ಮಕರ್ನಾಟಕದ ಸಾಂಪ್ರದಾಯಿಕ ಉದ್ಯಮಗಳಲ್ಲಿ ಕೈಮಗ್ಗ ನೇಕಾರಿಕೆಯೂ ಒಂದಾಗಿದೆ. ಕೈಮಗ್ಗ ವಿಕಾಸ ಯೋಜನೆಯನ್ನು ಕರ್ನಾಟಕ ಸರ್ಕಾರದ ಕೈಮಗ್ಗ ಮತ್ತು ಜವಳಿ ಇಲಾಖೆ ಪ್ರಾರಂಭಿಸಿದೆ. ಈ ಯೋಜನೆಯ ಮೂಲಕ ಕೈಮಗ್ಗ ನೇಕಾರಿಕೆಯಲ್ಲಿ ನವೀನ ಕೌಶಲಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಯುವ ಪ್ರತಿಭೆಗಳನ್ನು ಉದ್ಯಮದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಗುರಿಯನ್ನು ಹೊಂದಿದೆ.
ಈ ಯೋಜನೆಯ ಮೂಲಕ ಸಾಂಪ್ರದಾಯಿಕ ಉದ್ಯಮವಾದ ಕೈಮಗ್ಗ ನೇಕಾರಿಕೆಯ ಕಲೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಅಗತ್ಯ ಉಪಕರಣಗಳ ಖರೀದಿಗೆ ಬೆಂಬಲ ನೀಡಲಾಗುತ್ತದೆ. ಯೋಜನೆಯಲ್ಲಿ ಕೈಮಗ್ಗ ನೇಕಾರಿಕೆಗೆ ಬೇಕಾದ ಅಗತ್ಯ ಸಲಕರಣೆಗಳ ಖರೀದಿಗೆ ವೆಚ್ಚವಾಗುವ ಶೇ 75 ರಷ್ಟು ಸಹಾಯಧನ ನೀಡಲಾಗುತ್ತದೆ.
ಕೈಮಗ್ಗ ವಿಕಾಸ ಯೋಜನೆಯನ್ನು ಪಡೆಯುವುದು ಹೇಗೆ? ಅರ್ಹತೆಗಳೂ ಹಾಗೂ ಅಗತ್ಯ ದಾಖಲೆಗಳೇನು? ಎಂಬ ಮಾಹಿತಿ ಇಲ್ಲಿದೆ...
ಯೋಜನೆಯಲ್ಲಿ ಖರೀದಿಸಬಹುದಾದ ಉಪಕರಣಗಳ್ಯಾವುವು?
ಕೈಮಗ್ಗಗಳು
ಎಲೆಕ್ಟ್ರಾನಿಕ್ ಜಾಕ್ವಾರ್ಡ್‌ಗಳು
ಗಂಟು ಹಾಕುವ ಯಂತ್ರಗಳು
ಹಾಸು ಯಂತ್ರಗಳು
ಸಿಗುವ ಸಾಲ ಮತ್ತು ಸಹಾಯಧನ ಎಷ್ಟು?
ಹೊಸ ಕೈಮಗ್ಗಗಳ ವೈಯಕ್ತಿಕ ಖರೀದಿಗೆ ಒಟ್ಟು ವೆಚ್ಚದ ಶೇ 50ರಷ್ಟು ಸಹಾಯಧನ.
ಹೊಸ ಕೈಮಗ್ಗ ಖರೀದಿಸುವ ಸಹಕಾರ ಸಂಘಗಳಿಗೆ ಒಟ್ಟು ವೆಚ್ಚದ ಶೇ 75ರಷ್ಟು ಸಹಾಸಯಧನ.
ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದ ನೇಕಾರರಿಗೆ ಒಟ್ಟು ವೆಚ್ಚದ ಶೇ 90ರಷ್ಟು ಸಹಾಯಧನ.
ಕೈಮಗ್ಗದ ಉತ್ಪಾದನೆಯನ್ನು ಹೆಚ್ಚಿಸಲು ಎಲೆಕ್ಟ್ರಾನಿಕ್ ಜ್ಯಾಕ್ವಾರ್ಡ್ ಯಂತ್ರಗಳನ್ನು ಒದಗಿಸುತ್ತದೆ.
ಇರಬೇಕಾದ ಅರ್ಹತೆಗಳು ಯಾವುವು?
ಕೈಮಗ್ಗ ನೇಕಾರ ಸಹಕಾರ ಸಂಘಗಳಲ್ಲಿ ಅಥವಾ ಕೈಮಗ್ಗ ಸಂಘಗಳು, ಕರ್ನಾಟಕ ಅಭಿವೃದ್ಧಿ ನಿಗಮದಲ್ಲಿ ಸದಸ್ಯತ್ವ ಹೊಂದಿರಬೇಕು.
ಸಾಂಪ್ರದಾಯಿಕ ನೇಕಾರರು ಪ್ರಸ್ತುತ ಕೈಮಗ್ಗ ವೃತ್ತಿಯನ್ನು ಮಾಡುತ್ತಿರಬೇಕು.
ನೇಕಾರರ ಗುರುತಿನ ಚೀಟಿಯನ್ನು ಹೊಂದಿರಬೇಕು.
ವೃತ್ತಿಯನ್ನು ಆರಂಭಿಸುವ ಯುವಕ-ಯುವತಿಯರು ಕೈಮಗ್ಗ ನೇಕಾರಿಕೆಯಲ್ಲಿ ತರಬೇತಿ ಪಡೆದಿರಬೇಕು.
ತರಬೇತಿಯ ಪ್ರಮಾಣಪತ್ರವನ್ನು ಹೊಂದಿರಬೇಕು.
ಗಂಟು ಹಾಕುವ ಯಂತ್ರವನ್ನು ಖರೀದಿಸುವ ನೇಕಾರರು ಅನುಭವ ಹೊಂದಿರಬೇಕು.
ಯಂತ್ರದ ಸ್ಥಾಪನೆಗೆ ಅಗತ್ಯ ಸ್ಥಳಾವಕಾಶ ಹೊಂದಿರಬೇಕು.
ಅರ್ಜಿಯನ್ನು ಸಲ್ಲಿಸುವುದು ಹೇಗೆ?
ಈ ಯೋಜನೆಯನ್ನು ಪಡೆಯಲು ನೇರವಾಗಿ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ಸಲ್ಲಿಸುವ ಬಗೆ ಹೇಗೆ? ಎಂಬ ಮಾಹಿತಿ ಇಲ್ಲಿದೆ..
ಜಿಲ್ಲಾ ಮಟ್ಟದ ಕೈಮಗ್ಗ ಮತ್ತು ಜವಳಿ ಇಲಾಖೆಗೆ ಭೇಟಿ ನೀಡಿ ಅರ್ಜಿಯನ್ನು ಪಡೆಯಬೇಕು. ಅರ್ಜಿಯಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಲಗತ್ತಿಸಬೇಕು. ನಂತರ ಅರ್ಜಿಯ ನಮೂನೆಯನ್ನು ಜಿಲ್ಲಾ ಮಟ್ಟದ ಕಚೇರಿಗೆ ಸಲ್ಲಿಸಬೇಕು. ಸಂಬಂಧಪಟ್ಟ ಅಧಿಕಾರಿಯಿಂದ ಅರ್ಜಿಸಲ್ಲಿಕೆಯ ಕುರಿತ ರಸೀದಿ ಪಡೆಯಬೇಕು.
ಅಗತ್ಯವಿರುವ ದಾಖಲೆಗಳು ಯಾವುವು?
ನೇಕಾರರ ಗುರುತಿನ ಚೀಟಿ
ಕೈಮಗ್ಗ ನೇಕಾರಿಕೆಯ ತರಬೇತಿ ಪ್ರಮಾಣಪತ್ರ
ಹಣಕಾಸು ಒದಗಿಸಲು ಸಾಲ ಮಂಜೂರಾತಿ ಪತ್ರ ಅಥವಾ ಒಪ್ಪಂದ ಪತ್ರ
ಯೋಜನೆಯ ಕುರಿತ ಹೆಚ್ಚಿನ ಮಾಹಿತಿಯನ್ನು ಜಿಲ್ಲಾ ಮಟ್ಟದ ಕೈಮಗ್ಗ ಮತ್ತು ಜವಳಿ ಇಲಾಖೆಗೆ ಭೇಟಿ ನೀಡಿ ಪಡೆಯಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.