ADVERTISEMENT

ರೊನಾಲ್ಡೊ ನಿರ್ಭೀತ ನಡೆ ಶುಭಸೂಚಕ

​ಪ್ರಜಾವಾಣಿ ವಾರ್ತೆ
Published 17 ಜೂನ್ 2021, 19:30 IST
Last Updated 17 ಜೂನ್ 2021, 19:30 IST

ಪೋರ್ಚುಗಲ್‌ನ ಫುಟ್‌ಬಾಲ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಸುದ್ದಿಗೋಷ್ಠಿಯಲ್ಲಿ
ಟೇಬಲ್‌ ಮೇಲಿನ ತಂಪು ಪಾನೀಯಗಳನ್ನು ಪಕ್ಕಕ್ಕೆ ತಳ್ಳಿ ನೀರಿನ ಬಾಟಲಿಯನ್ನು ಇಟ್ಟು ‘ಆರೋಗ್ಯದಿಂದ ಇರಲು ನೀರನ್ನು ಕುಡಿಯಿರಿ’ ಎಂಬ ಸಾರ್ವಕಾಲಿಕ ಸತ್ಯವನ್ನು ಹೇಳಿದ್ದು ವರದಿಯಾಗಿದೆ (ಪ್ರ.ವಾ., ಜೂನ್‌ 17). ಸೆಲೆಬ್ರಿಟಿಗಳು ಜನರ ಆರೋಗ್ಯವನ್ನು ಕಡೆಗಣಿಸಿ, ತಾವು ಬಳಸದ ವಸ್ತುಗಳ ಜಾಹೀರಾತುಗಳಲ್ಲಿ ಪಾಲ್ಗೊಂಡು, ಆ ವಸ್ತುಗಳಿಂದ ಆಗುವ ಕೆಟ್ಟ ಪರಿಣಾಮಗಳು ತಿಳಿದಿದ್ದರೂ ಅವುಗಳನ್ನು ಬಳಸುವಂತೆ ಅಭಿಮಾನಿಗಳಿಗೆ ಕರೆ ನೀಡುತ್ತಾರೆ. ಹೀಗಿರುವಾಗ, ತಮ್ಮ ಮಗನ ಉದಾಹರಣೆಯನ್ನೇ ತೆಗೆದುಕೊಂಡು, ಹಾನಿಕಾರಕ ಪಾನೀಯಗಳಿಂದ ದೂರವಿರಿ ಎಂದು ಜನರಿಗೆ ತಿಳಿಹೇಳಿ ಸಾಮಾಜಿಕ ಕಾಳಜಿ ತೋರಿದ ರೊನಾಲ್ಡೊ ಅವರು ಇತರ ಸೆಲೆಬ್ರಿಟಿಗಳಿಗೆ ಮಾದರಿ.

ತಂಪುಪಾನೀಯಗಳಲ್ಲಿ ಹಾನಿಕಾರಕ ರಾಸಾಯನಿಕಗಳು ಇರುವುದನ್ನು ಹಲವು ವಿಜ್ಞಾನಿಗಳು ಜಗಜ್ಜಾಹೀರುಗೊಳಿಸಿದ್ದರೂ, ಕೆಲವು ರೈತರು ಅವುಗಳನ್ನು ಕ್ರಿಮಿನಾಶಕವಾಗಿ ಬಳಸಿದ್ದು ತಿಳಿದಿದ್ದರೂ, ಜನರು ಅದರಲ್ಲೂ ಯುವಜನ ಅವುಗಳನ್ನು ಪ್ರತಿನಿತ್ಯ ಬಳಸಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರೊನಾಲ್ಡೊ ಅವರಂಥವರು ತಮ್ಮ ಜನಪರ ನಿಲುವನ್ನು ನಿರ್ಭೀತಿಯಿಂದ ಮಾಧ್ಯಮಗಳಲ್ಲಿ ವ್ಯಕ್ತಪಡಿಸಿರುವುದು, ತಡವಾದರೂ ಶುಭಸೂಚಕ. ಹಾಗೆಯೇ ಇತರ ಸೆಲೆಬ್ರಿಟಿಗಳು ಜನರ ಆರೋಗ್ಯಕ್ಕೆ ಮಾರಕವಾಗುವ ವಸ್ತುಗಳ ಬಗ್ಗೆ ಜಾಹೀರಾತು ನೀಡುವುದನ್ನು ಬಿಟ್ಟು, ಜನರ ಆರೋಗ್ಯಕ್ಕೆ, ಪರಿಸರಕ್ಕೆ ಪೂರಕವಾಗುವ ವಸ್ತುಗಳ ಬಗೆಗಿನ ಜಾಹೀರಾತುಗಳಲ್ಲಿ ಮಾತ್ರ ಕಾಣಿಸಿಕೊಂಡರೆ, ಅವರನ್ನು ಅನುಸರಿಸುವ ಜನರಿಗೂ ಒಳಿತಾಗುತ್ತದೆ, ಸಮಾಜಕ್ಕೂ ಒಳ್ಳೆಯ ಸಂದೇಶ ರವಾನಿಸಿದಂತೆ ಆಗುತ್ತದೆ.

ಡಾ. ಆನಂದ್‌ ಎನ್.ಎಲ್‌., ಅಜ್ಜಂಪುರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.