ಕೇಪ್‌ಟೌನ್: ಆತಿಥೇಯರ ವಿರುದ್ಧ ಇಲ್ಲಿ ನಡೆಯುತ್ತಿರುವ ಭಾರತದ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನ ಮಳೆಗೆ ಆಹುತಿಯಾಗಿದೆ.
ವಿಶ್ವ ಕ್ರಮಾಂಕದಲ್ಲಿ ಮೊದಲ ಎರಡು ಸ್ಥಾನಗಳನ್ನು ಹೊಂದಿರುವ ತಂಡಗಳ ನಡುವಿನ ಪಂದ್ಯದ ಮೊದಲ ಎರಡು ದಿನ ಸಮಬಲದ ಹೋರಾಟ ಕಂಡುಬಂದಿತ್ತು. ಮೊದಲ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಭಾರತ 286 ರನ್‌ಗಳಿಗೆ ಕಟ್ಟಿ ಹಾಕಿತ್ತು.
ನಂತರ ಭಾರತದ ಅಗ್ರ ಕ್ರಮಾಂಕದ ಆಟಗಾರರು ಬ್ಯಾಟಿಂಗ್ ವೈಫಲ್ಯ ಕಂಡಿದ್ದರು. ಆದರೆ ಹಾರ್ದಿಕ್
ಪಾಂಡ್ಯ ಮತ್ತು ಭುವನೇಶ್ವರ್ ಕುಮಾರ್ ಅವರ ಅಮೋಘ ಜೊತೆಯಾಟದ ಬಲದಿಂದ ತಂಡ 200 ರನ್‌ಗಳ ಗಡಿ ದಾಟಿತ್ತು.
ಶನಿವಾರ ದಿನದಾಟ ಮುಕ್ತಾಯಕ್ಕೆ ದಕ್ಷಿಣ ಆಫ್ರಿಕಾ ಎರಡನೇ ಇನಿಂಗ್ಸ್‌ನಲ್ಲಿ ಎರಡು ವಿಕೆಟ್‌ಗಳನ್ನು ಕಳೆದುಕೊಂಡು 65 ರನ್ ಗಳಿಸಿ 142 ರನ್‌ಗಳ ಮುನ್ನಡೆ ಪಡೆದಿತ್ತು. ಹಾಶೀಂ ಆಮ್ಲ (4) ಮತ್ತು ಕಗಿಸೊ ರಬಾಡ (2) ಕ್ರೀಸ್‌ನಲ್ಲಿದ್ದರು.
ಮೂರು ಪಂದ್ಯಗಳ ಸರಣಿಯಲ್ಲಿ ಜಯ ಗಳಿಸುವ ಭರವಸೆ ಹೊಂದಿದ್ದ ಉಭಯ ತಂಡಗಳ ಆಸೆಗೆ ಭಾನುವಾರ ಮಳೆ ಅಡ್ಡಿಯಾಯಿತು.
ಒಂದು ತಾಸು ತಡವಾಗಿ ಪಂದ್ಯ ಆರಂಭವಾಗುವ ನಿರೀಕ್ಷೆಯಲ್ಲಿದ್ದ ಪ್ರೇಕ್ಷಕರಿಗೆ ನಿರಂತರವಾಗಿ ಸುರಿದ ಮಳೆ ನಿರಾಸೆ ಮೂಡಿಸಿತು. ಸ್ಥಳೀಯ
ಸಮಯ ಮಧ್ಯಾಹ್ನ 3.30ಕ್ಕೆ ದಿನದಾಟವನ್ನು ರದ್ದುಗೊಳಿಸಲು ನಿರ್ಧರಿಸಲಾಯಿತು.
ಸರಣಿಯಿಂದ ಹೊರ ಬಿದ್ದ ಸ್ಟೇನ್
ಪಂದ್ಯದ ಎರಡನೇ ದಿನವಾದ ಶನಿವಾರ ಹಿಮ್ಮಡಿ ನೋವಿನಿಂದ ಅಂಗಣ ತೊರೆದ ವೇಗಿ ಡೇಲ್ ಸ್ಟೇನ್ ಸರಣಿಯಿಂದ ಹೊರ ಬಿದ್ದಿದ್ದಾರೆ. ಇದನ್ನು ದಕ್ಷಿಣ ಆಫ್ರಿಕಾ ತಂಡದ ಆಡಳಿತ ಖಚಿತಪಡಿಸಿದೆ.
‘ಅವರ ಎಡಗಾಲಿನ ಹಿಮ್ಮಡಿಯಲ್ಲಿ ಕಾಣಿಸಿಕೊಂಡಿರುವ ನೋವು ನಿವಾರಣೆಯಾಗಲು ಕನಿಷ್ಠ ಆರು ವಾರಗಳು ಬೇಕು’ ಎಂದು ಹೇಳಿರುವ ಆಡಳಿತ ‘ಈ ಪಂದ್ಯದಲ್ಲಿ ಇನ್ನುಳಿದ ದಿನಗಳಲ್ಲಿ ಸ್ಟೇನ್ ಬೌಲಿಂಗ್ ಮಾಡುವುದಿಲ್ಲ. ಅಗತ್ಯ ಬಿದ್ದರೆ ಅವರನ್ನು ಬ್ಯಾಟಿಂಗ್‌ಗೆ ಇಳಿಸಲಾಗುವುದು’ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.