ADVERTISEMENT

ಆಧುನಿಕ ಕೃಷಿಯ ವಿನಾಶಕಾರಿ ರೂಪ

​ಪ್ರಜಾವಾಣಿ ವಾರ್ತೆ
Published 2 ಜುಲೈ 2020, 19:30 IST
Last Updated 2 ಜುಲೈ 2020, 19:30 IST

ಮಲೆನಾಡಿನ ಅಂಚಿನಲ್ಲಿರುವ ನಮ್ಮ ಮನೆಯಲ್ಲಿ ವಾಸವಾಗಿದ್ದ ಪಾರಿವಾಳಗಳ ಸಂಖ್ಯೆ ಕೆಲ ದಿನಗಳಿಂದ ಕಡಿಮೆಯಾಗುತ್ತಾ ಹೋಗಿತ್ತು. ಇದಕ್ಕೆ ಕಾರಣ ಹಾವುಗಳಿರಬಹುದು ಎಂದು ಊಹಿಸಿದ್ದೆ. ಆದರೆ ಪಾರಿವಾಳಗಳು ನಮ್ಮ ಮನೆಯ ಹತ್ತಿರವೇ ಸತ್ತು ಬಿದ್ದಿದ್ದುದನ್ನು ನೋಡಿದಾಗ ಆಶ್ಚರ್ಯವಾಯಿತು. ಅವುಗಳ ಗೂಡಿನ ಕೆಳಗೆ ಬಿದ್ದಿದ್ದ ಜೋಳದ ಕಾಳುಗಳನ್ನು ಗಮನಿಸಿದಾಗ, ಈ ಸಾವಿಗೆ ಗೋವಿನ ಜೋಳದ ಬೀಜವೇ ಕಾರಣ ಎಂಬುದು ಖಚಿತವಾಯಿತು. ನಮ್ಮ ಮನೆಯ ಸುತ್ತಮುತ್ತ ಜೋಳ ಬಿತ್ತನೆ ಮಾಡಿದ ಹೊಲಗಳಿಗೆ ಆಹಾರವನ್ನು ಹುಡುಕಿಕೊಂಡು ಹೋಗಿ, ವಿಷಯುಕ್ತ ಬಿತ್ತನೆ ಬೀಜಗಳನ್ನು ತಿಂದು ಮರಳಿದ ನಂತರ ನಿಧಾನವಾಗಿ ಅವು ಸಾವನ್ನಪ್ಪುತ್ತಿವೆ.

ರೈತ ಹೊಲಗಳಲ್ಲಿ ಬಿತ್ತನೆ ಮಾಡುವಾಗಲೇ ಮಣ್ಣು ಮತ್ತು ಬೀಜಕ್ಕೆ ವಿಷವಿಕ್ಕಿ, ಯಾವ ಕೀಟಗಳೂ ಬರಬಾರದೆಂದು ಹುನ್ನಾರ ಮಾಡಿರುತ್ತಾನೆ ಎಂಬುದು, ಪಾಪ ಈ ಮೂಕ ಪಕ್ಷಿಗಳಿಗೇನು ಗೊತ್ತು? ಇದರಿಂದ ಪಾರಿವಾಳ ಮಾತ್ರವಲ್ಲ, ಅಲ್ಲಿನ ಸಕಲ ಜೀವಿಗಳ ಉಳಿವಿಗೂ ಅಪಾಯ ಉಂಟಾಗಿದೆ. ಇದು, ಮುಂದಿನ ದಿನಗಳಲ್ಲಿ ಮನುಷ್ಯನಿಗೂ ಅಪಾಯವನ್ನು ತಂದೊಡ್ಡುವುದು ಖಚಿತ. ಮಲೆನಾಡಿನಲ್ಲಿ ಕೆಲ ದಿನಗಳ ಹಿಂದೆ ಅಡಿಕೆ ಸಿಂಗಾರ ಅಥವಾ ಹೂವಿಗೆ ರಾಸಾಯನಿಕ ಕೀಟನಾಶಕವನ್ನು ಸಿಂಪಡಿಸಿ ಲಕ್ಷಗಟ್ಟಲೆ ಜೇನುನೊಣಗಳ ಮಾರಣಹೋಮ ನಡೆದರೂ ಸರ್ಕಾರ, ರೈತ ಸಂಘಟನೆಗಳು ಮೌನ ತಾಳಿದ್ದು, ನಮ್ಮ ಆಧುನಿಕ ಕೃಷಿ ಪದ್ಧತಿಯ ವಿನಾಶಕಾರಿ ರೂಪವನ್ನು ತೋರಿಸುತ್ತದೆ.

-ಶ್ಯಾಮಲಾ ಹೆಗಡೆ, ಅಪ್ಪಿಕೊಪ್ಪ, ಬನವಾಸಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.