ADVERTISEMENT

ಅಂತರರಾಷ್ಟ್ರೀಯ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2021, 19:30 IST
Last Updated 5 ಫೆಬ್ರುವರಿ 2021, 19:30 IST

ಹಾಲಿವುಡ್ ನಟಿ ಮತ್ತು ಗಾಯಕಿ ರಿಯಾನಾ ನಮ್ಮ ದೇಶದ ರೈತ ಚಳವಳಿ ಕುರಿತಂತೆ ಒಂದು ಸಾಲಿನ ಪ್ರತಿಕ್ರಿಯೆ
ಯೊಂದಿಗೆ ಮಾಧ್ಯಮವೊಂದರ ಮಾಹಿತಿಯನ್ನು ಹಂಚಿಕೊಂಡ ಮೇಲೆ ಇನ್ನೂ ಕೆಲವು ವಿದೇಶಿ ಸೆಲೆಬ್ರಿಟಿಗಳು ರೈತರಿಗೆ ಬೆಂಬಲಿಸುವ ಮಾತನಾಡಿದ್ದಾರೆ. ಇದು ‘ಸಹಜವಾಗಿಯೇ’ ಸರ್ಕಾರಕ್ಕೆ ಕಸಿವಿಸಿಯುಂಟು ಮಾಡಿದೆ.

ರೈತ ಚಳವಳಿಯು ನಮ್ಮ ದೇಶದ ಆಂತರಿಕ ವಿಷಯವೆಂದೂ ಈ ಬಗ್ಗೆ ವಿದೇಶಿಯರು ತಲೆ ತೂರಿಸಬಾರದೆಂದೂ ಒತ್ತಾಯಿಸುವ ಹೇಳಿಕೆಗಳೂ ಬರುತ್ತಿವೆ. ನಾವೆಲ್ಲ ಒಂದು ದೇಶವಾಗಿರೋಣವೆಂಬ ಘೋಷವಾಕ್ಯವನ್ನು ಮುನ್ನೆಲೆಗೆ ತರಲಾಗಿದೆ. ನಾವು ದೇಶಕ್ಕಾಗಿ ಒಂದಾಗಿರಬೇಕಾದ್ದು ಅಗತ್ಯವೆಂಬ ಮಾತಿಗೆ ಎದುರಿಲ್ಲ. ಆದರೆ ರೈತರೂ ದೇಶದ ಭಾಗವೇ ಆಗಿರುವುದನ್ನು ಮರೆಯುವಂತಿಲ್ಲ. ಇಲ್ಲಿಯೇ ಮುಖ್ಯ ಪ್ರಶ್ನೆಯೊಂದು ಎದುರಾಗುತ್ತದೆ. ಒಂದು ದೇಶದ ವಿದ್ಯಮಾನಗಳ ಬಗ್ಗೆ ಇನ್ನೊಂದು ದೇಶದ ವ್ಯಕ್ತಿಗಳು ಪ್ರತಿಕ್ರಿಯೆ ನೀಡಬಾರದೆ? ಅವರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲವೇ? ಈ ಪ್ರಶ್ನೆಗೆ ಹೀಗೆ ಉತ್ತರಿಸಿಕೊಳ್ಳಬಹುದು: ಒಬ್ಬ ವ್ಯಕ್ತಿ ತನ್ನ ಪ್ರತಿಕ್ರಿಯೆಯನ್ನು ಅಭಿವ್ಯಕ್ತಿಸುವುದಕ್ಕೂ ಒಂದು ದೇಶದ ಸರ್ಕಾರವು ಇನ್ನೊಂದು ದೇಶದ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯಿಸುವುದಕ್ಕೂ ವ್ಯತ್ಯಾಸವಿದೆ. ಸರ್ಕಾರಗಳ ಪ್ರತಿಕ್ರಿಯೆಯು ವಿದೇಶಾಂಗ ನೀತಿಯ ವ್ಯಾಪ್ತಿಗೆ ಬಂದರೆ, ವ್ಯಕ್ತಿ ಪ್ರತಿಕ್ರಿಯೆಗಳು ಅಭಿವ್ಯಕ್ತಿ ಹಕ್ಕಿನ ವ್ಯಾಪ್ತಿಗೆ ಬರುತ್ತವೆ. ನಮ್ಮ ದೇಶದ ವ್ಯಕ್ತಿಗಳು ಬೇರೆ ದೇಶದ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಬಹಳಷ್ಟು ಉದಾಹರಣೆಗಳೂ ಇವೆ. ಆದ್ದರಿಂದ ಯಾವುದೇ ದೇಶದ ವ್ಯಕ್ತಿಯ ಅಭಿವ್ಯಕ್ತಿ ಹಕ್ಕನ್ನು ನಿಯಂತ್ರಿಸಲಾಗದು. ಇನ್ನೊಂದು ದೇಶದ ವಿದ್ಯಮಾನ ಕುರಿತ ಅಭಿಪ್ರಾಯಗಳನ್ನು ಆಂತರಿಕ ವಿಷಯಗಳಿಗೆ ಮಾಡಿದ ಮಧ್ಯಪ್ರವೇಶವೆಂದು ಭಾವಿಸಲಾಗದು. ಆದರೆ ಯಾರದೇ ಅಭಿಪ್ರಾಯಗಳನ್ನು ವಿರೋಧಿಸುವ ಅಥವಾ ಬೆಂಬಲಿಸುವ ಸ್ವಾತಂತ್ರ್ಯ ನಮ್ಮ ದೇಶದವರಿಗೆ ಇರುತ್ತದೆ, ವಿದೇಶದವರಿಗೂ ಇರುತ್ತದೆ.

ಒಂದು ದೇಶದ ಸರ್ಕಾರವು ಇನ್ನೊಂದು ದೇಶದ ಸರ್ಕಾರದ ಕುರಿತು ಮಾತಾಡಲೇಬಾರದೆಂಬ ನಿಬಂಧನೆ ಕೂಡ ಇಲ್ಲ. ಒಂದು ದೇಶದ ವಿದ್ಯಮಾನಗಳನ್ನು ವಿಶ್ಲೇಷಿಸುವ ಸ್ವಾತಂತ್ರ್ಯವನ್ನು ಇನ್ನೊಂದು ದೇಶದಿಂದ ಕಸಿದುಕೊಳ್ಳಲಾಗುವುದಿಲ್ಲ. ಹಾಗೆಂದು ವಿದೇಶಿ ವ್ಯಕ್ತಿ ಮತ್ತು ಸರ್ಕಾರಗಳು ನಮ್ಮ ರಾಷ್ಟ್ರೀಯ ಭದ್ರತೆಗೆ ಮತ್ತು ಸಾರ್ವಭೌಮತೆಗೆ ಧಕ್ಕೆ ತರುವುದನ್ನು ಒಪ್ಪಲಾಗುವುದಿಲ್ಲ. ಇಲ್ಲಿಯೂ ಒಂದು ಮಾತನ್ನು ನೆನಪಿಡಬೇಕು: ರಾಷ್ಟ್ರೀಯ ಭದ್ರತೆಯೆಂದರೆ ಆಡಳಿತ ಪಕ್ಷದ ಭದ್ರತೆಯಲ್ಲ; ಸಾರ್ವಭೌಮತೆಯೆಂದರೆ ಸರ್ಕಾರದ ಸಾರ್ವಭೌಮತೆಯಲ್ಲ.

ADVERTISEMENT

ಬರಗೂರು ರಾಮಚಂದ್ರಪ್ಪ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.