ವಾಚಕರ ವಾಣಿ
ಪಿಎಂ–ಕಿಸಾನ್ ಯೋಜನೆಯಡಿ ರೈತರ ಬ್ಯಾಂಕ್ ಖಾತೆಗೆ ವಾರ್ಷಿಕವಾಗಿ ₹6 ಸಾವಿರ ಪಾವತಿಸಲಾಗುತ್ತದೆ. ನಾಲ್ಕು ತಿಂಗಳಿಗೊಮ್ಮೆಯಂತೆ ಮೂರು ಕಂತುಗಳಲ್ಲಿ ₹2 ಸಾವಿರ ಜಮೆ ಮಾಡುವುದು ಯೋಜನೆಯ ಉದ್ದೇಶ. ಆರಂಭದಲ್ಲಿ ಸರಿಯಾಗಿಯೇ ಖಾತೆಗಳಿಗೆ ಹಣ ಜಮೆಯಾಗುತ್ತಿತ್ತು. ಕಳೆದ ಆರು ತಿಂಗಳ ಹಿಂದೆ ರೈತರ ಖಾತೆಗೆ ಹಣ ಪಾವತಿಯಾಗಿತ್ತು. ಆ ಬಳಿಕ ಇಲ್ಲಿಯವರೆಗೂ ಹಣ ಪಾವತಿಯಾಗಿಲ್ಲ. ರೈತರು ಈಗ ಯೋಜನೆಯ ಹಣಕ್ಕಾಗಿ ದಾರಿ ಕಾಯುವಂತಾಗಿದೆ. ಕೇಂದ್ರ ಸರ್ಕಾರ ಯೋಜನೆ ರೂಪಿಸಿದರಷ್ಟೆ ಸಾಲದು. ಸಕಾಲದಲ್ಲಿ ಸೌಲಭ್ಯ ತಲಪಿಸುವುದು ಹೊಣೆಗಾರಿಕೆಯೂ ಹೌದು.
⇒ಮಲ್ಲನಗೌಡ ಪಾಟೀಲ ರಂಕಲಕೊಪ್ಪ, ರಾಮದುರ್ಗ
ಶಾಲಾ ಶಿಕ್ಷಣ ಇಲಾಖೆಯಿಂದ 2026–27ನೇ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಪಠ್ಯಪುಸ್ತಕಗಳ ಬೇಡಿಕೆ ಸಲ್ಲಿಸಲು ಸ್ಯಾಟ್ಸ್ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ತಂತ್ರಾಂಶ ಬಳಸಿ ಶಾಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ತರಗತಿವಾರು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಬೇಡಿಕೆ ಸಲ್ಲಿಸಬೇಕಿದೆ. ತಂತ್ರಾಂಶದಲ್ಲಿ ಶಾಲೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಅಡಕಗೊಳಿಸುವುದು ಕಡ್ಡಾಯ. ಆದರೆ, ಇದರ ಕಾರ್ಯ ನಿರ್ವಹಣೆ ಆಮೆಗತಿಯಲ್ಲಿದೆ. ಐದರಿಂದ ಹತ್ತು ನಿಮಿಷದಲ್ಲಿ ಪೂರ್ಣಗೊಳಿಸಬೇಕಾದ ಪಠ್ಯಪುಸ್ತಕದ ಬೇಡಿಕೆಯಂತಹ ಮಾಹಿತಿಯನ್ನು ತಾಸುಗಟ್ಟಲೆ ಕುಳಿತರೂ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಶಿಕ್ಷಕರು ಒತ್ತಡಕ್ಕೆ ಒಳಗಾಗುವಂತಾಗಿದೆ. ದಿನಗಟ್ಟಲೆ ಮೊಬೈಲ್ ಹಿಡಿದು ಕುಳಿತರೂ ಮಾಹಿತಿ ಭರ್ತಿ ಮಾಡಲಾಗುತ್ತಿಲ್ಲ. ಬಳಕೆದಾರ ಸ್ನೇಹಿಯಾಗಬೇಕಾದ ತಂತ್ರಾಂಶವು ತ್ರಾಸದಾಯಕ ಆಗಿರುವುದು ದುರದೃಷ್ಟಕರ.
⇒ಶಿವಶಂಕರ ಆರ್., ಚಿತ್ರದುರ್ಗ
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳ ನೇಮಕಾತಿ ವಿಳಂಬ ಆಗುತ್ತಿದೆ. ಸಾವಿರಾರು ಅಭ್ಯರ್ಥಿಗಳು ಸಾಕಷ್ಟು ಬಾರಿ ಬೀದಿಗಿಳಿದು ಪ್ರತಿಭಟಿಸಿದ್ದಾರೆ. ಆದರೆ, ಸರ್ಕಾರದಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ. ಬೆಂಗಳೂರು, ಧಾರವಾಡ, ವಿಜಯಪುರದಂತಹ ನಗರಗಳಲ್ಲಿ ಹಲವಾರು ವರ್ಷಗಳಿಂದ ಪೋಷಕರನ್ನು ಬಿಟ್ಟು ಸಾಲ ಮಾಡಿ ಓದುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ 2013–18ರ ಅವಧಿಯಲ್ಲಿ ಅತಿಹೆಚ್ಚು ನೇಮಕಾತಿ ನಡೆದಿತ್ತು. ಆದರೆ, ಎರಡನೇ ಅವಧಿಯಲ್ಲಿ ನೇಮಕಾತಿಗೆ ನಿರ್ಲಕ್ಷ್ಯ ತಳೆಯಲಾಗಿದೆ. ಹಳೆಯ ಮೀಸಲಾತಿ ನಿಯಮ ಮತ್ತು ರೋಸ್ಟರ್ ಅಡಿಯಲ್ಲಿಯೇ ನೇಮಕಾತಿ ಪ್ರಾರಂಭಿಸಿದರೆ ಆಡಳಿತ ಸುಗಮವಾಗಿ ಚಲಿಸಲಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಯವರು ಪಕ್ಷಾತೀತವಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಳಮೀಸಲಾತಿಗೆ ಸಂಬಂಧಿಸಿದ ತೊಡಕು ನಿವಾರಿಸಿ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಬೇಕಿದೆ.
⇒ಶಿವರಾಜ್ ನಡಗೇರಿ, ಕಲಬುರಗಿ
2004ರಲ್ಲಿ ಎಸ್.ಎಂ. ಕೃಷ್ಣರವರು ಮುಖ್ಯಮಂತ್ರಿಯಾಗಿದ್ದಾಗ ಗ್ರಾಮೀಣರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೊಬ್ಬರಂತೆ ಗ್ರಾಮ ವಿದ್ಯುತ್ ಪ್ರತಿನಿಧಿಯನ್ನು (ಜಿವಿಪಿ) ನೇಮಕ ಮಾಡಿಕೊಳ್ಳಲಾಗಿತ್ತು. ಅಂದಿನಿಂದ ಇಂದಿನವರೆಗೂ ಇಎಸ್‌ಐ, ಪಿ.ಎಫ್ ಸೌಲಭ್ಯ ನೀಡದೆ ವಿದ್ಯುತ್ ಸರಬರಾಜು ಕಂಪನಿಗಳು ವಂಚಿಸಿವೆ. ನ್ಯಾಯಕ್ಕಾಗಿ ಹಲವು ಬಾರಿ ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಹೈಕೋರ್ಟ್ ಕೂಡ ನ್ಯಾಯ ಒದಗಿಸುವಂತೆ ಆದೇಶಿಸಿದೆ. ಆದರೂ, ಆಳುವ ವರ್ಗ ಕಿವಿಗೊಡುತ್ತಿಲ್ಲ. ಇದರಿಂದ ಮೂರು ಸಾವಿರ ಪ್ರತಿನಿಧಿಗಳ ಬದುಕು ಮೂರಾಬಟ್ಟೆಯಾಗಿದೆ. ಕಡಿಮೆ ಸಂಬಳದಿಂದ ಜೀವನ ನಿರ್ವಹಣೆ ಮಾಡಲಾಗದೆ ಹಲವು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲವರು ಅಪಘಾತದಲ್ಲಿ ಮೃತರಾಗಿದ್ದಾರೆ. ವಯೋನಿವೃತ್ತಿ ಹೊಂದಿರುವವರಿಗೆ ವಿದ್ಯುತ್ ಕಂಪನಿಗಳಿಂದ ಕನಿಷ್ಠ ಇಡುಗಂಟು ಸಿಕ್ಕಿಲ್ಲ. ಇನ್ನಾದರೂ ಸರ್ಕಾರ ಜಿವಿಪಿಗಳ ಸೇವೆ ಕಾಯಂಗೆ ಮುಂದಾಗಬೇಕಿದೆ.
⇒ದಡದಹಳ್ಳಿ ರಮೇಶ್, ಚಾಮರಾಜನಗರ
2019ರಲ್ಲಿ ಕಲಬುರಗಿಯ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿತು. ಇದಕ್ಕಾಗಿ
ಸುಮಾರು 650 ಎಕರೆ ಕೃಷಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ತೆರಿಗೆದಾರರ ₹300 ಕೋಟಿಯನ್ನು ವ್ಯಯಿಸಲಾಗಿದೆ. ಆದರೆ, ಕಳೆದ ಐದು ತಿಂಗಳಿಂದ ವಿಮಾನ ಸೇವೆ ಇಲ್ಲದೆ ಕೇವಲ ‘ಉಳ್ಳವರ’ ಖಾಸಗಿ ವಿಮಾನಗಳಿಗೆ ನಿಲ್ದಾಣವು ಸೀಮಿತಗೊಂಡಿದೆ. ಕಳೆದ ವರ್ಷ ಇಲ್ಲಿಗೆ ಬಂದಿದ್ದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಇಲ್ಲಿ ವಿಮಾನಗಳ ಸೇವೆ ಹೆಚ್ಚಿಸಲು ಕ್ರಮಕೈಗೊಳ್ಳುವುದಾಗಿ ಹೇಳಿ ಸಭಿಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಕಳೆದ ವಾರ ಅವರು ಇಲ್ಲಿಗೆ ಬಂದದ್ದು ಖಾಸಗಿ ವಿಮಾನದ ಮೂಲಕ! ಜನಸಾಮಾನ್ಯನಿಗೆ ಮಾತ್ರ ವಿಮಾನ ಸೇವೆಯಿಲ್ಲ. ರಾಜ್ಯದ ಸಂಸದರ ದಿವ್ಯ ಜಡತ್ವಕ್ಕೆ ಈ ನಿಲ್ದಾಣವೇ ಮೂಕಸಾಕ್ಷಿ.
⇒ವೆಂಕಟೇಶ್ ಮುದಗಲ್, ಕಲಬುರಗಿ
ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಸುದ್ದಿಗಳು ಬೆಳಕಿಗೆ ಬರುತ್ತಿವೆ. ವೈದ್ಯರಿಗೆ ಸಂಬಳ ಪಾವತಿ ಆಗಿಲ್ಲ. ಕ್ಷಕಿರಣ, ಎಂಆರ್‌ಐ ಮತ್ತು ಸ್ಕ್ಯಾನಿಂಗ್ ಸೌಲಭ್ಯ ಸ್ಥಗಿತ, ಔಷಧ ಸರಬರಾಜು ಸ್ಥಗಿತ ಇತ್ಯಾದಿ ಅಗತ್ಯ ಸೇವೆ ಒದಗಿಸಲು ಸರ್ಕಾರ ವಿಫಲವಾಗಿ
ರುವುದು ಅಕ್ಷಮ್ಯ. ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಬೋಧಕರಿಲ್ಲದೆ ಚಿಂತಾಜನಕ ಸ್ಥಿತಿ ಇದೆ. ಯಾವುದೇ, ಸರ್ಕಾರ ಆರೋಗ್ಯ ಮತ್ತು ಶಿಕ್ಷಣದಂತಹ ಅಗತ್ಯ ಸೌಲಭ್ಯ ಒದಗಿಸುವ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಆತಂಕಕಾರಿ ಬೆಳವಣಿಗೆ.
ಟಿ.ವಿ. ನಾಗರಾಜ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.