ADVERTISEMENT

ಛತ್ತೀಸಗಡ ತಂಡ ಚಾಂಪಿಯನ್‌

ಜೂನಿಯರ್ ಮಹಿಳಾ ಹಾಕಿ ಬಿ ಡಿವಿಷನ್

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2014, 19:30 IST
Last Updated 13 ಮಾರ್ಚ್ 2014, 19:30 IST

ಮೈಸೂರು: ಚುರುಕಿನ ಪಾಸ್‌ಗಳ ಆಕರ್ಷಕ ಆಟ ಪ್ರದರ್ಶಿಸಿದ ಛತ್ತೀಸಗಡದ ‘ಹೈಸ್ಕೂಲ್ ಹುಡುಗಿಯರು’ ಗುರುವಾರ ಚಾಮುಂಡಿ ವಿಹಾರದಲ್ಲಿ 4ನೇ ರಾಷ್ಟ್ರೀಯ ಜೂನಿಯರ್ ಮಹಿಳೆಯರ ‘ಬಿ’ ಡಿವಿಷನ್ ಟೂರ್ನಿಯ ಪ್ರಶಸ್ತಿ ಗೆದ್ದುಕೊಂಡರು.

ಎಂಟು ಮತ್ತು ಒಂಬತ್ತನೇ ತರಗತಿಯ ವಿದ್ಯಾರ್ಥಿನಿಯರಿಂದ ಕೂಡಿರುವ ಛತ್ತೀಸಗಡ ತಂಡವು 6–1 (3–1) ರಿಂದ ಕೇರಳದ ವಿರುದ್ಧ ಗೆಲುವು ಸಾಧಿಸಿತು. ಪಂದ್ಯದ 6ನೇ ನಿಮಿಷದಲ್ಲಿಯೇ ಸಾಧನಾ ಸೆಂಗರ್ ತಂಡಕ್ಕೆ ಮೊದಲ ಗೋಲಿನ ಕಾಣಿಕೆ ನೀಡಿದರು. ತಮ್ಮ ಶರವೇಗದಿಂದ ಓಡುತ್ತಲೇ ಚೆಂಡನ್ನು ಗೋಲುಪೆಟ್ಟಿಗೆಯತ್ತ ಒಯ್ಯುವ ಮೂಲಕ ಎದುರಾಳಿಗಳ ಮೇಲೆ ಒತ್ತಡ ಹೇರಿದ ಮುನ್ಪಡೆ ಆಟಗಾರ್ತಿ ಉಪಾಸನಾ ಸಿಂಗ್ (ಜರ್ಸಿ 10) ಅವರು  13ನೇ ನಿಮಿಷದಲ್ಲಿ ಕೊಟ್ಟ ಪಾಸ್‌ ಅನ್ನು ರೇಣು ಯಾದವ್ ಗೋಲಿನಲ್ಲಿ ಪರಿವತಿರ್ಸಿದರು.

ನಂತರ ಉಪಾಸನಾ ಸಿಂಗ್ (27ನಿ) ಪೆನಾಲ್ಟಿ ಸ್ಟ್ರೋಕ್‌ನಲ್ಲಿ  ಕೇರಳದ ಗೋಲ್‌ಕೀಪರ್ ಎಂ.ಎಲ್. ಮಂಜಿಮಾ ಅವರ ಬಲಬದಿಯಿಂದ ಚೆಂಡನ್ನು ಪೆಟ್ಟಿಗೆಗೆ ಸೇರಿಸಿದರು. ಪ್ರಥಮಾರ್ಧ ಮುಗಿಯುವ ಒಂದು ನಿಮಿಷ ಮುನ್ನ ಕೇರಳದ ಎಂ.ಆರ್. ಸಿಂಧು ಒಂದು ಗೋಲು ಗಳಿಸುವ ಮೂಲಕ ಭರವಸೆ ಮೂಡಿಸಿದರು.

ದ್ವಿತೀಯಾರ್ಧದಲ್ಲಿ ಕೇರಳ ತಂಡದ ಆಟಗಾರ್ತಿಯರು ಮಾಡಿದ ಪ್ರಯತ್ನಗಳು ಫಲ ನೀಡಲಿಲ್ಲ. ಛತ್ತೀಸಗಡದ ಇಶಿಕಾ ಚೌಧರಿ (44ನಿ, 62ನಿ, 63ನಿ) ಹ್ಯಾಟ್ರಿಕ್ ಸಾಧಿಸುವ ಮೂಲಕ ಕೇರಳದ ಮರುಹೋರಾಟಕ್ಕೆ ತಡೆಯೊಡ್ಡಿದರು. ಅತ್ಯುತ್ತಮ ಹೊಂದಾಣಿಕೆಯ ಆಟ ಪ್ರದರ್ಶಿಸಿದ ಛತ್ತೀಸಗಡ ಹುಡುಗಿಯರ ಕರಾರುವಾಕ್ ಪಾಸ್‌ಗಳು ಮತ್ತು ಡಾಡ್ಜಿಂಗ್‌ ಕೌಶಲ್ಯಕ್ಕೆ ಪ್ರಶಸ್ತಿ ಒಲಿಯಿತು.

ನಮಗೂ ನಗದು ಕೊಡಿ: ‘ಇವತ್ತು ದೇಶದಲ್ಲಿ ಎಲ್ಲ ಕಡೆಯೂ ಕ್ರಿಕೆಟ್‌ಗೆ ಮಾತ್ರ ಹಣ, ಗೌರವ ಹರಿದು ಬರುತ್ತಿದೆ. ನಮಗೇಕೆ ಇಲ್ಲ. ನಾವು ರಾಷ್ಟ್ರೀಯ ಕ್ರೀಡೆಯನ್ನು ಉನ್ನತ ಮಟ್ಟಕ್ಕೆ ಏರಿಸುವ ಕನಸು ಹೊತ್ತು ಅಂಗಳಕ್ಕೆ ಇಳಿದವರು. ನಮಗೂ ಪ್ರೋತ್ಸಾಹ ಸಿಗಬೇಕು’ ಎಂದು ಬಿ ಡಿವಿಷನ್    ಪ್ರಶಸ್ತಿ ಗೆದ್ದ ಛತ್ತೀಸಗಡದ ಆಟಗಾರ್ತಿಯರು ಮನವಿ ಮಾಡಿದ್ದಾರೆ.

ಪಂದ್ಯದ ನಂತರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಗೋಲ್‌ಕೀಪರ್–ನಾಯಕಿ ನಂದಿನಿ ಕುಷ್ವಾ, ಕೃತಿಕಾ, ಆಕಾಂಕ್ಷಾ, ‘ನಮ್ಮ ತಂಡದಲ್ಲಿ 7 ಜನ ಎಂಟನೇ ತರಗತಿ ಮತ್ತು 8 ಜನರು 9ನೇ ತರಗತಿಯ ವಿದ್ಯಾರ್ಥಿನಿಯರು ಇದ್ದಾರೆ. ನಮ್ಮ ಮನೆಗಳಲ್ಲಿ ನಮಗೆ ಬಹಳಷ್ಟು ಉತ್ತೇಜನ ಕೊಡುತ್ತಿದ್ದಾರೆ. ಇವತ್ತಲ್ಲ ನಾಳೆ ನಾವು ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ವಿಶ್ವಾಸವಿದೆ. ಸರ್ಕಾರ ಮಹಿಳಾ ಹಾಕಿಯನ್ನು ಬೆಳೆಸಲು ಉತ್ತೇಜನ ನೀಡಬೇಕು’ ಎಂದು ಒತ್ತಾಯಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಹಾಕಿ ಕರ್ನಾಟಕದ ಕಾರ್ಯದರ್ಶಿ ಒಲಿಂಪಿಯನ್ ಎ.ಬಿ. ಸುಬ್ಬಯ್ಯ, ‘ದುರ್ಬಲ ತಂಡಗಳು ಆಟದ ಕೌಶಲ್ಯ ಬೆಳೆಸಿಕೊಂಡು ಉತ್ತಮ ರ್‌್್ಯಾಂಕಿಂಗ್ ಪಡೆಯಬೇಕು ಎಂಬ ಉದ್ದೇಶದಿಂದ ಹಾಕಿ ಇಂಡಿಯಾ ‘ಬಿ’ ಡಿವಿಷನ್ ಮಾದರಿಯನ್ನು ರೂಪಿಸಿದೆ.

ಇದು ಮೊದಲ ಬಾರಿಗೆ ನಡೆಯುತ್ತಿದ್ದು, ಪ್ರಮಾಣಪತ್ರವನ್ನು ಮಾತ್ರ ನೀಡಲಾಗುತ್ತದೆ. ಆದರೆ ವಿಜೇತರಾಗಿರುವ ತಂಡಗಳ ರಾಜ್ಯದ ಸಂಸ್ಥೆಗಳು ಮತ್ತು ಸರ್ಕಾರಗಳು ಏನಾದರೂ ನೀಡಬಹುದು. ಆದರೆ 15ರಿಂದ ಆರಂಭವಾಗುವ ‘ಎ’ ಡಿವಿಷನ್‌ ವಿಜೇತರಿಗೆ ಪ್ರಶಸ್ತಿ, ಪುರಸ್ಕಾರಗಳು ಇವೆ. ಅಲ್ಲದೇ ಗೆದ್ದ ತಂಡದ ಆಟಗಾರ್ತಿಯರಿಗೆ ಲ್ಯಾಪ್‌ಟಾಲ್ ನೀಡುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

ಗಂಗಾಪುರಕ್ಕೆ ಮೂರನೇ ಸ್ಥಾನ: ಮಧ್ಯಾಹ್ನ ನಡೆದ ಪಂದ್ಯದಲ್ಲಿ ಗಂಗಾಪುರ ಒಡಿಶಾ ತಂಡವು 2–0ಯಿಂದ ಮಣಿಪುರ ತಂಡದ ವಿರುದ್ಧ ಜಯಿಸಿ ಮೂರನೇ ಸ್ಥಾನ ಪಡೆಯಿತು. ಪ್ರಥಮಾರ್ಧ ದಲ್ಲಿಯೇ ರಿಂಕಿ  ಕುಜುರು (2ನಿ) ಮತ್ತು ಲಕ್ಷ್ಮೀ ಎಕ್ಕಾ (28ನಿ) ತಲಾ ಒಂದು ಗೋಲು ಹೊಡೆದು ಜಯದ ರೂವಾರಿಯಾದರು.

ಟೂರ್ನಿ ನಿರ್ದೇಶಕ ಡಿಕ್ರೂಜ್‌ಗೆ ಗಾಯ
ನಾಲ್ಕನೇ ರಾಷ್ಟ್ರೀಯ ಜೂನಿಯರ್ ಮಹಿಳೆಯರ ಹಾಕಿ ಟೂರ್ನಿ ನಡೆಯುತ್ತಿರುವ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಬುಧವಾರ ಸಂಜೆ  ಪ್ರೇಕ್ಷಕರ ಗ್ಯಾಲರಿಯ ಪೆಂಡಾಲ್‌ನ ಲೋಹದ ಕಂಬಗಳು ಬಿದ್ದ ಪರಿಣಾಮ ಟೂರ್ನಿ ನಿರ್ದೇಶಕ ಕೆಲ್ವಿನ್ ಡಿಕ್ರೂಜ್ ಅವರ ಬಲಗೈನ ಮಧ್ಯದ ಬೆರಳು ತುಂಡಾಯಿತು.

ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಪೆಟ್ಟು ಬಿದ್ದ ಕೈಗೆ ಬ್ಯಾಂಡೇಜ್ ಹಾಕಲಾಗಿದೆ. ಬುಧವಾರ ಸಂಜೆ  ಪಂದ್ಯ ನಡೆದ ಸಂದರ್ಭದಲ್ಲಿಈ ಘಟನೆ ಜರುಗಿತ್ತು.‘ಆಯೋಜಕರು ವ್ಯವಸ್ಥೆಯನ್ನು ಸರಿಯಾಗಿ ಪರಿಶೀಲಿಸ ಬೇಕಿತ್ತು. ಸರಿಯಾದ ಆಯೋಜನೆಯಿಲ್ಲದಿರುವುದೇ ಈ ಅವಘಡಕ್ಕೆ ಕಾರಣ. ನನ್ನ ಬೆರಳಿನ ಎಲುಬು ಎರಡು ತುಂಡಾಗಿರುವುದು ಎಕ್ಸ್‌ರೇ ಚಿತ್ರದಲ್ಲಿ ಕಂಡು ಬಂದಿದೆ. ಚೇತರಿಸಿಕೊಳ್ಳುತ್ತಿದ್ದೇನೆ’ ಎಂದು ಡಿಕ್ರೂಜ್ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.