ADVERTISEMENT

ಸಚಿನ್ ಸಾಧನೆ: ಏಕದಿನ ಕ್ರಿಕೆಟ್‌ನ ಮೊದಲ ದ್ವಿಶತಕ ದಾಖಲಾಗಿದ್ದು ಇದೇ ದಿನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಫೆಬ್ರುವರಿ 2022, 4:49 IST
Last Updated 24 ಫೆಬ್ರುವರಿ 2022, 4:49 IST
ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್   

ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟರ್, ಭಾರತದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಮೊಟ್ಟ ಮೊದಲ ಆಟಗಾರ ಎಂಬ ಶ್ರೇಯಕ್ಕೆ ಭಾಜನರಾದದ್ದು ಇದೇ ದಿನ. ಅವರು ದಕ್ಷಿಣ ಆಫ್ರಿಕಾ ವಿರುದ್ಧ ಗ್ವಾಲಿಯರ್‌ನಲ್ಲಿ ಹನ್ನೆರಡು ವರ್ಷಗಳ ಹಿಂದೆ (2010ರಫೆಬ್ರುವರಿ 24ರಂದು) ನಡೆದ ಪಂದ್ಯದಲ್ಲಿ ಅಜೇಯ 200 ರನ್‌ ಗಳಿಸುವ ಮೂಲಕ ಈ ಸಾಧನೆ ಮಾಡಿದ್ದರು.

147 ಎಸೆತಗಳನ್ನು ಎದುರಿಸಿದ್ದ ಸಚಿನ್, 25ಬೌಂಡರಿ ಹಾಗೂ 3 ಅಮೋಘ ಸಿಕ್ಸರ್‌ ಸಹಿತ ದ್ವಿಶತಕ ಸಿಡಿಸಿದ್ದರು. ಅವರ ಇನಿಂಗ್ಸ್‌ ಬಲದಿಂದ ಭಾರತ ನಿಗದಿತ 50 ಓವರ್‌ಗಳಲ್ಲಿ ಮೂರು ವಿಕೆಟ್‌ ನಷ್ಟಕ್ಕೆ 401 ರನ್‌ ಕಲೆಹಾಕಿತ್ತು. ಈ ಮೊತ್ತ ಬೆನ್ನತ್ತಿದ ಆಫ್ರಿಕನ್ನರು42.5 ಓವರ್‌ಗಳಲ್ಲಿ 248 ರನ್‌ ಗಳಿಸಿ ಆಲೌಟ್ ಆಗಿದ್ದರು. ಇದರೊಂದಿಗೆ ಭಾರತ ತಂಡ 153 ರನ್ ಅಂತರದ ಗೆಲುವು ಸಾಧಿಸಿತ್ತು.

ಪಂದ್ಯವೊಂದರಲ್ಲಿ ಸಚಿನ್ ಬ್ಯಾಟಿಂಗ್ ವೈಖರಿ

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು (34,357) ರನ್, ಹೆಚ್ಚು ಶತಕ (100), ಹೆಚ್ಚು ಅರ್ಧಶತಕ (164) ಸೇರಿದಂತೆ ಹಲವು ದಾಖಲೆಗಳನ್ನುಸಚಿನ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ADVERTISEMENT

ಸಚಿನ್ ದ್ವಿಶತಕ ಸಾಧನೆಯನ್ನು ಸ್ಮರಿಸಿ ಬಿಸಿಸಿಐ ಟ್ವೀಟ್ ಮಾಡಿದೆ.

ಏಕದಿನ ಕ್ರಿಕೆಟ್‌ನಲ್ಲಿ 463 ಪಂದ್ಯಗಳ452 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿರುವ ಅವರು,ಬರೋಬ್ಬರಿ18,426 ರನ್ ಗಳಿಸಿದ್ದಾರೆ. ಇನ್ನೂರು ಏಕದಿನ ಪಂದ್ಯಗಳ 329 ಇನಿಂಗ್ಸ್‌ಗಳಿಂದ15,921 ರನ್ ಕಲೆಹಾಕಿದ್ದಾರೆ. ಆಡಿರುವ ಏಕೈಕ ಟಿ–20 ಪಂದ್ಯದಲ್ಲಿ 20 ರನ್ ಗಳಿಸಿದ್ದಾರೆ. ಟೆಸ್ಟ್‌ನಲ್ಲಿ 51 ಮತ್ತು ಏಕದಿನ ಕ್ರಿಕೆಟ್‌ನಲ್ಲಿ 49 ಶತಕಗಳನ್ನೂ ಸಿಡಿಸಿದ್ದಾರೆ.

ದ್ವಿಶತಕ ಗಳಿಕೆಯಲ್ಲಿ ರೋಹಿತ್ ಮುಂದು..
ಏಕದಿನ ಕ್ರಿಕೆಟ್‌ನಲ್ಲಿ ಇದುವರೆಗೆ 8 ದ್ವಿಶತಕಗಳು ಮೂಡಿ ಬಂದಿವೆ. ಈ ಪೈಕಿ ಭಾರತದ ಬ್ಯಾಟರ್‌ಗಳೇ 5 ದ್ವಿಶತಕ ಸಿಡಿಸಿದ್ದಾರೆ ಎಂಬುದು ವಿಶೇಷ.

ಸಚಿನ್ ಹಾಗೂ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ (209) ತಲಾ ಒಂದೊಂದು ದ್ವಿಶತಕ ಗಳಿಸಿದ್ದಾರೆ. ಉಳಿದ ಮೂರು ದ್ವಿಶತಕಗಳು ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ (208, 209, 264) ಅವರ ಬ್ಯಾಟ್‌ನಿಂದ ಮೂಡಿಬಂದಿವೆ.

ಏಕದಿನ ಕ್ರಿಕೆಟ್‌ನಲ್ಲಿ ಒಂದಕ್ಕಿಂತ ಹೆಚ್ಚು ದ್ವಿಶಕತ ಗಳಿಸಲು ರೋಹಿತ್ ಹೊರತುಪಡಿಸಿ ಬೇರಾವ ಬ್ಯಾಟರ್‌ಗೂ ಸಾಧ್ಯವಾಗಿಲ್ಲ.

ರೋಹಿತ್ ಆಸ್ಟ್ರೇಲಿಯಾ ವಿರುದ್ಧ 2013ರಲ್ಲಿ209 ರನ್ ಗಳಿಸಿದ್ದರು. ಇನ್ನೆರಡು ದ್ವಿಶತಕಗಳನ್ನು ಶ್ರೀಲಂಕಾ ವಿರುದ್ಧ 2014 ಮತ್ತು 2017ರಲ್ಲಿ ಕ್ರಮವಾಗಿ 264 ಹಾಗೂ ಅಜೇಯ 208 ರನ್ ಬಾರಿಸಿದ್ದರು.

ಉಳಿದಂತೆ ಪಾಕಿಸ್ತಾನದ ಫಖರ್ ಜಮಾನ್ (ಜಿಂಬಾಬ್ವೆ ವಿರುದ್ಧ 2018ರಲ್ಲಿ 210 ರನ್), ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ (ವೆಸ್ಟ್‌ ಇಂಡೀಸ್‌ ವಿರುದ್ಧ 2015ರಲ್ಲಿ 237 ರನ್) ಮತ್ತು ವೆಸ್ಟ್‌ ಇಂಡೀಸ್‌ನ ಕ್ರಿಸ್ ಗೇಲ್ (ಜಿಂಬಾಬ್ವೆ ವಿರುದ್ಧ 2015ರಲ್ಲಿ 215 ರನ್) ತಲಾ ಒಂದೊಂದು ದ್ವಿಶತಕ ಗಳಿಸಿದ ದಾಖಲೆ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.