ADVERTISEMENT

ವಾಚಕರ ವಾಣಿ | ಕೈದಿಗಳಿಗೆ ರಾಜಾತಿಥ್ಯ: ಪೊಲೀಸ್ ವೈಫಲ್ಯ

ವಾಚಕರ ವಾಣಿ
Published 18 ಡಿಸೆಂಬರ್ 2025, 23:30 IST
Last Updated 18 ಡಿಸೆಂಬರ್ 2025, 23:30 IST
<div class="paragraphs"><p>ಬಂಧನ  </p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಕೈದಿಗಳಿಗೆ ರಾಜಾತಿಥ್ಯ: ಪೊಲೀಸ್ ವೈಫಲ್ಯ

ADVERTISEMENT

ಸಮಾಜದಲ್ಲಿ ತಪ್ಪು ಎಸಗಿದವರಿಗೆ ಶಿಕ್ಷೆವಿಧಿಸಿ ಕಾರಾಗೃಹಕ್ಕೆ ಕಳುಹಿಸಲಾಗುತ್ತದೆ. ಆದರೆ, ಕಾರಾಗೃಹಗಳಲ್ಲಿ ಅಪರಾಧಿಗಳಿಗೆ ರಾಜಾತಿಥ್ಯ ಲಭಿಸುತ್ತಿರುವುದು ವಿಪರ್ಯಾಸ. ಜೈಲಿನಲ್ಲಿರುವ ಉಗ್ರರ ಕೈಯಲ್ಲಿ ಮೊಬೈಲ್, ರೌಡಿಗಳ ಹುಟ್ಟುಹಬ್ಬ ಆಚರಣೆಯ ಸುದ್ದಿ ಓದಿದಾಗ ಸರ್ಕಾರವು ಕಾರಾಗೃಹಗಳ ನಿರ್ವಹಣೆಯಲ್ಲಿ ಎಡವಿರುವುದು ಸ್ಪಷ್ಟ. ಕೈದಿಗಳ ಜೊತೆಗೆ ಪೊಲೀಸರು ಕೈಜೋಡಿಸಿದ್ದಾರೆಯೇ ಎಂಬ ಅನುಮಾನ ಕಾಡದಿರದು. ಮತ್ತೊಂದೆಡೆ, ಅಪರಾಧ ಜಗತ್ತಿನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಹಲವು ಪೊಲೀಸರು ಅಮಾನತುಗೊಂಡಿದ್ದಾರೆ. ಕೆಳಹಂತದ ಸಿಬ್ಬಂದಿಯ ಮೇಲೆ ನಿಗಾವಹಿಸುವುದರಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಗಳು ನಿರ್ಲಕ್ಷ್ಯವಹಿಸಿರುವುದಕ್ಕೆ ಈ ಪ್ರಕರಣಗಳು ನಿದರ್ಶನವಾಗಿವೆ

-ಗಗನ್ ಗುಂಡ್ಲಪಲ್ಲಿ, ಬಾಗೇಪಲ್ಲಿ

****


ಪುಕ್ಕಟೆ ಸಂಭಾವನೆ: ಬೊಕ್ಕಸ ಬರಿದು

‘ಬೌದ್ಧ ಬಿಕ್ಕುಗಳಿಗೂ ಸಂಭಾವನೆ’ ಸುದ್ದಿ ಓದಿ ಅಚ್ಚರಿಯಾಯಿತು. ಸಂವಿಧಾನದ ಪ್ರಕಾರ ಸರ್ಕಾರಗಳು, ಯಾವುದೇ ಮತ–ಧರ್ಮದ ಜೊತೆ ಗುರುತಿಸಿಕೊಳ್ಳಕೂಡದು. ಆದರೆ, ದೇವಾಲಯದ ಪೂಜಾರಿಗಳಿಗೆ, ಮಸೀದಿಯ ಇಮಾಮರಿಗೆ ಸರ್ಕಾರಗಳು ಸಂಭಾವನೆ ನೀಡುತ್ತಿರುವುದು ಸೋಜಿಗ. ಇದು ಸಾರ್ವಜನಿಕರು ಬೆವರು ಸುರಿಸಿ ಗಳಿಸಿ ಪಾವತಿಸುವ ತೆರಿಗೆ ಹಣವಲ್ಲವೆ? ಇದಕ್ಕೆ ಬದಲಾಗಿ ಮಕ್ಕಳಿಗೆ ಶಿಕ್ಷಣ, ರೈತರ ಬೆಳೆಗೆ ಸೂಕ್ತ ಬೆಲೆ, ಹೆಣ್ಣುಮಕ್ಕಳಿಗೆ ಶೌಚಾಲಯ ನಿರ್ಮಿಸಿದರೆ ಇಡೀ ಸಮಾಜ ಲಾಭ ಪಡೆಯುತ್ತದೆ. ಪಿತ್ರಾರ್ಜಿತವಾದ ಕಸುಬುಗಳಿಗೆ ಸರ್ಕಾರಿ ಬೊಕ್ಕಸ ಬಳಕೆ ಅಸಮಂಜಸ.

-ಬಿ.ಆರ್. ಅಣ್ಣಾಸಾಗರ, ಸೇಡಂ

****

ಚುನಾವಣೆ ವಿಳಂಬ: ಜನತಂತ್ರದ ಕಗ್ಗೊಲೆ

ಸಂವಿಧಾನಕ್ಕೆ 73 ಮತ್ತು 74ನೇ ತಿದ್ದುಪಡಿ ಮೂಲಕ ಅಧಿಕಾರ ವಿಕೇಂದ್ರೀಕರಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಂವಿಧಾನದ 243(ಇ) ವಿಧಿಯ ಪ್ರಕಾರ, ಸ್ಥಳೀಯ ಸಂಸ್ಥೆ‌ಗಳಿಗೆ ಸಕಾಲಕ್ಕೆ ಚುನಾವಣೆ ನಡೆಸುವುದು ರಾಜ್ಯಗಳ ಜವಾಬ್ದಾರಿ. ಆದರೆ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಯ ಅಧಿಕಾರಾವಧಿ ಪೂರ್ಣಗೊಂಡು ನಾಲ್ಕೂವರೆ ವರ್ಷ ಕಳೆದರೂ ಚುನಾವಣೆ ನಡೆಸದಿರುವುದು ದುರದೃಷ್ಟಕರ. ಚುನಾವಣೆ ನಡೆಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸಿವೆ. ಸ್ಥಳೀಯ ಸರ್ಕಾರಗಳ ಅಧಿಕಾರವನ್ನು ಮೊಟಕುಗೊಳಿಸುವ ಹುನ್ನಾರ ಇದರ ಹಿಂದಿದೆ ಎನಿಸುತ್ತದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ.

-ಮಹೇಶ ಕೇವಂಟಗಿ ಕುಮಸಿ, ಕಲಬುರಗಿ

****

‘ಬಯಲಾಟ’ ನೆಲ ಸಂಸ್ಕೃತಿಯ ಪ್ರತೀಕ

ಸೊರಬ ತಾಲ್ಲೂಕಿನಲ್ಲಿ ‘ಬಯಲಾಟ’ ಉಳಿಸಲು ನಡೆಯುತ್ತಿರುವ ಪ್ರಯತ್ನಗಳಿಗೆ ಸಮಕಾಲೀನ ಸಂದರ್ಭದಲ್ಲಿ ವಿಶೇಷ ಮಹತ್ವವಿದೆ. ಡಿಜೆ ಸಂಗೀತದ ಅಬ್ಬರ ಮತ್ತು ಮೊಬೈಲ್ ಗೀಳಿನ ನಡುವೆ ನೆಲದ ಜೀವಂತಿಕೆಯಾದ ಬಯಲಾಟ ನೇಪಥ್ಯಕ್ಕೆ ಸರಿಯುತ್ತಿರುವುದು ಕನ್ನಡಿಗರೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ವಿಚಾರ. ಕೇವಲ ಮನರಂಜನೆಯ ಸಾಧನವಾಗಿ ನೋಡದೆ, ನೈತಿಕ ಮೌಲ್ಯಗಳನ್ನು ಜನಸಾಮಾನ್ಯರಿಗೆ ತಲಪಿಸುವ ರಂಗಭೂಮಿಯ ಮೂಲ ಪ್ರಕಾರವನ್ನು ರಕ್ಷಿಸು
ವುದು ನಮ್ಮೆಲ್ಲರ ಹೊಣೆ. ಸರ್ಕಾರವು ಇಂತಹ ಕಲಾಪ್ರಕಾರಗಳಿಗೆ ಅನುದಾನ ಒದಗಿಸಬೇಕು. ಶಾಲೆ–ಕಾಲೇಜುಗಳಲ್ಲಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಬೇಕಿದೆ.

-ನಿರಂಜನ್ ಎಚ್.ಬಿ., ಸಾಗರ

****

ಮನರಂಜನಾ ತಂಡಗಳಿಗೆ ಕಡಿವಾಣ ಹಾಕಿ

ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಮ್ಯೂಸಿಕ್‌ ಮೈಲಾರಿ ಎಂಬಾತನ ಬಂಧನವಾಗಿದೆ. ಉತ್ತರ ಕರ್ನಾಟಕದ ಬಹುತೇಕ ಕಡೆಗಳಲ್ಲಿ ಮದುವೆ, ನಿಶ್ಚಿತಾರ್ಥ, ನಾಮಕರಣ ಸೇರಿದಂತೆ ಶುಭ ಕಾರ್ಯಕ್ರಮಗಳಲ್ಲಿ ಹಾಡು–ನೃತ್ಯಗಾರರ ತಂಡಗಳನ್ನು ಕರೆಸುವುದು ವಾಡಿಕೆ. ಈ ಬೇಡಿಕೆ ಪೂರೈಸಲು ಗಲ್ಲಿಗಲ್ಲಿಗಳಲ್ಲಿ ಹಾಡುಗಾರರ ತಂಡಗಳು ಹುಟ್ಟಿಕೊಂಡಿವೆ. ವಿಚಿತ್ರ ಎಂದರೆ ಇವರ‍್ಯಾರು ಸಂಗೀತ, ನೃತ್ಯ ಕಲಿತವರಲ್ಲ! ಜಾನಪದದ ಹೆಸರಿನಲ್ಲಿ ಚಲನಚಿತ್ರ ಗೀತೆಗಳ ಕರೋಕೆಯಲ್ಲಿ (ಟ್ರ್ಯಾಕ್) ತಮ್ಮದೇ ರಚನೆಯ ದ್ವಂದ್ವಾರ್ಥ– ಅಶ್ಲೀಲ ಸಾಹಿತ್ಯ ರಚಿಸಿ ಹಾಡುತ್ತಾರೆ. ಈ ಹಾಡುಗಳ ನೃತ್ಯಕ್ಕೆ ಹೆಣ್ಣುಮಕ್ಕಳನ್ನು ಬಳಸಿಕೊಳ್ಳುತ್ತಾರೆ. ಕಾರ್ಯಕ್ರಮಕ್ಕಾಗಿ ತಂಡ ಕಟ್ಟಿಕೊಂಡು ಊರೂರು ಸುತ್ತುವ ಈ ಹಾಡುಗಾರರ ತಂಡದಲ್ಲಿರುವ ಹೆಣ್ಣುಮಕ್ಕಳ ರಕ್ಷಣೆಯ ಹೊಣೆಗಾರಿಕೆ ಯಾರದು? 

-ಸಮೀರ ಹಾದಿಮನಿ, ಆಲಮೇಲ 

****

ನಿರುದ್ಯೋಗ: ಯುವಸಂಪತ್ತು ನಾಶ

ಪದವಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಐಎಎಸ್, ಐಪಿಎಸ್‌ನಂತಹ ಹುದ್ದೆಗೇರುವ ಹಂಬಲ ಇರುತ್ತದೆ. ಕೆಎಎಸ್‌ ಪರೀಕ್ಷೆ ಬರೆಯುವ ಆಸೆಯೂ ಇರುತ್ತದೆ. ಇದಕ್ಕಾಗಿ ಸ್ಪರ್ಧಾಲೋಕಕ್ಕೆ ಕಾಲಿಟ್ಟು ಪರೀಕ್ಷೆಗೆ ಕಠಿಣ ತಯಾರಿ ನಡೆಸುತ್ತಾರೆ. ಹುಟ್ಟಿದ ಊರು ಬಿಟ್ಟು, ಮಹಾನಗರ ಪ್ರದೇಶಗಳಲ್ಲಿರುವ ಕೋಚಿಂಗ್‌ ಕೇಂದ್ರಗಳಿಗೆ ಸೇರುತ್ತಾರೆ. ಲಕ್ಷಾಂತರ ರೂಪಾಯಿ ವ್ಯಯಿಸುತ್ತಾರೆ. ಆದರೆ, ಸರ್ಕಾರ ಕಾಲಕಾಲಕ್ಕೆ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸುತ್ತಿಲ್ಲ. ಸರಿಯಾದ ರೀತಿಯಲ್ಲಿ ಪರೀಕ್ಷೆ ನಡೆಸದೆ ಹಗರಣಗಳ ನೆಪವೊಡ್ಡಿ ವಿದ್ಯಾರ್ಥಿಗಳ ಜೀವನದೊಂದಿಗೆ  ಚೆಲ್ಲಾಟವಾಡುತ್ತಿದೆ. ಕೆಲಸ ಸಿಗದ ವಿದ್ಯಾರ್ಥಿಗಳು ಮರಳಿ ಊರಿಗೆ ಹೋಗಲಾರದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದು ಸರ್ಕಾರ ಹಾಗೂ ಭ್ರಷ್ಟ ಅಧಿಕಾರಿಗಳ ಅಸಡ್ಡೆಗೆ ಹಿಡಿದ ಕನ್ನಡಿ. ಸರ್ಕಾರ ಈಗಲಾದರೂ ಎಚ್ಚತ್ತುಕೊಳ್ಳದಿದ್ದರೆ ಯುವಸಂಪತ್ತು ತನ್ನಿಂದ ತಾನೇ ನಾಶವಾಗುತ್ತದೆ. 

-ಕೃತಿಕಾ ಎಸ್.ವೈ., ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.