ADVERTISEMENT

ಪದಕ ಕನಸಲ್ಲ; ಅದೇ ಗುರಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2012, 19:30 IST
Last Updated 18 ಜುಲೈ 2012, 19:30 IST

ಸೋನೆಪತ್ (ಪಿಟಿಐ): ಲಂಡನ್ ಒಲಿಂಪಿಕ್‌ಗೆ ಭಾರಿ ಕಷ್ಟಪಟ್ಟು ಅರ್ಹತೆ ಪಡೆದ ಕುಸ್ತಿಪಟು ನರಸಿಂಗ ಪಂಚಮ್ ಯಾದವ್ ಅವರು `ಪದಕ ಕನಸಲ್ಲ; ಅದೇ ಗುರಿ~ ಎಂದು ವಿಶ್ವಾಸದಿಂದ ಹೇಳಿದ್ದಾರೆ.

ಅರ್ಹತೆ ಪಡೆಯುವ ಹಾದಿಯಲ್ಲಿಯೇ ಸಾಕಷ್ಟು ಸವಾಲುಗಳನ್ನು ಎದುರಿಸಿ ಗಟ್ಟಿಯಾಗಿರುವ ತಾವು ಲಂಡನ್‌ನಲ್ಲಿ ವಿಜಯ ವೇದಿಕೆಯ ಮೇಲೆ ಕಾಣಿಸಿಕೊಳ್ಳಲು ತಕ್ಕ ಪ್ರಯತ್ನ ಮಾಡುವುದಾಗಿ ಯಾದವ್ ಅವರು ಬುಧವಾರ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

`ಪದಕ ಗೆಲ್ಲಬೇಕು. ಅದೇ ಉದ್ದೇಶ ಹಾಗೂ ಗುರಿ. ಅದರ ಹೊರತಾಗಿ ಬೇರೆ ಯಾವುದೇ ಯೋಚನೆ ಇಲ್ಲ~ ಎಂದ ಅವರು `ದೊಡ್ಡ ಕ್ರೀಡಾಕೂಟದಲ್ಲಿ ವಿಜಯ ವೇದಿಕೆಯ ಮೇಲೆ ನಿಲ್ಲುವುದು ಎಷ್ಟು ಕಷ್ಟ ಎನ್ನುವುದೂ ಗೊತ್ತು. ಜೊತೆಗೆ ಆ ಮಟ್ಟಕ್ಕೆ ಏರುವುದರ ಮಹತ್ವ ಏನೆಂದು ಕೂಡ ಅರಿತಿದ್ದೇನೆ~ ಎಂದರು.

ADVERTISEMENT

`ನಿರೀಕ್ಷೆ ದೊಡ್ಡದು. ಹಾಗೆಂದು ಅನಗತ್ಯವಾಗಿ ಒತ್ತಡವನ್ನು ಹೇರಿಕೊಳ್ಳುವುದಿಲ್ಲ. ಸಹಜವಾಗಿ ಹಾಗೂ ನನ್ನ ಸಾಮರ್ಥ್ಯ ಒಗ್ಗೂಡಿಸಿ ಪೈಪೋಟಿ ನಡೆಸುತ್ತೇನೆ~ ಎಂದರು 2010ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸ್ವರ್ಣ ಪದಕ ಗೆದ್ದಿದ್ದ ಯಾದವ್.

ಕಳೆದ ಮೇ ತಿಂಗಳಿನಲ್ಲಿ ಫಿನ್ಲೆಂಡ್‌ನಲ್ಲಿ ನಡೆದಿದ್ದ ಕೊನೆಯ ಒಲಿಂಪಿಕ್ ಅರ್ಹತಾ ಚಾಂಪಿಯನ್‌ಷಿಪ್‌ನಲ್ಲಿ ಗ್ರೀಸ್‌ನ ಓಲ್ಗೆ ಮೋಟ್ಸಲಿನ್ ಅವರನ್ನು ಸೋಲಿಸಿದ್ದ ಯಾದವ್ ಅವರು `ನನಗೆ ಸುಶೀಲ್ ಕುಮಾರ್ ಅವರೇ ಮಾದರಿ~ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.