ADVERTISEMENT

ದೂರವಾಗುತ್ತಿರುವ ದೂರದರ್ಶನ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2020, 18:06 IST
Last Updated 30 ಅಕ್ಟೋಬರ್ 2020, 18:06 IST

ಕೊರೊನಾ ಸೋಂಕು ಕಾಣಿಸಿಕೊಂಡಾಗಿನಿಂದ ಮಾಹಿತಿ ಹಾಗೂ ಮನರಂಜನೆಗಾಗಿ ಮುದ್ರಣ, ವಿದ್ಯುನ್ಮಾನ ಮಾಧ್ಯಮಗಳ ಮೇಲಿನ ಮನುಷ್ಯನ ಅವಲಂಬನೆ ಹಿಂದಿಗಿಂತ ಹೆಚ್ಚಾಗಿದೆ. ಆದರೆ ಸರ್ಕಾರಿ ಸ್ವಾಮ್ಯದ ದೂರದರ್ಶನ ವಾಹಿನಿ ಮಾತ್ರ ಸಾರ್ವಜನಿಕರಿಂದ ದೂರವಾಗುತ್ತಿರುವುದು ವಿಷಾದದ ಸಂಗತಿ. ಎಂಬತ್ತರ ದಶಕದಲ್ಲಿ ಆರಂಭವಾದ ಈ ವಾಹಿನಿಯು ತನ್ನದೇ ಆದ ನೀತಿ ಸಂಹಿತೆಯನ್ನು ಹೊಂದಿ, ಅದರ ಪ್ರಕಾರ ಅನೇಕ ರಚನಾತ್ಮಕ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಸಾರ್ವಜನಿಕರ ತೆರಿಗೆ ಹಣದಲ್ಲಿ, ಸಾರ್ವಜನಿಕರ ಹಿತಾಸಕ್ತಿಗೆ ಅನುಗುಣವಾಗಿ ನಡೆಯುತ್ತಿರುವ ಈ ವಾಹಿನಿಯು ಕಳೆದ ಮೂರಕ್ಕೂ ಅಧಿಕ ದಶಕಗಳಿಂದ ಜನಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಇತ್ತೀಚೆಗೆ ಮಾತ್ರ ಈ ವಾಹಿನಿಯು ಗುಣಮಟ್ಟದ ಕಾರ್ಯಕ್ರಮಗಳ ಕೊರತೆ, ಪ್ರಾಯೋಜಕ ಕಾರ್ಯಕ್ರಮಗಳ ಪ್ರಸಾರ ವೆಚ್ಚದಲ್ಲಿ ಹೆಚ್ಚಳ, ಸಿಬ್ಬಂದಿ ಕೊರತೆ, ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ಹಿನ್ನಡೆಯಂತಹ ಅನೇಕ ಕಾರಣಗಳಿಂದ ಜನರಿಂದ ದೂರವಾಗುತ್ತಿದೆ.

ಸಿಬ್ಬಂದಿ ನೇಮಕಾತಿ ನಿಂತುಹೋಗಿ ಹತ್ತಾರು ವರ್ಷಗಳೇ ಸಂದಿವೆ. ಗ್ರೂಪ್ ‘ಎ’ ಹುದ್ದೆಯಿಂದ ಗ್ರೂಪ್ ‘ಡಿ’ ಹುದ್ದೆಯವರೆಗೂ ಕೇಂದ್ರ ಸರ್ಕಾರವು ನೇಮಕಾತಿಯನ್ನು ನಿಲ್ಲಿಸಿದೆ. ಸಿಬ್ಬಂದಿ ಕೊರತೆಯ ಜೊತೆಗೆ ಇರುವ ಸಿಬ್ಬಂದಿ ಯಲ್ಲಿಯೇ ಕೆಲವರ ಆಲಸ್ಯತನದಿಂದ ಹೊಸದಾಗಿ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲವಾಗಿದೆ. ಜೊತೆಗೆ ‘ಚಂದನ’ ವಾಹಿನಿಗೆ ಕನ್ನಡ ಬಾರದೆ ಇರುವ ಕೆಲವು ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಇಂತಹ ಕಾರಣಗಳಿಂದ ದೂರದರ್ಶನ ವಾಹಿನಿಯು ಈಗಿನ ಖಾಸಗಿ ಚಾನೆಲ್‍ಗಳ ಆರ್ಭಟದಲ್ಲಿ ಸ್ಪರ್ಧೆಗೆ ಇಳಿಯಲು ಕಷ್ಟವಾಗಿದೆ.

ಸಿರಿಗೇರಿ ಯರಿಸ್ವಾಮಿ, ಬಳ್ಳಾರಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.