ನವದೆಹಲಿ (ಐಎಎನ್‌ಎಸ್): ಐದು ಬಾರಿಯ ವಿಶ್ವ ಚಾಂಪಿಯನ್ ಭಾರತದ ಮೇರಿ ಕೋಮ್ ಮಂಗೋಲಿಯದ ಉಲಾಬಾತರ್‌ನಲ್ಲಿ ನಡೆಯುತ್ತಿರುವ ಆರನೇ ಏಷ್ಯನ್ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದ್ದಾರೆ.
ಮಂಗಳವಾರ ನಡೆದ 51 ಕೆ.ಜಿ. ವಿಭಾಗದ ಎರಡನೇ ಸುತ್ತಿನ ಸ್ಪರ್ಧೆಯಲ್ಲಿ ಮೇರಿ 6-4 ಪಾಯಿಂಟ್‌ಗಳಿಂದ ಥಾಯ್ಲೆಂಡ್‌ನ ಲಾಪಿಯಮ್ ಪಿಯಮ್‌ವಿಲೈ ಎದುರು ಗೆದ್ದರು.
ಲಂಡನ್ ಒಲಿಂಪಿಕ್ಸ್‌ಗೆ ಈ ಬಾರಿ ಮಹಿಳೆಯರ ಬಾಕ್ಸಿಂಗ್‌ಗೂ ಅವಕಾಶ ನೀಡಲಾಗಿದೆ. ಮೇರಿ ಈ ಹಿಂದೆ 48 ಕೆ.ಜಿ.ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರು. ಆದರೆ ಒಲಿಂಪಿಕ್ಸ್‌ನಲ್ಲಿ 51 ಕೆ.ಜಿ ಇರುವ ಕಾರಣ ಈಗ ಈ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ.
ಈ ಸ್ಪರ್ಧೆಯ ಮೊದಲ ಸುತ್ತಿನಲ್ಲೇ ಮಣಿಪುರದ ಮೇರಿ 2-1 ಪಾಯಿಂಟ್‌ನಿಂದ ಮುನ್ನಡೆ ಸಾಧಿಸಿದರು. ಎರಡನೇ ಸುತ್ತಿನ ಅಂತ್ಯಕ್ಕೆ ಅವರು ಮುನ್ನಡೆಯನ್ನು 3-1ಕ್ಕೆ ಹೆಚ್ಚಿಸಿಕೊಂಡರು.
ಮೂರನೇ ಸುತ್ತಿನಲ್ಲಿ ಲಾಪಿಯಮ್ ಪಿಯಮ್‌ವಿಲೈ ತಿರುಗೇಟು ನೀಡಲು ಪ್ರಯತ್ನಿಸಿದರು. ಆದರೆ ಅಂತಿಮ ಸುತ್ತಿನಲ್ಲಿ ಮೇರಿ 6-4 ಪಾಯಿಂಟ್ ಮುನ್ನಡೆಯೊಂದಿಗೆ ಸ್ಪರ್ಧೆ ಕೊನೆಗೊಳಿಸಿದರು. ಅವರು ಕಾರ್ಟರ್ ಫೈನಲ್‌ನಲ್ಲಿ ನಂದಿಸೆಟ್‌ಸೆಗ್ ಮ್ಯಾಗ್‌ಮರ್ದುಲ್ ಅವರನ್ನು ಎದುರಿಸಲಿದ್ದಾರೆ. 57 ಕೆ.ಜಿ.ವಿಭಾಗದಲ್ಲಿ ಭಾರತದ ಮಂದಾಕಿನಿ ಚಾನು ಮುನ್ನಡೆ ಸಾಧಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.