ADVERTISEMENT

ವಾಚಕರ ವಾಣಿ: ತಾಳ್ಮೆ ಕದಡುವ ಹೇಳಿಕೆ ಬೇಡ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 30 ನವೆಂಬರ್ 2021, 19:30 IST
Last Updated 30 ನವೆಂಬರ್ 2021, 19:30 IST

‘ಪಾದ್ರಿಗಳು, ಕ್ರೈಸ್ತ ಧರ್ಮಗುರುಗಳು ಬಾಯಿ ಮುಚ್ಚಿಕೊಂಡು, ತಮ್ಮ ಪಾಡಿಗೆ ಚರ್ಚುಗಳಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದರೆ ಸರಿ. ಹಿಂದೂಗಳ ಮತಾಂತರ ನಿಲ್ಲಿಸದಿದ್ದರೆ, ಸಿಕ್ಕ ಸಿಕ್ಕಲ್ಲಿ ಒದೆಯಬೇಕಾಗುತ್ತದೆ’ ಎಂಬ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರ ಹೇಳಿಕೆ (ಪ್ರ.ವಾ., ನ. 26) ಕ್ರೈಸ್ತರ ಭಾವನೆಗಳನ್ನು ಬಡಿದೆಬ್ಬಿಸುವಂತಿದೆ. ಮತಾಂತರದ ಬಗ್ಗೆ ಹೇಳಿಕೆ ನೀಡುವುದರ ಜೊತೆಗೆ ಅವರು ಮತಾಂತರಗೊಂಡವರ ವಿವರಗಳನ್ನು ಸಹ ನೀಡಬೇಕಿತ್ತು. ಬಲವಂತವಾಗಿ ಮತಾಂತರಗೊಳಿಸಿದವರ ಮೇಲೆ ಕ್ರಮ ಜರುಗಿಸಬಹುದಿತ್ತು. ಅವರ ಹೇಳಿಕೆಗೊಂದು ಬೆಲೆಯೂ ಇರುತ್ತಿತ್ತು. ಆದರೆ ಆಧಾರವಿಲ್ಲದೆ, ಬಾಯಿಗೆ ಬಂದಂತೆ ನೀಡುವ ಹೇಳಿಕೆಗಳಿಂದ ಯಾವ ಪ್ರಯೋಜನವೂ ಇಲ್ಲ.

ಕೆಲವರು ಭಾವಿಸಿರುವಂತೆ ಮತಾಂತರಗೊಳಿಸುವುದು, ಮತಾಂತರ ಹೊಂದುವುದು ಅಷ್ಟು ಸುಲಭವಲ್ಲ. ಕಾರಣವಿಲ್ಲದೆ ಸುಮ್ಮನೆ ಯಾರೂ ಮತಾಂತರ ಹೊಂದುವುದಿಲ್ಲ. ಮತಾಂತರಗೊಳ್ಳಲು ಎರಡು ಪ್ರಮುಖ ಕಾರಣಗಳಿವೆ. ಹಣ ಅಥವಾ ಸವಲತ್ತುಗಳ ಆಮಿಷಕ್ಕೊಳಗಾದವರು ಹಾಗೂ ಧರ್ಮದಲ್ಲಿನ ಲೋಪಗಳು, ತಾರತಮ್ಯ ಧೋರಣೆಯಂತಹ ಕಾರಣಗಳಿಂದ ಬೇಸತ್ತವರು ಮತಾಂತರ ಹೊಂದುತ್ತಾರಷ್ಟೆ. ಸ್ವಇಚ್ಛೆಯಿಂದ ಮತಾಂತರ ಹೊಂದಲು ಭಾರತೀಯ ಸಂವಿಧಾನದಲ್ಲಿ ಅವಕಾಶವೂ ಇದೆ.

ಆದರೆ ನಿಜವಾದ ಮತಾಂತರವೆಂದರೆ, ವ್ಯಕ್ತಿ ತನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಂಡು ಧರ್ಮವನ್ನು ಬದಲಾಯಿಸುವುದಾಗಿದೆ. ಹಿಂದೂ ಧರ್ಮದಲ್ಲಿನ ಅಸ್ಪೃಶ್ಯತೆ, ಅಸಮಾನತೆ, ತಾರತಮ್ಯ, ಅನಾದರ ಮುಂತಾದ ಲೋಪಗಳೇ ಮತಾಂತರಕ್ಕೆ ಕಾರಣ. ಅವು ಅಳಿದರೆ, ಧರ್ಮವನ್ನು ಬದಲಾಯಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ದಲಿತರ ಬಗೆಗೆ ಧರ್ಮದಲ್ಲಿ ಬಲವಾಗಿ ಬೀಡುಬಿಟ್ಟಿರುವ ತಾರತಮ್ಯ ಧೋರಣೆಯಂತಹ ದೌರ್ಬಲ್ಯಗಳು ನಿರ್ಮೂಲಗೊಳ್ಳದ ಹೊರತು, ಮತಾಂತರ ಪ್ರಕ್ರಿಯೆಗಳು ಸದಾ ಸದ್ದು ಮಾಡುತ್ತಲೇ ಇರುತ್ತವೆ. ಮೊದಲು ತಮ್ಮ ಧರ್ಮದಲ್ಲಿನ ದೋಷಗಳನ್ನು ಸರಿಪಡಿಸಿಕೊಳ್ಳದೆ ಬೇರೆ ಧರ್ಮವನ್ನು ತೆಗಳುವುದು ಸರಿಯಲ್ಲ.

ADVERTISEMENT

–ಎಲ್.ಚಿನ್ನಪ್ಪ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.