ADVERTISEMENT

ವಾಚಕರ ವಾಣಿ | ಕಲಾ ವಿಭಾಗದ ಕಳಪೆ ಫಲಿತಾಂಶಕ್ಕೆ ಹೊಣೆ ಯಾರು?

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 19:45 IST
Last Updated 15 ಜುಲೈ 2020, 19:45 IST

ದ್ವಿತೀಯ ಪಿಯು ಫಲಿತಾಂಶದಲ್ಲಿ ಕಲಾ ವಿಭಾಗದಲ್ಲಿ ಹಾಗೂ ಕನ್ನಡ ಮಾಧ್ಯಮದಲ್ಲಿ ಕಳಪೆ ಸಾಧನೆ ಎಂದು ವರದಿಯಾಗಿದೆ. ಶಿಕ್ಷಣ ಕ್ಷೇತ್ರ ಹಾಗೂ ಸರ್ಕಾರ ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ.

ಕಲಾ ವಿಭಾಗದ ಶೇ 60- 70ರಷ್ಟು ವಿದ್ಯಾರ್ಥಿಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಾಗಿರುತ್ತಾರೆ. ಅವರಿಗೆ ಗುಣಮಟ್ಟದ ಶಿಕ್ಷಣ ನೀಡದಿದ್ದರೆ ಅವರ ಭವಿಷ್ಯ ಮಂಕಾಗುತ್ತದೆ. ಸಾಮಾಜಿಕ ನ್ಯಾಯ ಮರೀಚಿಕೆ ಆಗುತ್ತದೆ. ಅಲ್ಲದೆ, ಕಲಾ ವಿಭಾಗ ಎಂದರೆ ಮಾನವಿಕ ವಿಷಯ ಹಾಗೂ ಭಾಷೆ- ಸಾಹಿತ್ಯಗಳಿಂದ ಕೂಡಿರುವ ವಿಭಾಗ. ಮನುಷ್ಯ ಸಮಾಜವು ಮನುಷ್ಯ ಸಮಾಜವಾಗಿ ಸಾಮಾಜಿಕ ಪರಿವರ್ತನೆಗಳಿಂದ ಕಲ್ಯಾಣ ರಾಜ್ಯ ನಿರ್ಮಾಣ ಆಗಬೇಕಾದರೆ, ಯಾವುದೇ ದೇಶವು ಮಾನವಿಕ ವಿಷಯಗಳನ್ನು ಕಡೆಗಣಿಸಬಾರದು.

ಮಾನವಿಕ ವಿಷಯಗಳು ಮನುಷ್ಯನ ಹೃದಯದ ಭಾವ– ಬುದ್ಧಿಗಳಲ್ಲಿ ಚೈತನ್ಯವನ್ನು ಬಿತ್ತಿ ಬೆಳೆಯಬೇಕಾದವು. ಹಾಗಿರುವಾಗ ದಿನೇ ದಿನೇ ಮಾನವಿಕ ಕ್ಷೇತ್ರವು ಪದವಿಪೂರ್ವ ಹಂತದಿಂದ ಹಿಡಿದು ವಿಶ್ವವಿದ್ಯಾಲಯದವರೆಗೆ ಯಾರಿಗೂ ಬೇಡವಾದ ಕೂಸಾದರೆ, ಮುಂದೆ ವಿದ್ಯಾರ್ಥಿಗಳು ಇಲ್ಲದೆ ಮಾನವಿಕ ಕಾಲೇಜುಗಳು ಬಾಗಿಲು ಮುಚ್ಚುತ್ತವೆ.

ADVERTISEMENT

ಪಿಯುವಿನಲ್ಲಿ ಶೇಕಡ 59ರಷ್ಟು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ ಎಂದರೆ, ಕಲಾ ವಿಭಾಗದಲ್ಲಿ ವಿದ್ಯಾರ್ಥಿಗಳು ಇದ್ದರೂ ಈ ವಿಭಾಗದ ಅಧ್ಯಾಪಕರಾದ ನಾವು, ಅವರು ಪಾಸಾಗಿ ಉನ್ನತ ಶಿಕ್ಷಣ ಪಡೆಯುವಂತೆ ಮಾಡುವಲ್ಲಿ ಸೋತಿದ್ದೇವೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಎಲ್ಲಾ ಹಂತದ ಮಾನವಿಕ ಅಧ್ಯಾಪಕರು ‘ವೃತ್ತಿಜೀವನಕ್ಕೆ ನ್ಯಾಯ ಒದಗಿಸಿದ್ದೇವೆಯೇ’ ಎಂದು ಆತ್ಮಾವಲೋಕನ ಮಾಡಿಕೊಳ್ಳದಿದ್ದರೆ ಸ್ವಯಂ ನಿವೃತ್ತಿ ಯೋಜನೆಯನ್ನು ತಾವೇ ಆಹ್ವಾನಿಸಿಕೊಂಡಂತಾಗುತ್ತದೆ. ಕಲಾ ವಿಭಾಗಕ್ಕೆ ಮಕ್ಕಳು ಇಲ್ಲವಾದರೆ ಕಲಾ ಕಾಲೇಜುಗಳು, ವಿಭಾಗಗಳು ಮುಚ್ಚಲ್ಪಡುತ್ತವೆ. ಕಾರ್ಯಭಾರವಿಲ್ಲವಾದಲ್ಲಿ ಸರ್ಕಾರ ಕೂರಿಸಿ ಸಂಬಳ ಕೊಡುವುದಿಲ್ಲ.

ಪಾಠ ಮಾಡಬೇಕಾದವರು ತೋಟತುಡಿಕೆ, ವ್ಯಾಪಾರ, ಬಡ್ಡಿ ವ್ಯವಹಾರ ಮಾಡಬಾರದೆಂದೇ ಯುಜಿಸಿಯು ಸಂಬಳವನ್ನು ಗಣನೀಯವಾಗಿ ಹೆಚ್ಚಿಸಿತು. ಆದರೂ ಕಲಾ ವಿಭಾಗ ಸುಧಾರಿಸದಿದ್ದರೆ, ಮುಂದೆ ಬರಬಹುದಾದ ಪರಿವರ್ತನೆಗಳು ಹೇಗಿರಬಹುದು ಎಂದು ನೆನೆದರೆ ಭಯವಾಗುತ್ತಿದೆ. ಮಾನವೀಯ ಸಮಾಜ ನಿರ್ಮಾಣವು ಮಾನವಿಕ ಅಧ್ಯಯನಗಳ ಬಹುದೊಡ್ಡ ಜವಾಬ್ದಾರಿ. ಪಠ್ಯಕ್ರಮದಿಂದ ಹಿಡಿದು ಪಾಠವನ್ನು ಒಳಗೊಂಡಂತೆ ಪರೀಕ್ಷಾ ವ್ಯವಸ್ಥೆಯವರೆಗೆ ಎಲ್ಲವೂ ಪರಿಶೀಲನೆಗೆ, ವರ್ತಮಾನದ ಗುಣಾತ್ಮಕ ಅಗತ್ಯಕ್ಕನುಗುಣವಾಗಿ ಸುಧಾರಣೆಗೆ ಒಳಗಾಗಲಿ. ಅಧ್ಯಾಪಕರನ್ನು ಸಿದ್ಧಗೊಳಿಸುವ ಡಿ.ಇಡಿ., ಬಿ.ಇಡಿ.,ಎಂ.ಎ. ಕಾಲೇಜುಗಳಲ್ಲಿ ಮೌಲ್ಯಾಧಾರಿತ ಗುಣಮಟ್ಟದ ಶಿಕ್ಷಣ ಸಿಗುವಂತಾಗಲಿ. ಅಧ್ಯಾಪಕರ ಸುಧಾರಣೆ ಆಗದ ಹೊರತು ಶಿಕ್ಷಣ ಕ್ಷೇತ್ರದ ಸುಧಾರಣೆ ಆಗುವುದಿಲ್ಲ.
-ಡಾ. ಬಿ.ವಿ.ವಸಂತಕುಮಾರ್,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.