ಕ್ರಸ್ಟ್ ಗೇಟ್ ಅಳವಡಿಕೆ: ವಿಳಂಬ ಬೇಡ
ತುಂಗಭದ್ರಾ ಜಲಾಶಯಕ್ಕೆ ಹೊಸದಾಗಿ ಕ್ರಸ್ಟ್ ಗೇಟ್‌ಗಳನ್ನು ಅಳವಡಿಸಲು ಸರ್ಕಾರ ಮುಂದಾಗಿದೆ. ಹಾಗಾಗಿ, ಎರಡನೇ ಬೆಳೆಗೆ ನೀರು ಹರಿಸುವುದಿಲ್ಲವೆಂಬ ಸರ್ಕಾರದ ತೀರ್ಮಾನವನ್ನು ರಾಜಕೀಯವಾಗಿ ನೋಡದೆ, ಜಲಾಶಯದ ಭದ್ರತೆಯ ದೃಷ್ಟಿಯಿಂದ ನೋಡಬೇಕಿದೆ.
ಗೇಟ್‌ಗಳ ಅಳವಡಿಕೆಯು ಸ್ವಲ್ಪ ನಿಧಾನವಾದರೂ ಜಲಾಶಯದ ಅಸ್ತಿತ್ವಕ್ಕೆ ಧಕ್ಕೆಯಾಗುವ ಸಾಧ್ಯತೆಯಿದೆ. ಗೇಟ್‌ಗಳ ಅಳವಡಿಕೆ ಕಾರ್ಯ ವಿಳಂಬವಾದರೆ ಜಲಾಶಯದ ಅಚ್ಚುಕಟ್ಟು ಪ್ರದೇಶದ ಜನರನ್ನು ಬಡವರನ್ನಾಗಿ ಮಾಡಿದಂತೆಯೇ ಸರಿ. ವಿಳಂಬ ಮಾಡದೆ ಕೂಡಲೇ, ಹೊಸ ಗೇಟ್‌ಗಳ ಅಳವಡಿಕೆ ಕೆಲಸವನ್ನು ಆರಂಭಿಸಬೇಕಿದೆ.
– ರಂಗಸ್ವಾಮಿ ಮಾರ್ಲಬಂಡಿ, ಕರ್ನೂಲು
__________________
ಕುಕ್ಕೆ ಸುಬ್ರಹ್ಮಣ್ಯ: ಭಕ್ತರಿಗೆ ಸೌಲಭ್ಯ ಕಲ್ಪಿಸಿ
ಇತ್ತೀಚೆಗೆ ಮುಜರಾಯಿ ಇಲಾಖೆಗೆ ಸೇರಿರುವ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಸಂಸಾರ ಸಮೇತ ಭೇಟಿ ನೀಡಿದ್ದೆ. ಅಲ್ಲಿ ಭಕ್ತರ ಸಂಖ್ಯೆ ಅಧಿಕವಾಗಿದ್ದರಿಂದ ನೂಕುನುಗ್ಗಲು ಉಂಟಾಗಿತ್ತು. ಅಂಗವಿಕಲರು ಮತ್ತು ಹಿರಿಯ ನಾಗರಿಕರಿಗೆ ದೇವರ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿರಲಿಲ್ಲ. ಭಕ್ತರು ದೇಗುಲದಿಂದ ಹೊರಬರುವ ದಾರಿ ವ್ಯವಸ್ಥೆಯೂ ಸರಿಯಾಗಿರಲಿಲ್ಲ. ರಜಾ ದಿನಗಳಲ್ಲಿ ಭಕ್ತರ ಸಂಖ್ಯೆ ಅಧಿಕವಾಗಿರುತ್ತದೆ. ಕಾಲ್ತುಳಿತ ಸಂಭವಿಸುವ ಸಾಧ್ಯತೆ ಇರುತ್ತದೆ. ಭಕ್ತರಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸುವುದು ದೇಗುಲದ ಆಡಳಿತ ಮಂಡಳಿಯ ಹೊಣೆಯಾಗಿದೆ.
– ಎಚ್. ದೊಡ್ಡಮಾರಯ್ಯ, ಬೆಂಗಳೂರು
__________________
ಭಯೋತ್ಪಾದನೆ: ವೈದ್ಯರ ಹೆಸರಿಗೆ ಕಳಂಕ
ದೆಹಲಿಯ ಕೆಂಪು ಕೋಟೆ ಬಳಿ ನಡೆದ ಬಾಂಬ್ ಸ್ಫೋಟ ನೆನಪಿಸಿಕೊಂಡರೆ ಮೈ ನಡುಗುತ್ತದೆ. ಇಡೀ ದೇಶವೇ ಬೆಚ್ಚಿಬೀಳುವಂತೆ ಮಾಡಿದ ಈ ಹೇಯಕೃತ್ಯ ಎಸಗಿದ ವ್ಯಕ್ತಿಗಳು ವೈದ್ಯರು ಎಂದು ತಿಳಿದು ಇನ್ನೂ ದಿಗ್ಭ್ರಮೆಯಾಯಿತು. ಜನರ ಪ್ರಾಣ ಉಳಿಸಬೇಕಾದ ವೈದ್ಯರೇ ಹತ್ತಾರು ಮುಗ್ಧ ಜನರ ಪ್ರಾಣ ತೆಗೆದದ್ದು ಆತಂಕಕಾರಿ.
ವೈದ್ಯರೆಂಬ ಮುಖವಾಡ ಧರಿಸಿರುವ ಇನ್ನೆಷ್ಟು ಮೃಗಗಳಿವೆಯೋ ತಿಳಿಯದು. ಅವರನ್ನು ಪತ್ತೆಹಚ್ಚಿ ಬಲಿ ಹಾಕದಿದ್ದರೆ ದೇಶದಲ್ಲಿ ಕೋಮು ಸಾಮರಸ್ಯಕ್ಕೆ ಉಳಿಗಾಲವಿಲ್ಲ.
– ಮಂಜುನಾಥ್ ಜೈನ್ ಎಂ.ಪಿ., ಮಂಡ್ಯ
__________________
ಎ.ಐ ದುರ್ಬಳಕೆಗೆ ಮೂಗುದಾರ ಅಗತ್ಯ
‘ಸುಳ್ಳಿಗೀಗ ಸಂಭ್ರಮದ ಕಾಲ’ ಲೇಖನವು (ಲೇ: ನಾಗೇಶ ಹೆಗಡೆ, ಪ್ರ.ವಾ., ನ. 13) ಕೃತಕ ಬುದ್ಧಿಮತ್ತೆಯಿಂದ ಆಗುತ್ತಿರುವ ಅವಾಂತರಗಳನ್ನು ತೆರೆದಿಟ್ಟಿದೆ. ಸತ್ಯದ ತಲೆಯ ಮೇಲೆ ಕುಟ್ಟಿ ಹೇಳುವ ಸುಳ್ಳಿನ ಆವಿಷ್ಕಾರ ವಿಪರ್ಯಾಸವೇ ಸರಿ. ಜನರು ಅಸತ್ಯಗಳ ಜಾಲದಲ್ಲಿ ಸಿಲುಕಿ ನಲುಗುತ್ತಿರುವುದು ದುಃಖದಾಯಕ ಸಂಗತಿ. ಜನಸಾಮಾನ್ಯರ ಅಸಹಾಯಕತೆಯನ್ನು ಸುಳ್ಳಿನ ತಕ್ಕಡಿಯಲ್ಲಿ ತೂಗುತ್ತಿರುವ ಅದೃಶ್ಯ ಭ್ರಷ್ಟತೆಗೆ ಕಡಿವಾಣ ಹಾಕಬೇಕಿದೆ.
ತಂತ್ರಜ್ಞಾನದ ಹೊಸ ಆವಿಷ್ಕಾರಗಳು ಜಗತ್ತಿನ ಒಳಿತಿಗೆ ನೆರವಾಗಬೇಕೇ ಹೊರತು ವಿನಾಶದ ಅಸ್ತ್ರವಾಗಬಾರದು. ಕೃತಕ ಬುದ್ಧಿಮತ್ತೆಯನ್ನು ಬಂಡವಾಳ ಮಾಡಿಕೊಂಡಿರುವವರಿಗೆ ಮೂಗುದಾರ ಹಾಕಬೇಕಿದೆ.
– ಅನುಪಮ ಸುಲಾಖೆ, ಹೊಸಪೇಟೆ
__________________
ತರಬೇತಿ: ಅಂತಿಮಪಟ್ಟಿ ಪ್ರಕಟ ವಿಳಂಬ
ಸಮಾಜ ಕಲ್ಯಾಣ ಇಲಾಖೆಯು ಇಂದಿರಾಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಕೆಎಎಸ್, ಗ್ರೂಪ್ ‘ಸಿ’, ಬ್ಯಾಂಕಿಂಗ್, ಆರ್‌ಆರ್‌ಬಿ, ನ್ಯಾಯಾಂಗ ಸೇವೆಯ ಪೂರ್ವಭಾವಿ ಪರೀಕ್ಷೆಗೆ ಉಚಿತ ತರಬೇತಿ ಮತ್ತು ಶಿಷ್ಯವೇತನ ನೀಡುತ್ತದೆ. ಇದರ ಸಲುವಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಿ ಅದರಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಶಿಷ್ಯವೇತನದ ಸೌಲಭ್ಯ ಕಲ್ಪಿಸುತ್ತದೆ. ಅಭ್ಯರ್ಥಿಯು ಪ್ರವೇಶ ಪಡೆದ ತರಬೇತಿ ಕೇಂದ್ರಗಳಿಗೆ ಸರ್ಕಾರದಿಂದಲೇ ಹಣ ಪಾವತಿ ಮಾಡಲಾಗುತ್ತದೆ. 2024–25ನೇ ಸಾಲಿಗೆ ಕಳೆದ ಜೂನ್‌ನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಗಿತ್ತು.
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಫಲಿತಾಂಶವನ್ನು ಕೆಇಎಯಿಂದ ಬಿಡುಗಡೆ ಮಾಡಲಾಗಿದೆ. ಆದರೆ, ಆಯ್ಕೆಯಾದ ಅಭ್ಯರ್ಥಿಗಳ ಅಂತಿಮಪಟ್ಟಿಯನ್ನು ಇಲ್ಲಿಯವರೆಗೂ ಪ್ರಕಟಿಸಿಲ್ಲ. ಇದರಿಂದ ಅಭ್ಯರ್ಥಿಗಳು ಕಂಗಾಲಾಗಿದ್ದಾರೆ. ಸಮಾಜ ಕಲ್ಯಾಣ ಸಚಿವರು ಈ ಬಗ್ಗೆ ಗಮನಹರಿಸಿ ತ್ವರಿತವಾಗಿ ಅರ್ಹರ ಅಂತಿಮಪಟ್ಟಿಯ ಬಿಡುಗಡೆಗೆ ಕ್ರಮವಹಿಸಬೇಕಿದೆ.
– ದರ್ಶನ್ ಚಂದ್ರ ಎಂ.ಪಿ., ಮುಕ್ಕಡಹಳ್ಳಿ