ADVERTISEMENT

ಕ್ರಿಕೆಟ್: ಇಂದಿನಿಂದ ರಣಜಿ ಫೈನಲ್

​ಪ್ರಜಾವಾಣಿ ವಾರ್ತೆ
Published 18 ಜನವರಿ 2012, 19:30 IST
Last Updated 18 ಜನವರಿ 2012, 19:30 IST

ಚೆನ್ನೈ (ಪಿಟಿಐ): ಹಾಲಿ ಚಾಂಪಿಯನ್ ರಾಜಸ್ತಾನ ತಂಡದವರು ಗುರುವಾರ ಇಲ್ಲಿ ಆರಂಭವಾಗಲಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ತಮಿಳುನಾಡು ತಂಡದ ಸವಾಲಿಗೆ ಉತ್ತರ ನೀಡಲು ಸಜ್ಜಾಗಿದ್ದಾರೆ.

ಐದು ದಿನಗಳ ಈ ಫೈನಲ್ ಪಂದ್ಯ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ. ಎಂಟು ವರ್ಷಗಳ ಬಳಿಕ ಫೈನಲ್ ತಲುಪಿರುವ ತಮಿಳುನಾಡು ಈ ಋತುವಿನಲ್ಲಿ ಸ್ಥಿರ ಪ್ರದರ್ಶನ ತೋರುತ್ತಿದೆ. ಅದರಲ್ಲೂ ಸೆಮಿಫೈನಲ್‌ನಲ್ಲಿ ಬಲಿಷ್ಠ ಮುಂಬೈಗೆ ಪೆಟ್ಟು ನೀಡಿದ್ದು ಲಕ್ಷ್ಮಿಪತಿ ಬಾಲಾಜಿ ಸಾರಥ್ಯದ ತಂಡದ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ.

ಹಾಗಾಗಿ ಈ ತಂಡವೀಗ ಮೂರನೇ ಬಾರಿ ರಣಜಿ ಟ್ರೋಫಿ ಎತ್ತಿ ಹಿಡಿಯುವ ಕನಸು ಕಾಣುತ್ತಿದೆ. ಆದರೆ ಪ್ಲೇಟ್ ಗುಂಪಿನಿಂದ ಮೇಲೆದ್ದು ಬಂದು 2010-11ರಲ್ಲಿ ಚಾಂಪಿಯನ್ ಆಗಿದ್ದ ರಾಜಸ್ತಾನ ಅಚ್ಚರಿ ಪ್ರದರ್ಶನ ತೋರುತ್ತಿದೆ. ಸ್ಟಾರ್ ಆಟಗಾರರು ಈ ತಂಡದಲ್ಲಿ ಇಲ್ಲದಿದ್ದರೂ ಬಲಿಷ್ಠ ತಂಡಗಳನ್ನು ಹಿಮ್ಮೆಟ್ಟಿಸಿ ಈ ಬಾರಿಯೂ ಅಂತಿಮ ಸೆಣಸಾಟಕ್ಕೆ ಸನ್ನದ್ಧವಾಗಿ ನಿಂತಿದೆ. ಸತತ ಎರಡನೇ ಬಾರಿ ಚಾಂಪಿಯನ್ ಆಗುವ ಭರವಸೆಯಲ್ಲಿದೆ.

ತಮಿಳುನಾಡು ತಂಡದಲ್ಲಿ ಮುರಳಿ ವಿಜಯ್, ಅಭಿನವ್ ಮುಕುಂದ್, ಎಸ್.ಬದರೀನಾಥ್, ದಿನೇಶ್ ಕಾರ್ತಿಕ್ ಹಾಗೂ ಬಾಲಾಜಿ ಅವರಂಥ ಆಟಗಾರರಿದ್ದಾರೆ. ರಾಜಸ್ತಾನ ತಂಡದಲ್ಲಿ ರಾಬಿನ್    ಬಿಸ್ತ್, ನಾಯಕ ಹೃಷಿಕೇಶ್ ಕಾನಿಟ್ಕರ್ ಪ್ರಮುಖ ಆಟಗಾರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.