್ದ ಉದ್ಯಮ–ಕೈಗಾರಿಕೆಗಳ ಹೆಸರಿನಲ್ಲಿ ಪ್ರಕೃತಿ ಹನನದ ಬೆಳವಣಿಗೆ ಕಾಣಿಸುತ್ತಿದೆ. ಆತಂಕದ ಸಂಗತಿಯೆಂದರೆ, ಕಳೆದೆರಡು ದಶಕಗಳಲ್ಲಿ, ಆಧುನಿಕತೆ–ನಗರೀಕರಣಗಳ ಜಾಲದಲ್ಲಿ ಬಿದ್ದು ಗ್ರಾಮವಾಸಿಗಳೂ ಪರಿಸರಪ್ರೇಮವನ್ನು, ಸಾಂಗತ್ಯವನ್ನು ತೊರೆಯತೊಡಗಿರುವುದು. ನಮ್ಮ ನಾಳೆಗಳಿಗೆ ಅಗತ್ಯವಾಗಿರುವ ಪ್ರಕೃತಿ–ಪರಿಸರವನ್ನು ಉಳಿಸಲು ಜನಕ್ರಾಂತಿಯೇ ಆಗಬೇಕೇನೋ!
-ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು
ಕಳೆದ ನಾಲ್ಕು ವರ್ಷಗಳಿಂದ ಹೊಸ ಸಾಹಿತ್ಯ ಕೃತಿಗಳ ಖರೀದಿಯೇ ನಡೆದಿಲ್ಲ ಎಂಬುದು ಆತಂಕಕಾರಿ. ಡಿಜಿಟಲ್ ಲೈಬ್ರರಿ ಎಂಬ ಆಕರ್ಷಕ ಪದಗಳ ಹಿಂದೆ ಹಳ್ಳಿಗಳ ಗ್ರಂಥಾಲಯಗಳಲ್ಲಿ ಕನಿಷ್ಠ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲದಿರುವುದು ಅಕ್ಷಮ್ಯ ಅಪರಾಧ. ಸರ್ಕಾರವು ಕೂಡಲೇ ಈ ಆರ್ಥಿಕ ಬಿಕ್ಕಟ್ಟನ್ನು ನೀಗಿಸಿ, ಗ್ರಂಥಾಲಯಗಳ ಸಬಲೀಕರಣಕ್ಕೆ ಮುಂದಾಗಲಿ. ಪುಸ್ತಕ ಸಂಸ್ಕೃತಿಯನ್ನು ಕೊಲ್ಲುತ್ತಿರುವ ಆಡಳಿತಾತ್ಮಕ ಮಂದಗತಿಯ ಧೋರಣೆ ಕೊನೆಯಾಗಬೇಕು. ಸಾರ್ವಜನಿಕರಿಂದ ಸಂಗ್ರಹಿಸುತ್ತಿರುವ ಗ್ರಂಥಾಲಯ ಕರ ಬೇರೆ ಉದ್ದೇಶಕ್ಕೆ ಬಳಕೆಯಾಗದೆ, ಪುಸ್ತಕ ಸಂಸ್ಕೃತಿ ಬಲಗೊಳ್ಳಲು ಬಳಕೆಯಾಗುವಂತೆ ಸರ್ಕಾರ ನೋಡಿಕೊಳ್ಳಬೇಕು.
-ವಿಜಯಕುಮಾರ ಎಚ್.ಕೆ., ರಾಯಚೂರು
ಶಿಡ್ಲಘಟ್ಟದ ಕಾಂಗ್ರೆಸ್ ಮುಖಂಡ ಪೌರಾಯುಕ್ತೆಯನ್ನು ಅವಾಚ್ಯ ಪದಗಳಿಂದ ನಿಂದಿಸುತ್ತಿರುವ ಆಡಿಯೋ ಎಲ್ಲೆಡೆ ಹರಿದಾಡುತ್ತಿದೆ. ನಿಂದನೆಗೆ ಒಳಗಾಗಿರುವ ಪೌರಾಯುಕ್ತೆ, ನಿಂದಿಸಿರುವ ವ್ಯಕ್ತಿ ಹಾಗೂ ಹಾಲಿ ಶಾಸಕರು ಒಂದೇ ಸಮುದಾಯ
ದವರು. ಈ ಹಿನ್ನೆಲೆಯಲ್ಲಿಯೇ ಆಡಿಯೋದಲ್ಲಿ ನಿಂದಿಸುವ ವ್ಯಕ್ತಿ ‘ನಮ್ಮವರು ಅಂತ ಬಿಟ್ಟಿದ್ದೆ’ ಎಂಬ ಮಾತನ್ನೂ ಆಡಿದ್ದಾರೆ. ಒಂದು ವೇಳೆ ಈ ಮೂವರಲ್ಲಿ ಒಬ್ಬರು ಬೇರೆ ಧರ್ಮದವರೋ ಅಥವಾ ಬೇರೆ ಸಮುದಾಯದವರೋ ಆಗಿದ್ದರೆ ಪರಿಸ್ಥಿತಿ ಬೇರೆಯದೇ ಬಣ್ಣ ಪಡೆದುಕೊಳ್ಳುತ್ತಿತ್ತು. ಆ ಲೆಕ್ಕಾಚಾರ ಏನೇ ಇರಲಿ, ರಾಜಕೀಯವೆಂದರೆ ಪುಂಡರ ಕೊನೆಯ ಆಶ್ರಯ ತಾಣ ಎಂಬ ಮಾತು ಸುಳ್ಳಲ್ಲ ಎನ್ನುವುದಕ್ಕೆ ಈ ಘಟನೆ ನಿದರ್ಶನದಂತಿದೆ
-ಟಿ. ಜಯರಾಂ, ಕೋಲಾರ
ಬ್ಯಾಂಕ್‌ಗಳು ಅಥವಾ ಜೀವವಿಮೆ ಏಜೆಂಟರಿಂದ ಆಗಾಗ ನಮ್ಮ ಮೊಬೈಲ್‌ಗಳಿಗೆ ಕರೆ ಬರುತ್ತಿರುತ್ತದೆ. ಕರೆ ಸ್ವೀಕರಿಸಿದ ತಕ್ಷಣ ನಾವು ಕನ್ನಡದಲ್ಲಿ ‘ಏನು ಬೇಕಿತ್ತು?’ ಎಂದು ಪ್ರಶ್ನಿಸಿದರೆ ಅವರಿಗೆ ಏನೂ ಅರ್ಥವಾಗುವುದಿಲ್ಲ. ಸೈಬರ್ ವಂಚಕರು ಹಿಂದಿ–ಇಂಗ್ಲಿಷ್ ಬಳಸುತ್ತಾರೆ. ನಾವು ಕನ್ನಡದಲ್ಲಿ ಮಾತು ಮುಂದುವರಿಸಿದರೆ ಅವರು ಕರೆ ಕಡಿತ ಮಾಡುತ್ತಾರೆ. ಅಪರಿಚಿತ ಮಾರಾಟಗಾರರ ಕಿರಿ ಕಿರಿ ಹಾಗೂ ಸೈಬರ್ ವಂಚನೆಯಿಂದ ತಪ್ಪಿಸಿಕೊಳ್ಳಲು ‘ಕನ್ನಡವೇ ಸತ್ಯ, ಕನ್ನಡವೇ ನಿತ್ಯ’ ಎನ್ನುವುದನ್ನು ಅನುಸರಿಸುವುದು ಅತ್ಯುತ್ತಮ ಮಾರ್ಗ.
-ಹೆಚ್.ವಿ. ಶ್ರೀಧರ್, ಬೆಂಗಳೂರು
ಹಳ್ಳಿಗಳಲ್ಲಿ ನಿಯಮ ತಪ್ಪಿದರೆ ಅಲ್ಲಿನ ಹಿರಿಯರು ಪ್ರಶ್ನಿಸುತ್ತಾರೆ ಅಥವಾ ಪಂಚಾಯಿತಿ ಪ್ರಶ್ನೆ ಮಾಡುತ್ತದೆ. ಆದರೆ ಬೆಂಗಳೂರಿನಲ್ಲಿ ನಿಯಮ ಮೀರಿದರೂ ಕೇಳುವವರಿಲ್ಲ ಎಂಬ ಭಾವನೆ ಜನರಲ್ಲಿ ಮೂಡಿದೆ. ಆ ಕಾರಣದಿಂದಲೇ ಇಲ್ಲಿ ವಿದೇಶಿ ನುಸುಳುಕೋರರು ನೆಲೆಸಿರುವುದು ಸಾಧ್ಯವಾಗಿದೆ. ಪೊಲೀಸ್ ಇಲಾಖೆ, ವಲಸೆ ಇಲಾಖೆ ಮತ್ತು ಸರ್ಕಾರ ಈ ವಿಷಯದಲ್ಲಿ ಗಂಭೀರವಾಗಿ ಎಚ್ಚೆತ್ತುಕೊಳ್ಳಬೇಕು. ವಲಸಿಗರ ಸಮಗ್ರ ಸಮೀಕ್ಷೆ ನಡೆಸಬೇಕು. ವೀಸಾ ಅವಧಿ ಮುಗಿದ ವಿದೇಶಿಯರ ಮೇಲೆ ತಕ್ಷಣ ಕ್ರಮ ಜರುಗಬೇಕು. ನಕಲಿ ದಾಖಲೆ ನೀಡುವ ಮಧ್ಯವರ್ತಿಗಳಿಗೆ ಕಠಿಣ ಶಿಕ್ಷೆ ಅಗತ್ಯ. ಬೆಂಗಳೂರು ಕಾನೂನು ಪಾಲನೆಯ ನಗರವಾಗಬೇಕು, ಅಕ್ರಮದ ತಾಣವಾಗಬಾರದು. ಸರ್ಕಾರ ವಿಳಂಬ ಮಾಡದೆ ಜನರ ಭದ್ರತೆ ಮತ್ತು ಉದ್ಯೋಗ ರಕ್ಷಣೆಗೆ ಮುಂದಾಗಬೇಕು.
-ಹನುಮಂತ ಆರ್. ಬೇಕಮಲದಿನ್ನಿ, ಬಾಗಲಕೋಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.