ADVERTISEMENT

ಭಾರತ ‘ಎ’ ತಂಡದ ಮಡಿಲಿಗೆ ಸರಣಿ

ಐದು ವಿಕೆಟ್ ಉರುಳಿಸಿದ ರಾಹುಲ್ ಚಾಹರ್; ಎರಡನೇ ಪಂದ್ಯದಲ್ಲೂ ಭರ್ಜರಿ ಗೆಲುವು

​ಪ್ರಜಾವಾಣಿ ವಾರ್ತೆ
Published 3 ಜೂನ್ 2019, 20:00 IST
Last Updated 3 ಜೂನ್ 2019, 20:00 IST
ಪ್ರಶಸ್ತಿಯೊಂದಿಗೆ ಸಂಭ್ರಮಿಸಿದ ಭಾರತ ಎ ತಂಡದ ಆಟಗಾರರು –ಪ್ರಜಾವಾಣಿ ಚಿತ್ರ:ತಾಜುದ್ದೀನ್‌ ಆಜಾದ್‌
ಪ್ರಶಸ್ತಿಯೊಂದಿಗೆ ಸಂಭ್ರಮಿಸಿದ ಭಾರತ ಎ ತಂಡದ ಆಟಗಾರರು –ಪ್ರಜಾವಾಣಿ ಚಿತ್ರ:ತಾಜುದ್ದೀನ್‌ ಆಜಾದ್‌   

ಹುಬ್ಬಳ್ಳಿ: ಎದುರಾಳಿಗಳ ಮೇಲೆ ಮತ್ತೊಮ್ಮೆ ಪಾರಮ್ಯ ಮೆರೆದ ಭಾರತ ‘ಎ’ ತಂಡ ‘ಟೆಸ್ಟ್’ ಸರಣಿಯ ಎರಡನೇ ಪಂದ್ಯದಲ್ಲೂ ಸುಲಭ ಜಯ ಗಳಿಸಿತು. ಈ ಮೂಲಕ ಸರಣಿಯನ್ನು ಮುಡಿಗೇರಿಸಿಕೊಂಡಿತು.

ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಸೋಮವಾರ ಮುಕ್ತಾಯಗೊಂಡ ಪಂದ್ಯದಲ್ಲಿ ಪ್ರಿಯಾಂಕ್ ಪಾಂಚಾಲ್ ಬಳಗ ಶ್ರೀಲಂಕಾ ‘ಎ’ ತಂಡವನ್ನು 152 ರನ್‌ಗಳಿಂದ ಮಣಿಸಿತು. ಬೆಳಗಾವಿಯಲ್ಲಿ ನಡೆದಿದ್ದ ಮೊದಲ ‍ಪಂದ್ಯದಲ್ಲಿ ಆತಿಥೇಯರು ಇನಿಂಗ್ಸ್ ಮತ್ತು 205 ರನ್‌ಗಳಿಂದ ಗೆದ್ದಿದ್ದರು.

ಎರಡನೇ ಪಂದ್ಯದ ಮೊದಲ ದಿನ ವಿಕೆಟ್ ಕೀಪರ್ ಕೆ.ಎಸ್.ಭರತ್ ಅವರ ಅಮೋಘ ಶತಕದ ಬಲದಿಂದ ಭಾರತ ‘ಎ’ ಆಧಿಪತ್ಯ ಸ್ಥಾಪಿಸಿತ್ತು. ಮೊದಲ ಇನಿಂಗ್ಸ್‌ನಲ್ಲಿ 269 ರನ್ ಗಳಿಸಿದ್ದ ತಂಡ ಎದುರಾಳಿಗಳನ್ನು 212 ರನ್‌ಗಳಿಗೆ ಕಟ್ಟಿಹಾಕಿತ್ತು.

ADVERTISEMENT

ಎರಡನೇ ಇನಿಂಗ್ಸ್‌ನಲ್ಲಿ ಭಾರತ ‘ಎ’ ತಂಡದ ಬ್ಯಾಟಿಂಗ್ ಇನ್ನಷ್ಟು ಕಳೆಗಟ್ಟಿತ್ತು. ಅಗ್ರ ಕ್ರಮಾಂಕದ ಅನ್ಮೋಲ್ ಪ್ರೀತ್ ಸಿಂಗ್, ಸಿದ್ದೇಶ್ ಲಾಡ್ ಮತ್ತು ಕೆ.ಎಸ್.ಭರತ್ ಅರ್ಧಶತಕ ಗಳಿಸಿ ಎರಡನೇ ದಿನ ಮಿಂಚಿದ್ದರು.

ಮೂರನೇ ದಿನ ರಾಹುಲ್ ಚಾಹರ್ ಹಾಗೂ ಜಯಂತ್ ಯಾದವ್ ನಡುವಿನ 123 ರನ್‌ಗಳ ಬಲದಿಂದ ತಂಡ 372 ರನ್‌ ಸೇರಿಸಿತ್ತು. 439 ರನ್‌ಗಳ ಜಯದ ಗುರಿ ಬನ್ನತ್ತಿದ ಶ್ರೀಲಂಕಾ ‘ಎ’ ಮೂರನೇ ದಿನವಾದ ಭಾನುವಾರ 210 ರನ್‌ ಗಳಿಸುವಷ್ಟರಲ್ಲಿ ಏಳು ವಿಕೆಟ್ ಕಳೆದುಕೊಂಡಿತ್ತು.

ತಂಡದ ಉಳಿದ ಮೂರು ವಿಕೆಟ್‌ಗಳನ್ನು ಉರುಳಿಸಲು ಭಾರತದ ಬೌಲರ್‌ಗಳಿಗೆ ಕೇವಲ 15.4 ಓವರ್‌ಗಳು ಸಾಕಾದವು.

ಲಕ್ಷಣ್ ಸಂದಗನ್ ದಿನದ ಮೂರನೇ ಓವರ್‌ನಲ್ಲಿ ವಾಪಸಾದರು. ಭಾನುವಾರ ಮೂರು ವಿಕೆಟ್ ಉರುಳಿಸಿದ್ದ ರಾಹುಲ್ ಚಾಹರ್ ಅವರು ಸಂದಗನ್ ಅವರನ್ನು ಎಲ್‌ಬಿಡಬ್ಲ್ಯು ಬಲೆಯಲ್ಲಿ ಸಿಲುಕಿಸಿದರು.

ಅರ್ಧಶತಕದತ್ತ ಹೆಜ್ಜೆ ಹಾಕಿದ್ದ ಕಮಿಂದು ಮೆಂಡಿಸ್ ಅವರನ್ನು ಜಯಂತ್ ಯಾದವ್ ವಾಪಸ್ ಕಳುಹಿಸಿದರು.

ಸೆಟೆದು ನಿಂತ ವಿಶ್ವ ಫರ್ನಾಂಡೊ–ಲಾಹಿರು ಕುಮಾರ:234 ರನ್‌ಗಳಿಗೆ ಒಂಬತ್ತು ವಿಕೆಟ್ ಕಳೆದುಕೊಂಡ ಪ್ರವಾಸಿ ತಂಡದ ಸೋಲಿನ ಅಂತರ ತಗ್ಗಿಸಲು ವಿಶ್ವ ಫರ್ನಾಂಡೊ ಮತ್ತು ಲಾಹಿರು ಕುಮಾರ ಜೋಡಿ ಪ್ರಯತ್ನಿಸಿದರು. ಪಾಂಚಾಲ್ ಬಳಗದ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದ ಇವರಿಬ್ಬರು ಕೊನೆಯ ವಿಕೆಟ್‌ಗೆ 43 ರನ್ ಸೇರಿಸಿದರು.

ವಿಶ್ವ ಫರ್ನಾಂಡೊ ಅವರ ವಿಕೆಟ್ ಕಬಳಿಸುವ ಮೂಲಕ ರಾಹುಲ್ ಚಾಹರ್ ಈ ಜೊತೆಯಾಟವನ್ನು ಮುರಿದರು. ಚಾಹರ್ ಈ ಮೂಲಕ ಐದು ವಿಕೆಟ್‌ಗಳ ಗೊಂಚಲನ್ನು ತಮ್ಮದಾಗಿಸಿಕೊಂಡರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌ ಭಾರತ ‘ಎ’: 269; ಶ್ರೀಲಂಕಾ ‘ಎ’: 212; ಎರಡನೇ ಇನಿಂಗ್ಸ್‌: ಭಾರತ ‘ಎ’: 372; ಶ್ರೀಲಂಕಾ ‘ಎ’ (ಭಾನುವಾರದ ಅಂತ್ಯಕ್ಕೆ 51 ಓವರ್‌ಗಳಲ್ಲಿ 7ಕ್ಕೆ 210): 277 (ಕಮಿಂದು ಮೆಂಡಿಸ್ 46, ಲಕ್ಷಣ್ ಸಂದಗನ್ 8, ವಿಶ್ವ ಫರ್ನಾಂಡೊ 32, ಲಾಹಿರು ಕುಮಾರ ಔಟಾಗದೆ 13; ಸಂದೀಪ್ ವಾರಿಯರ್ 33ಕ್ಕೆ1, ಆದಿತ್ಯ ಸರ್ವಟೆ 24ಕ್ಕೆ1, ಶಿವಂ ದುಬೆ 26ಕ್ಕೆ2, ರಾಹುಲ್ ಚಾಹರ್ 112ಕ್ಕೆ5, ಜಯಂತ್ ಯಾದವ್ 67ಕ್ಕೆ1). ಫಲಿತಾಂಶ: ಭಾರತ ‘ಎ’ ತಂಡಕ್ಕೆ 152 ರನ್‌ಗಳ ಜಯ. ಪಂದ್ಯಶ್ರೇಷ್ಠ: ಕೆ.ಎಸ್.ಭರತ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.