ADVERTISEMENT

ಓದಿನ ಪ್ರೀತಿ| ಮಕ್ಕಳಿಗೆ ಪುಸ್ತಕದ ಗುಂಗು ಹಿಡಿಸುವುದು ಹೇಗೆ? ಇಲ್ಲಿವೆ ಕೆಲ ಸಲಹೆಗಳು...

​ಪ್ರಜಾವಾಣಿ ವಾರ್ತೆ
Published 5 ಜೂನ್ 2023, 23:31 IST
Last Updated 5 ಜೂನ್ 2023, 23:31 IST
   

ರೂಪಾ ಕೆ.ಎಂ.

ಮಕ್ಕಳಿಗೆ ಶಾಲೆಯೇನೋ ಶುರುವಾಗಿದೆ. ಅಂದಿನ ಪಾಠವನ್ನು ಅಂದೇ ಓದಿಕೊಂಡರೆ ಪರೀಕ್ಷೆಯ ಸಂದರ್ಭದಲ್ಲಿ ಮಕ್ಕಳಿಗೆ ಹೊರೆಯಾಗದು. ಹೀಗೆ ಹೇಳುವುದು ಬಲು ಸುಲಭ. ಆದರೆ, ಪುಸ್ತಕವೆಂದರೆ ದೂರ ಓಡುವ ಮಕ್ಕಳಿರುತ್ತಾರೆ. ಅಂಥವರಿಗೆ ಶಾಲೆಯ ಪಠ್ಯವನ್ನು ಕಂಡರೆ ಅಷ್ಟಕ್ಕಷ್ಟೆ. ಶಾಲೆಯ ಪಠ್ಯ ರುಚಿಸಬೇಕಾದರೆ ಮಕ್ಕಳಿಗೆ ಮೊದಲು ಪುಸ್ತಕದ ಬಗ್ಗೆ ಪ್ರೀತಿ ಹುಟ್ಟುವಂತಾಗಬೇಕು. ಪುಟ್ಟ ಬೆರಳುಗಳಲ್ಲಿ ಅಕ್ಷರವನ್ನು ಕೂಡಿಸಿ ಓದುವ ಹಂತದಿಂದಲೇ ಮಕ್ಕಳಲ್ಲಿ ಅಕ್ಷರಪ್ರೀತಿಯನ್ನು ಬಿತ್ತಬೇಕು. ಇದಕ್ಕೆ ಮೊದಲು ಪೋಷಕರಲ್ಲಿ ಸ್ವಲ್ಪವಾದರೂ ಓದುವ ಹವ್ಯಾಸ ರೂಢಿಯಾಗಿರಬೇಕು. 

ಓದುವ ಹವ್ಯಾಸ ಬೆಳೆಸಿಕೊಳ್ಳುವ ಮಕ್ಕಳಿಗೆ ಒಂದೊಮ್ಮೆ ಪಠ್ಯದ ವಿಷಯವನ್ನು ಗ್ರಹಿಸಲು ಕಷ್ಟವೆನಿಸಿದರೂ ಇಷ್ಟಪಟ್ಟು ಅದನ್ನು ಓದಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ಹವ್ಯಾಸ ಮಕ್ಕಳ ಗ್ರಹಿಕಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ; ಜೊತೆಗೆ ಕುತೂಹಲ, ಕಲ್ಪನಾಶಕ್ತಿಯನ್ನೂ ಹಿಗ್ಗಿಸುತ್ತದೆ.  

ADVERTISEMENT

ಹಾಗಾದರೆ ಶಾಲೆಗೆ ದಾಖಲಾಗುವ ಮುನ್ನವೇ ಆಟ ಆಡಿಕೊಂಡಿರುವ ಮಕ್ಕಳಿಗೆ ಪುಸ್ತಕದ ಗುಂಗು ಹಿಡಿಸುವುದು ಹೇಗೆ? ಇಲ್ಲಿವೆ ಕೆಲವು ಸಲಹೆಗಳು:

ನಿತ್ಯ ಓದುವ ಅಭ್ಯಾಸವಿರಲಿ: ರಾತ್ರಿ ಮಲಗುವ ಸಮಯದಲ್ಲಿ ಬಣ್ಣ ಬಣ್ಣದ ಚಿತ್ರಗಳಿರುವ ಮಕ್ಕಳಕಥೆ ಪುಸ್ತಕವೊಂದನ್ನು ಗಟ್ಟಿಯಾಗಿ ಓದಿ ಹೇಳುವ ಅಭ್ಯಾಸವನ್ನು ಪೋಷಕರು ಬೆಳೆಸಿಕೊಳ್ಳಬಹುದು. ಕಥೆ, ಕಾದಂಬರಿ, ನಿಯತಕಾಲಿಕೆ, ಗ್ರಾಫಿಕ್‌ ಕಾದಂಬರಿ – ಹೀಗೆ ಯಾವುದೂ ಆಗಬಹುದು. ನಿಮ್ಮ ಮಗುವಿನ ಮುಂದೆ ಅದನ್ನು ಗಟ್ಟಿಯಾಗಿ ಓದುವ ಪ್ರಯತ್ನ ಮಾಡಿ. ಇದು ಭಾಷಾ ಕಲಿಕೆಗೂ ಸಹಕಾರಿಯಾಗುವುದು; ಓದಿನ ರುಚಿ ಹತ್ತಲೂ ನೆರವಾಗುತ್ತದೆ. 

ಓದುವ ಕಾರ್ನರ್‌ ಇರಲಿ: ದೊಡ್ಡ ದೊಡ್ಡ ಪುಸ್ತಕಗಳ ರಾಶಿಯೇ ಇರಬೇಕು ಎಂದೇನಿಲ್ಲ. ಮಕ್ಕಳಿಗಾಗಿ ಇರುವ ಕೆಲವೇ ಪುಸ್ತಕಗಳ ಸ್ಪೇಸ್‌ವೊಂದು ಸೃಷ್ಟಿಸಿಟ್ಟರೆ, ಸಮಯ ಸಿಕ್ಕಾಗೆಲ್ಲ ಬೇಸರಿಕೆ ಕಳೆಯಲು ಮಕ್ಕಳು ಪುಟಗಳನ್ನು ತಿರುವಲು ಮನಸ್ಸು ಮಾಡಿಯಾರು. ಮುಂದೇ ಇದೇ ಓದುವ ಹವ್ಯಾಸವಾಗಿ ಮಾರ್ಪಾಡಾಗುತ್ತದೆ. 

ಗ್ರಂಥಾಲಯಕ್ಕೆ ಆಗಾಗ್ಗೆ ಭೇಟಿ ನೀಡಿ: ಆಗಾಗ್ಗೆ ಮಕ್ಕಳನ್ನು ಶಾಪಿಂಗ್ ಮಾಲ್ ಕರೆದುಕೊಂಡು ಹೋಗುವಂತೆ ಗ್ರಂಥಾಲಯಕ್ಕೂ ಭೇಟಿ ನೀಡಲು ಸಮಯ ಮಾಡಿಕೊಳ್ಳಿ. ವೈವಿಧ್ಯಮಯ ಪುಸ್ತಕದ ರಾಶಿಯ ನಡುವೆ ಮಗು ತನಗಿಷ್ಟವಾದ ಪುಸ್ತಕವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ನೀಡಿ. ಪುಸ್ತಕ ಹಿಡಿದ ಮಗು ಕುತೂಹಲ ತಣಿಸಿಕೊಳ್ಳಲು ಸಿಕ್ಕಾಪಟ್ಟೆ ಪ್ರಶ್ನೆ ಕೇಳುತ್ತದೆ ಎಂದೆಲ್ಲ ತಲೆಬಿಸಿ ಮಾಡಿಕೊಳ್ಳದೇ ಸೂಕ್ಷ್ಮವಾಗಿ ಸ್ಪಂದಿಸಲು ಪ್ರಯತ್ನಿಸಿ. ಕುತೂಹಲ ಮುರುಟದಂತೆ ಪ್ರೋತ್ಸಾಹದಾಯಕ ಮಾತುಗಳನ್ನಾಡಿ.

ನಿತ್ಯದ ಭಾಗವಾಗಲಿ: ಶಾಲೆ, ಟ್ಯೂಷನ್‌ ಎಂದೆಲ್ಲ ಅತಿಯಾದ ಒತ್ತಡದ ನಡುವೆ ಇರುವ ಮಕ್ಕಳಿಗೆ ಓದುವುದು ಹೊರೆಯಾಗಬಾರದು. ಅದೊಂದು ಖುಷಿಯ ಸಂಗತಿ ಎನಿಸಬೇಕು. ಹಾಗೆ ಎನಿಸಬೇಕಾದರೆ  ಪಠ್ಯವಲ್ಲದೇ ಬೇರೆ ಏನನ್ನಾದರೂ ಓದುವುದು ನಿತ್ಯ ಚಟುವಟಿಕೆಯ ಭಾಗವಾಗಬೇಕು. ಮಕ್ಕಳಿಗೆ ಇಷ್ಟವಾಗುವ ಪುಸ್ತಕವನ್ನು ಮತ್ತೆ ಮತ್ತೆ ಓದಿಸಿ; ಅದರಿಂದೇನೂ ತೊಂದರೆಯಾಗದು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.