ADVERTISEMENT

ಕಿವಿಗಪ್ಪಳಿಸಿದ ಕೂಗಿನ ನಡುವೆ ಆಟ...!

ಗ್ರೇಮ್ ಸ್ಮಿತ್, ದಕ್ಷಿಣ ಆಫ್ರಿಕಾ ತಂಡದ ನಾಯಕ
Published 13 ಮಾರ್ಚ್ 2011, 16:25 IST
Last Updated 13 ಮಾರ್ಚ್ 2011, 16:25 IST

ಅದೊಂದು ಅದ್ಭುತ ವಾತಾವರಣ. ಶನಿವಾರದ ಪಂದ್ಯವೇ ಅಂಥದಾಗಿತ್ತು. ಕ್ರೀಡಾಂಗಣದ ತುಂಬಾ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರು. ಭಾರಿ ಸದ್ದು. ಎಲ್ಲರೂ ಭಾರತ ತಂಡದ ಬೆಂಬಲಕ್ಕೆ ನಿಂತಿದ್ದಾರೆ ಎನ್ನುವಂತೆ ಅಲ್ಲಿ ಕೂಗು ಕೇಳಿಬರುತ್ತಿತ್ತು.

ನಮ್ಮ ತಂಡದ ಆಟಗಾರರು ಕ್ರಿಕೆಟ್ ಪ್ರೇಮಿಗಳ ಈ ಅಬ್ಬರದ ನಡುವೆಯೂ ವಿಶ್ವಾಸ ಕಳೆದುಕೊಳ್ಳಲಿಲ್ಲ. ವಿಶ್ವಾಸದಿಂದ ಹೋರಾಡಿದರು. ಈ ದೇಶದಲ್ಲಿ ಕ್ರಿಕೆಟ್ ಆಟದ ಬಗ್ಗೆ ಇರುವ ಅಪಾರ ಪ್ರೀತಿಯನ್ನು ಕಂಡಾಗ ವಿಚಿತ್ರ ಎನಿಸಿದ್ದೂ ನಿಜ.

ಜನರ ಕೇಕೆ ಹಾಗೂ ಕೂಗು ಅಲೆಗಳಾಗಿ ಕಿವಿಗೆ ಅಪ್ಪಳಿಸುತ್ತಿತ್ತು. ಚೆಂಡು ಮುಗಿಲತ್ತ ಚಿಮ್ಮುತ್ತಲೇ ಇತ್ತು. ನಾನೂ ಅನೇಕ ಬಾರಿ ಕತ್ತೆತ್ತಿ ನೋಡಿ ನೋವಾಯಿತೋ ಎನ್ನುವ ಅನುಭವ. ಭಾರತದ ಇನಿಂಗ್ಸ್ ಆರಂಭವೇ ಹಾಗಿತ್ತು. ಆದರೆ ನಾವು ನಮ್ಮ ಅಸ್ತ್ರಗಳನ್ನು ಸಜ್ಜುಗೊಳಿಸಿಕೊಂಡಿದ್ದೆವು. ಸರಿಯಾದ ರೀತಿಯಲ್ಲಿ ಪ್ರಯೋಗಿಸಿದೆವು. ಪಿಚ್ ಸ್ವರೂಪವೂ ವಿಚಿತ್ರವಾಗಿತ್ತು. ಇಂಥದೊಂದು ಪಂದ್ಯದ ನಂತರ ರಾತ್ರಿಯೆಲ್ಲಾ ನಾವು ವಿಜಯೋತ್ಸವ ಆಚರಿಸಿರಬಹುದು
ಎಂದುಕೊಂಡಿರುವುದು ಸಹಜ. ಆದರೆ ಹೋಟೆಲ್‌ಗೆ ಹೋಗಿ ಸ್ವಲ್ಪ ‘ಪಾನೀಯ’ ಸೇವಿಸಿ ಮಲಗಿದೆವು. ಆದರೆ ನಮ್ಮ ತಂಡದ ಕೆಲವು ಆಟಗಾರರು ಸಂಗಾತಿಯ ಜೊತೆಗೆ ಬಂದಿದ್ದಾರೆ. ಅವರು ಭಾರಿ ಭಾವನಾತ್ಮಕ ಪ್ರತಿಕ್ರಿಯೆಯೊಂದಿಗೆ ನಲಿದಾಡಿದರು.

ಪಂದ್ಯ ನಡೆಯುವಾಗ ಭಾರತದ ಅಪಾರ ಬೆಂಬಲಿಗರ ನಡುವೆ ದಕ್ಷಿಣ ಆಫ್ರಿಕಾದವರೂ ಕಾಣಿಸಿದರು. ಅದು ಸಮಾಧಾನ. ಯಾರೋ ನನಗೆ ಹೇಳಿದರು ಗ್ಯಾಲರಿಯೊಂದರಲ್ಲಿ ಬಹಳಷ್ಟು ಜನರು ಹಾಶಿಮ್ ಆಮ್ಲಾ ರೀತಿಯಲ್ಲಿ ನಕಲಿ ದಾಡಿ ಅಂಟಿಸಿಕೊಂಡಿದ್ದಾರೆ ಎಂದು. ಅದನ್ನು ನಾನು ಗಮನಿಸಲಿಲ್ಲ. ಆದರೆ ಒಂದು ಫಲಕ ಮಾತ್ರ ನನ್ನ ಕಣ್ಣು ಸೆಳೆಯಿತು. ‘ಬೀಯರ್ ಇಲ್ಲ-ಹೋಟೆಲ್ ಇಲ್ಲ; ಆದರೂ ನಾವು ಇಲ್ಲಿದ್ದೇವೆ’ ಎಂದು ಬರೆದಿದ್ದ ಫಲಕ.

ಎದುರಾಳಿ ಪಡೆಯಲ್ಲಿನ ಅದ್ಭುತವೆಂದರೆ ಅದು ಸಚಿನ್ ತೆಂಡೂಲ್ಕರ್. ಅವರು ಔಟಾಗಲೆಂದು ನಾವು ಅಂದುಕೊಂಡಿದ್ದು ಅದೆಷ್ಟೊಂದು ಬಾರಿ. ಆದರೂ ಸಚಿನ್ ಅಬ್ಬರದಿಂದ ರನ್ ಗಳಿಸುತ್ತಾ ಮುನ್ನುಗ್ಗಿದ್ದರು. ಈ ಬ್ಯಾಟ್ಸ್‌ಮನ್ ತನ್ನ ಕ್ರಿಕೆಟ್ ಜೀವನದಲ್ಲಿ ಇಷ್ಟೊಂದು ದೀರ್ಘ ಕಾಲ ದೈಹಿಕ ಸಾಮರ್ಥ್ಯವನ್ನು ಕಾಯ್ದುಕೊಂಡು ಸಾಗಿರುವ ರೀತಿಯನ್ನು ಮೆಚ್ಚಲೇಬೇಕು.
-ಗೇಮ್‌ಪ್ಲಾನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.