ADVERTISEMENT

ಐಪಿಎಲ್ ಹಬ್ಬಕ್ಕೆ ಹದಿನಾರರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2023, 19:10 IST
Last Updated 30 ಮಾರ್ಚ್ 2023, 19:10 IST
ರೋಹಿತ್ ಶರ್ಮಾ
ರೋಹಿತ್ ಶರ್ಮಾ   

ನವದೆಹಲಿ (ಪಿಟಿಐ): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಚೊಚ್ಚಲ ಪ್ರಶಸ್ತಿ ಜಯಿಸುವ ಕನಸು. ಬಹುತೇಕ ತಮ್ಮ ವೃತ್ತಿಜೀವನದ ಕೊನೆಯ ಟೂರ್ನಿಯಲ್ಲಿ ಮಿಂಚುವ ಹುಮ್ಮಸ್ಸು ಮಹೇಂದ್ರಸಿಂಗ್ ಧೋನಿಗೆ. ಅತ್ಯಂತ ಯಶಸ್ವಿ ನಾಯಕನೆಂಬ ಹೆಗ್ಗಳಿಕೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನು ಅಲಂಕರಿಸುವ ಉತ್ಸಾಹ ರೋಹಿತ್ ಶರ್ಮಾಗೆ. ಶುಕ್ರವಾರ ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಹತ್ತು ತಂಡಗಳ ಆಟಗಾರರಿಗೆ ಇಂತಹ ಹತ್ತಾರು ಕನಸುಗಳಿವೆ. ಧೋನಿ, ಕೊಹ್ಲಿ ಮತ್ತು ರೋಹಿತ್ ಅವರು ಕಳೆದ 15 ಆವೃತ್ತಿಗಳಲ್ಲಿ ತಮ್ಮ ಆಟದ ಮೂಲಕ ಟೂರ್ನಿಯನ್ನು ಶ್ರೀಮಂತಗೊಳಿಸಿದ್ದಾರೆ. ಕ್ರಿಕೆಟ್ ಮತ್ತು ಮನರಂಜನೆಯ ಸಮ್ಮಿಶ್ರ ಪಾಕವಾಗಿರುವ ಟೂರ್ನಿಯಲ್ಲಿ ಈ ಬಾರಿ ಕೆಲವು ಹೊಸ ಪ್ರತಿಭೆಗಳು ಕಣಕ್ಕಿಳಿಯಲಿವೆ. ಕೆಲವು ಪ್ರಮುಖರು ಗಾಯದ ಸಮಸ್ಯೆಯಿಂದಾಗಿ ಹೊರಗುಳಿದಿದ್ದಾರೆ. ಆಟದ ರೋಚಕತೆ ಹೆಚ್ಚಿಸುವ ಕೆಲವು ಹೊಸ ನಿಯಮಗಳೂ ಜಾರಿಯಾಗುತ್ತಿವೆ.

ಈ ಬಾರಿ ‘ಇಂಪ್ಯಾಕ್ಟ್‌ ಪ್ಲೇಯರ್’ ಕೂಡ ಕಣಕ್ಕಿಳಿಯಲಿರುವುದು ಹೊಸ ಬೆಳವಣಿಗೆ.

ಉದ್ಘಾಟನೆಯಲ್ಲಿ ರಶ್ಮಿಕಾ, ತಮನ್ನಾ

ADVERTISEMENT

ಅಹಮದಾಬಾದ್‌: ಐಪಿಎಲ್‌ ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲಿ ನಟಿಯರಾದ ರಶ್ಮಿಕಾ ಮಂದಣ್ಣ ಮತ್ತು ತಮನ್ನಾ ಭಾಟಿಯಾ ಸೇರಿದಂತೆ ಪ್ರಮುಖ ತಾರೆಯರು ಪ್ರದರ್ಶನ ನೀಡಲಿದ್ದಾರೆ.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶುಕ್ರವಾರ ಮೊದಲ ಪಂದ್ಯಕ್ಕೂ ಮುನ್ನ ವರ್ಣರಂಜಿತ ಸಮಾರಂಭ ಆಯೋಜಿಸಲಾಗಿದೆ.

ರಶ್ಮಿಕಾ ಮತ್ತು ತಮನ್ನಾ ಅವರು ಪಾಲ್ಗೊಳ್ಳುವುದನ್ನು ಐಪಿಎಲ್‌ ಟ್ವಿಟರ್‌ ಖಾತೆ ಖಚಿತಪಡಿಸಿದೆ. ಗಾಯಕ ಅರಿಜೀತ್‌ ಸಿಂಗ್‌ ಅವರೂ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಸಮಾರಂಭ ಸಂಜೆ 6 ಕ್ಕೆ ಆರಂಭವಾಗಲಿದೆ.

‘ಕ್ರಿಕೆಟ್‌ನ ಅತಿದೊಡ್ಡ ಹಬ್ಬದ ಉದ್ಘಾಟನಾ ಸಮಾರಂಭವು ಜಗತ್ತಿನ ಅತಿದೊಡ್ಡ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಅರಿಜಿತ್‌ ಸಿಂಗ್‌ ಗಾಯನ ನಡೆಸಿಕೊಡಲಿದ್ದಾರೆ’ ಎಂದು ಟ್ವಿಟರ್‌ ಖಾತೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.