ADVERTISEMENT

ಅಂದು ಪದಕ ಗೆದ್ದ ಕನ್ನಡಿಗರು

​ಪ್ರಜಾವಾಣಿ ವಾರ್ತೆ
Published 2 ಜುಲೈ 2013, 19:59 IST
Last Updated 2 ಜುಲೈ 2013, 19:59 IST

ಪುಣೆ: ಮೊದಲ ಏಷ್ಯಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ಫಿಲಿಪ್ಪೀನ್ಸ್‌ನ ಮನಿಲಾದಲ್ಲಿ 1973ರಲ್ಲಿ ನಡೆದಿದ್ದರೆ, ಭಾರತ 1989ರಲ್ಲಿ ಮೊದಲ ಬಾರಿಗೆ ದೆಹಲಿಯಲ್ಲಿ ಈ ಕೂಟಕ್ಕೆ ಆತಿಥ್ಯ ವಹಿಸಿತ್ತು. ಆ ನಂತರ ಇದೀಗ ಪುಣೆಯಲ್ಲಿ ಈ ಕೂಟವನ್ನು ಸಂಘಟಿಸಲಾಗುತ್ತಿದೆ.

ದೆಹಲಿಯಲ್ಲಿ ನಡೆದಿದ್ದ ಕೂಟದಲ್ಲಿ ಭಾರತ 8 ಚಿನ್ನವೂ ಸೇರಿದಂತೆ 22 ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತ್ತು. ಆಗ ಪಿ.ಟಿ.ಉಷಾ ಐದು ಚಿನ್ನ ಗೆದ್ದಿದ್ದರೆ, ಶೈನಿ ವಿಲ್ಸನ್ ಮತ್ತೊಂದು ಸ್ವರ್ಣ ಗೆದ್ದಿದ್ದರು. ಆ ಕೂಟದಲ್ಲಿ ಕರ್ನಾಟಕದ ಮೂರು ಮಂದಿ ಪದಕ ಗಳಿಸಿದ್ದರು.

ಅಂದು ಅಶ್ವಿನಿ ನಾಚಪ್ಪ 200 ಮೀಟರ್ಸ್ ಓಟದಲ್ಲಿ 23.54 ಸೆಕೆಂಡುಗಳಲ್ಲಿ ಓಡಿ ರಜತ ಗೆದ್ದಿದ್ದರೆ, ಕೊಡಗಿನ ರೀತ್ ಅಬ್ರಹಾಂ ಲಾಂಗ್ ಜಂಪ್‌ನಲ್ಲಿ 6.15ಮೀಟರ್ಸ್ ಜಿಗಿದು ಕಂಚು ಗಳಿಸಿದ್ದರು. ಶಿವಮೊಗ್ಗ ಜಿಲ್ಲೆಯ ಎಸ್.ಡಿ.ಈಶನ್ ಷಾಟ್‌ಪಟ್‌ನಲ್ಲಿ 17.71ಮೀಟರ್ಸ್ ಸಾಮರ್ಥ್ಯ ತೋರಿ ಕಂಚಿನ ಪದಕ ಗೆದ್ದಿದ್ದರು.

ಆ ಕೂಟ ನಡೆದು ಇದೀಗ 24 ವರ್ಷಗಳು ಉರುಳಿವೆ. ಅಶ್ವಿನಿ ನಾಚಪ್ಪ, ರೀತ್ ಮತ್ತು ಎಸ್.ಡಿ.ಈಶನ್ ಅವರನ್ನು ಅಂದು ಮತ್ತು ಇಂದಿನ ಏಷ್ಯಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಭಾರತದ ಏಳುಬೀಳು ಬಗ್ಗೆ `ಪ್ರಜಾವಾಣಿ'ಗಾಗಿ ಮಾತನಾಡಿಸಿದಾಗ ವಿಭಿನ್ನ ಅಭಿಪ್ರಾಯ ವ್ಯಕ್ತವಾಯಿತು. ಮೂವರೂ ದೆಹಲಿಯಲ್ಲಿ ನಡೆದಿದ್ದ ಇದೇ ಚಾಂಪಿಯನ್‌ಷಿಪ್‌ನ ಸುಂದರ ನೆನಪುಗಳನ್ನು ಹಂಚಿಕೊಂಡರು.

`ಅಂದು ಮೂಲ ಸೌಕರ್ಯಗಳ ಕೊರತೆ ಇತ್ತು. ಉನ್ನತ ಮಟ್ಟದ ತರಬೇತಿಯ ಅವಕಾಶ ಈಗಿನಂತಿರಲಿಲ್ಲ. ಈಗಿನಷ್ಟು ಅಧಿಕ ಕ್ರೀಡಾಕೂಟಗಳು ಆಗ ನಡೆಯುತ್ತಿರಲಿಲ್ಲ. ಈಗ ಎಲ್ಲವೂ ಇದೆ. ಆದರೆ ಇಂದು ನಮ್ಮಲ್ಲಿ ನಿರೀಕ್ಷಿತ ಪ್ರಗತಿ ಆಗಿಲ್ಲ. ಇಷ್ಟೆಲ್ಲಾ ಇರುವಾಗ ಈ ಸಲ ಭಾರತ ಅತ್ಯುತ್ತಮ ಮಟ್ಟದ ಸಾಮರ್ಥ್ಯ ತೋರಲೇ ಬೇಕು. ಏನಾಗುತ್ತೋ ಕಾದು ನೋಡುವ' ಎಂದು ಅಶ್ವಿನಿ ಹೇಳಿದರು.

ರೀತ್ ಅವರೂ `ಅಂದು ನಮಗಿದ್ದ ಕನಿಷ್ಠ ಸೌಲಭ್ಯಗಳಲ್ಲಿಯೇ ಹೆಚ್ಚಿನ ಸಾಮರ್ಥ್ಯ ತೋರಲು ಶಕ್ತಿ ಮೀರಿ ಯತ್ನಿಸಿದ್ದೆವು. ಏಷ್ಯಾ ಮಟ್ಟದಲ್ಲಿ ನಮ್ಮ ಸಾಮರ್ಥ್ಯದ ಮಟ್ಟಿಗೆ ಹೇಳುವುದಿದ್ದರೆ ಬಹಳ ದೊಡ್ಡ ಬದಲಾವಣೆಯಂತೂ ಕಂಡು ಬಂದಿಲ್ಲ. ಈ ಸಲ ನೋಡುವ' ಎಂದರು.

`ಸುರೇಶ್ ಕಲ್ಮಾಡಿ ಅವರನ್ನು ಏಷ್ಯಾ ಅಥ್ಲೆಟಿಕ್ ಸಂಸ್ಥೆಯ ಅಧ್ಯಕ್ಷ ಪಟ್ಟಕ್ಕೆ ನಡೆದ ಚುನಾವಣೆಯಲ್ಲಿ ಸೋಲಿಸಿರುವುದು ಅತ್ಯಂತ ಒಳ್ಳೆಯ ಬೆಳವಣಿಗೆಯಾಗಿದೆ' ಎಂದು ಅಶ್ವಿನಿ ಮತ್ತು ರೀತ್ ಒಮ್ಮತದ ಅನಿಸಿಕೆ ವ್ಯಕ್ತಪಡಿಸಿದರು.

ಎಸ್.ಡಿ.ಈಶನ್ ಮಾತನಾಡಿ `ಈಗ ವಿದೇಶಗಳಲ್ಲಿ ತರಬೇತಿ ಇದೆ. ಉತ್ತಮ ಸಾಧಕರಿಗೆ ಅಪಾರವಾದ ಪ್ರೋತ್ಸಾಹ ಧನ ಸಿಗುತ್ತೆ. ಪ್ರಾಯೋಜಕರಿದ್ದಾರೆ. ಆದರೆ ಅಂದು ನಮಗೆ ಇದಾವುದೂ ಇರಲಿಲ್ಲ. ಆದರೆ ಇವತ್ತು ದೊಡ್ಡ ಮಟ್ಟಿಗಿನ ಸಾಧನೆಯಂತೂ ಕಂಡು ಬರುತ್ತಿಲ್ಲ' ಎಂದರು.

ಅಶ್ವಿನಿ ಪ್ರಸಕ್ತ `ಕ್ಲೀನ್ ಸ್ಪೋರ್ಟ್ಸ್' ಸಂಘಟನೆಯ ಚಟುವಟಿಕೆಯಲ್ಲಿ ತೊಡಗಿದ್ದರೆ, ಈಶನ್ ಕಿರಿಯರಿಗೆ ಕೋಚ್ ನೀಡುವ ಬಗ್ಗೆ ಹೆಚ್ಚು ಗಮನ ಹರಿಸಿದ್ದಾರೆ. ರೀತ್ ಕಳೆದ ವಾರ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಹಿರಿಯರ ಕ್ರೀಡಾಕೂಟದ ಲಾಂಗ್‌ಜಂಪ್‌ನಲ್ಲಿ ಅಗ್ರಸ್ಥಾನ ಪಡೆದಿದ್ದು ತಾವಿನ್ನೂ ಫಿಟ್‌ನೆಸ್‌ಗೆ ಹೆಚ್ಚು ಗಮನ ಹರಿಸಿದ್ದನ್ನು ಸಾಬೀತು ಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.