ವಾಚಕರ ವಾಣಿ
ಕರ್ನಾಟಕ ಸಂಗೀತದ ಪಿತಾಮಹ ಪುರಂದರದಾಸರ ಆರಾಧನೆಗೆ ಕರ್ನಾಟಕ ಸಂಗೀತಗಾರರು ಅಷ್ಟು ಉತ್ಸಾಹ ತೋರಿಸುತ್ತಿಲ್ಲ. ಆದರೆ, ತ್ಯಾಗರಾಜರ ಆರಾಧನೆ ಮಾತ್ರ ವೈಭವದಿಂದ ನಡೆಯುತ್ತದೆ. ಪುರಂದರದಾಸರು ಮರಾಠಿ ಅಭಂಗಕಾರರಿಗೆ ಅಷ್ಟೇಕೆ ಸ್ವತಃ ತ್ಯಾಗರಾಜರಿಗೇ ಸ್ಫೂರ್ತಿ. ಕರ್ನಾಟಕ ಸಂಗೀತದ ಅದ್ವಿತೀಯರಾದ ತ್ಯಾಗರಾಜ–ಕನಕರನ್ನು ನಿರ್ಲಕ್ಷಿಸಲು ತಮಿಳುನಾಡಿನ ಕಲಾವಿದರ ಪ್ರಭಾವವೂ ಕಾರಣವಿರಬಹುದು. ಏಕೆಂದರೆ, ಈಗಲೂ ನೃತ್ಯ ಸಂಗೀತಗಳಲ್ಲಿ ಕನ್ನಡದ ಕೃತಿಗಳನ್ನು ಅಡುಗೆಯಲ್ಲಿ ಕರಿಬೇವಿನ ಸೊಪ್ಪಿನಂತೆ ಬಳಸಲಾಗುತ್ತಿದೆ. ತಮಿಳು ಮತ್ತು ತೆಲುಗು ಶಾಸ್ತ್ರೀಯ ಕಲೆಗಳಲ್ಲಿ ಅಧಿಕೃತ ಭಾಷೆಯಾಗಿಬಿಟ್ಟಿವೆ. ಹಿತ್ತಲ ಗಿಡ ಮದ್ದಲ್ಲವೇ?
- ಮಧುಸೂದನ್ ಬಿ.ಎಸ್., ಬೆಂಗಳೂರು
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೆಲ ಸೇರಿ ಎರಡು ಅಂತಸ್ತು ಅಥವಾ ಸ್ಟಿಲ್ಟ್ ಸೇರಿ ಮೂರು ಅಂತಸ್ತಿನವರೆಗಿನ ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ ಪತ್ರ (ಒಸಿ) ಪಡೆಯುವ ಬಗ್ಗೆ ಸರ್ಕಾರ ರಿಯಾಯಿತಿ ನೀಡಿದೆ. ಆದರೆ, ಈಗಾಗಲೇ ಕೆಲವರು ಮೂರ್ನಾಲ್ಕು ಅಂತಸ್ತುಗಳ ಕಟ್ಟಡ ನಿರ್ಮಿಸಿದ್ದಾರೆ. ಸರ್ಕಾರದ ಆದೇಶದಂತೆ ಇಂತಹ ಕಟ್ಟಡವನ್ನು ನೆಲಸಮಗೊಳಿಸಬೇಕೇ; ಇದಕ್ಕೆ ಪರಿಹಾರ ಇಲ್ಲವೇ ಎಂದು ಚಿಂತೆಗೀಡಾಗಿದ್ದಾರೆ. ಹೆಚ್ಚುವರಿ ಅಂತಸ್ತುಗಳಿಗೆ ಸೂಕ್ತ ಎನಿಸುವ ದಂಡ ವಿಧಿಸಿ ಸಕ್ರಮಕ್ಕೆ ಅವಕಾಶ ಕಲ್ಪಿಸಲು ಸರ್ಕಾರ ನಿರ್ಧರಿಸಬೇಕಿದೆ. ಹೊಸದಾಗಿ ನಿರ್ಮಿಸುವ ಕಟ್ಟಡಗಳಿಗೆ ಈ ಆದೇಶ ಅನ್ವಯಿಸುವುದು ಒಳ್ಳೆಯದು.
- ಚಂದ್ರಮೌಳಿ ಸ್ವಾಮಿ, ಆನೇಕಲ್
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾಗತಿಕವಾಗಿ ನಿರಂಕುಶ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ರಷ್ಯಾವನ್ನು ಆರ್ಥಿಕವಾಗಿ ದುರ್ಬಲಗೊಳಿಸಲು ಮತ್ತು ಆ ದೇಶಕ್ಕೆ ಬರುತ್ತಿರುವ ಆದಾಯದ ಮೂಲಕ್ಕೆ ಕತ್ತರಿ ಹಾಕಲು ಭಾರತದ ಮೇಲೆ ಸುಂಕಾಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ. ಇದರಿಂದ ಭಾರತದ ವ್ಯಾಪಾರ ವಹಿವಾಟಿಗೆ ಅಪಾಯ ತಪ್ಪಿದ್ದಲ್ಲ. ದೇಶದ ತೈಲ ಕಂಪನಿಗಳು ರಷ್ಯಾದಿಂದ ಕಚ್ಚಾ ತೈಲದ ಆಮದು ನಿಲ್ಲಿಸಿದರೆ ಪೆಟ್ರೋಲ್, ಡೀಸೆಲ್ ಪೂರೈಕೆ ಮತ್ತು ಬೆಲೆಯಲ್ಲಿ ಏರಿಳಿತವಾಗಲಿದೆ. ಭಾರತದ ಆರ್ಥಿಕತೆ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯಲಿದೆ. ಹಣದುಬ್ಬರದ ಏರಿಕೆಯನ್ನೂ ತಳ್ಳಿ ಹಾಕುವಂತಿಲ್ಲ. ಟ್ರಂಪ್ ದಿನಕ್ಕೊಂದು ಹೇಳಿಕೆ ನೀಡಿದರೂ ಕೇಂದ್ರ ಸರ್ಕಾರದ ನಡೆಯಲ್ಲಿ ಸ್ಪಷ್ಟತೆಯಿಲ್ಲದಿರುವುದು ದುರದೃಷ್ಟಕರ.
-ನಿರ್ಮಲ ನಾಗೇಶ್, ಕಲಬುರಗಿ
ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಿಸಬೇಕೆಂದು ಆಗ್ರಹಿಸಿ ಸತತ 115 ದಿನಗಳವರೆಗೆ ನಡೆದ ಹೋರಾಟವು ಮುಖ್ಯಮಂತ್ರಿ ಅವರಿಂದ ಅಧಿಕೃತ ಘೋಷಣೆಯೊಂದಿಗೆ ಅಂತ್ಯ ಕಂಡಿದೆ. ಬರದ ನಾಡಿಗೆ ಆರೋಗ್ಯ ಭದ್ರತೆವಖಾತರಿಯಾಗುವ ಭರವಸೆ ಇಮ್ಮಡಿಗೊಂಡಿದೆ. ‘ಹೇಳದಿರು ಹೋರಾಡಿ ಫಲವಿಲ್ಲವೆಂದು’ ಎಂಬ ಬಿ.ಎಂ. ಶ್ರೀಕಂಠಯ್ಯ ಅವರ ಮಾತು ಮತ್ತೊಮ್ಮೆ ಸಾಬೀತಾಗಿದೆ. ಪಿಪಿಪಿ ಪೆಡಂಭೂತ ದೂರಸರಿದು ಜನರ ದುಡ್ಡಲ್ಲಿ ವೈದ್ಯಕೀಯ ಶಿಕ್ಷಣ ಓದುವ ಮತ್ತು ವೈದ್ಯೋಪಚಾರ ಪಡೆಯುವ ವ್ಯವಸ್ಥೆಗೆ ಜಯ ಸಿಕ್ಕಿದೆ. ಪ್ರಭುತ್ವಕ್ಕೆ ಇಷ್ಟವಿಲ್ಲದ ಸಮಯದಲ್ಲಿ ಜನರ ಆಶೋತ್ತರವೊಂದು ಹೋರಾಟದ ಮೂಲಕ ಸಾರ್ವಜನಿಕ ನೀತಿಯಾಗ ಹೊರಟಿರುವುದು ಪ್ರಜಾತಂತ್ರಕ್ಕೆ ಸಂದ ಗೆಲುವು.
-ಮಾದಪ್ಪ ಎಸ್. ಕಠಾರಿ, ವಿಜಯಪುರ
ಸಮಾಜದಲ್ಲಿ ಕಾನೂನುಗಳು ಕೇವಲ ಕಡತಗಳಿಗೆ ಸೀಮಿತವಾಗಿವೆ ಎನ್ನುವುದಕ್ಕೆ ಕೊಪ್ಟಾ ಕಾಯ್ದೆಯ ಉಲ್ಲಂಘನೆಯೇ ಸಾಕ್ಷಿ. ಇತ್ತೀಚಿನ ವರದಿಗಳ ಪ್ರಕಾರ, ಭಾರತ
ದಲ್ಲಿ ಪ್ರತಿದಿನ ಸುಮಾರು 3,700 ಭಾರತೀಯರು ತಂಬಾಕು ಸೇವನೆಯಿಂದ ಮೃತಪಡುತ್ತಿದ್ದಾರೆ. ಆದರೆ, ಆಡಳಿತ ವ್ಯವಸ್ಥೆಯು ಕುಂಭಕರ್ಣ ನಿದ್ರೆಯಲ್ಲಿದೆ. ಕಾಯ್ದೆ ಪ್ರಕಾರ 21 ವರ್ಷದೊಳಗಿನ ಯುವಕರಿಗೆ ಸಿಗರೇಟ್ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ.
ವಾಸ್ತವದಲ್ಲಿ, ಶಾಲಾ–ಕಾಲೇಜಿನ 100 ಗಜಗಳ ವ್ಯಾಪ್ತಿಯಲ್ಲಿರುವ ಅಂಗಡಿಗಳೇ ಯುವಜನತೆಗೆ ಈ ವ್ಯಸನದ ಮೊದಲ ದ್ವಾರಗಳಾಗಿವೆ. ಇಂತಹ ವ್ಯಾಪಾರಿಗಳಿಗೆ ಕೇವಲ ₹200 ದಂಡ ವಿಧಿಸುವುದು ವ್ಯವಸ್ಥೆಯ ಅಣಕವಾಗಿದೆ. ಹಣದಾಸೆಗೆ ಯುವಪೀಳಿಗೆಯನ್ನು ಬಲಿ ಕೊಡುತ್ತಿರುವ ವ್ಯಾಪಾರಿಗಳ ಪರವಾನಗಿಯನ್ನು ಶಾಶ್ವತವಾಗಿ ರದ್ದುಗೊಳಿಸಬೇಕಿದೆ.
-ವಿಜಯಕುಮಾರ ಎಚ್.ಕೆ., ರಾಯಚೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.