ADVERTISEMENT

Ind vs Ban: ಮೂರೇ ದಿನದಲ್ಲಿ ಮುಗಿದ ಮೊದಲ ಟೆಸ್ಟ್, ಭಾರತಕ್ಕೆ ಇನಿಂಗ್ಸ್‌ ಜಯ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2019, 10:49 IST
Last Updated 16 ನವೆಂಬರ್ 2019, 10:49 IST
ವಿಕೆಟ್‌ ಪಡೆದ ಸಂಭ್ರಮದಲ್ಲಿ ಮೊಹಮದ್‌ ಶಮಿ
ವಿಕೆಟ್‌ ಪಡೆದ ಸಂಭ್ರಮದಲ್ಲಿ ಮೊಹಮದ್‌ ಶಮಿ   

ಇಂದೋರ್:ಬಾಂಗ್ಲಾದೇಶ ತಂಡದೆದುರಿನ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಇನಿಂಗ್ಸ್‌ ಹಾಗೂ 130 ರನ್‌ ಅಂತರದ ಜಯಸಾಧಿಸಿತು. ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ನೀಡಿದ ವಿರಾಟ್‌ ಕೊಹ್ಲಿ ಪಡೆ, ಪಂದ್ಯವನ್ನು ಕೇವಲ ಮೂರೇ ದಿನದಲ್ಲಿ ಗೆದ್ದುಕೊಂಡಿತು.

ಇಲ್ಲಿನ ಹೋಳ್ಕರ್‌ ಅಂಗಳದಲ್ಲಿ ಗುರುವಾರ ಆರಂಭವಾದ ಪಂದ್ಯದಲ್ಲಿ ಟಾಸ್‌ ಗೆದ್ದ ಪ್ರವಾಸಿ ತಂಡ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತ್ತು. ಆದರೆ, ಸಂಘಟಿತ ಬೌಲಿಂಗ್‌ ಪ್ರದರ್ಶನ ನೀಡಿದ ಭಾರತ ಬೌಲರ್‌ಗಳು, ಮೊಮಿನುಲ್ ಹಕ್ ಬಳಗವನ್ನು ಕೇವಲ 150 ರನ್‌ಗಳಿಗೆ ಆಲೌಟ್‌ ಮಾಡಿದರು.

ಪ್ರತಿಯಾಗಿ ಇನಿಂಗ್ಸ್‌ನಲ್ಲಿ ಆರಂಭಿಸಿದ ವಿರಾಟ್‌ ಕೊಹ್ಲಿ ಪಡೆ ಕನ್ನಡಿಗ ಮಯಂಕ್‌ ಅಗರವಾಲ್‌(243) ದ್ವಿಶತಕ, ಉಪನಾಯಕ ಅಜಿಂಕ್ಯ ರಹಾನೆ(86), ಆಲ್ರೌಂಡರ್‌ ರವೀಂದ್ರ ಜಡೇಜಾ(ಅಜೇಯ 60) ಹಾಗೂ ಟೆಸ್ಟ್‌ ಪರಿಣತ ಚೇತೇಶ್ವರ ಪೂಜಾರ(54) ಅವರ ಅರ್ಧ ಶತಕಗಳ ಬಲದಿಂದ ಎರಡನೇ ದಿನದಂತ್ಯಕ್ಕೆ ಆರು ವಿಕೆಟ್‌ ಕಳೆದುಕೊಂಡು 493 ರನ್‌ ಕಲೆ ಹಾಕಿತ್ತು.

ADVERTISEMENT

343 ರನ್‌ಗಳ ಮುನ್ನಡೆ ಮುನ್ನಡೆ ಹೊಂದಿದ್ದ ಕಾರಣ ಇನಿಂಗ್ಸ್‌ ಡಿಕ್ಲೇರ್‌ ಘೋಷಿಸಿದನಾಯಕ ವಿರಾಟ್‌ ಮೂರನೇ ದಿನ ಎದುರಾಳಿಯನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು.

ಎರಡನೇ ಇನಿಂಗ್ಸ್‌ನಲ್ಲಿಯೂ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾದ ಬಾಂಗ್ಲಾ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ ಪೆರೇಡ್‌ ಮುಂದುವರಿಸಿದರು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಶಾದಮನ್‌ ಇಸ್ಲಾಂ ಹಾಗೂ ಇಮ್ರುಲ್‌ ಕಯೆಸ್‌ ತಲಾ 6 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರೆ, 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕಮೊಮಿನುಲ್‌ ಹಕ್‌ ಕೇವಲ 7 ರನ್‌ ಗಳಿಸಿ ಔಟಾದರು. ಬಳಿಕ ಬಂದ ಮೊಹಮದ್‌ ಮಿಥುನ್‌(18) ಹಾಗೂ ಅನುಭವಿ ಮೊಹಮದುಲ್ಲಾ(15) ಅವರೂ ಹೆಚ್ಚುಹೊತ್ತು ನಿಲ್ಲಲಿಲ್ಲ.

ಕೇವಲ 72 ರನ್‌ಗಳಿಗೆ ಪ್ರಮುಖ ಐದು ವಿಕೆಟ್‌ ಕಳೆದುಕೊಂಡಿದ್ದ ತಂಡಕ್ಕೆ ಅನುಭವಿ ಮುಫಿಕರ್‌ ರಹೀಂ ಹಾಗೂ ವಿಕೆಟ್‌ ಕೀಪರ್‌ ಲಿಟನ್‌ ದಾಸ್‌(35) ತುಸು ಚೇತರಿಕೆ ನೀಡಿದರು. ಲಿಟನ್‌ ವಿಕೆಟ್‌ ಪತನದ ಬಳಿಕರಹೀಂ ಜೊತೆಯಾದ ಮೆಹದಿ ಹಸನ್‌ 38 ರನ್‌ ಗಳಿಸಿದರು. ಆರು ಮತ್ತು ಏಳನೇ ವಿಕೆಟ್‌ ಜೊತೆಯಾಟದಲ್ಲಿ ದಾಸ್‌ ಮತ್ತು ಹಸನ್‌ ಜೊತೆ ಕ್ರಮವಾಗಿ 63 ಮತ್ತು 59 ರನ್‌ ಕಲೆಹಾಕಿದ ರಹೀಂ ತಮ್ಮ ತಂಡದ ಸೋಲನ್ನು ಕೆಲಕಾಲ ಮುಂದೂಡಿತು.

150 ಎಸೆತಗಳನ್ನು ಎದುರಿಸಿದ ರಹೀಂ 7 ಬೌಂಡರಿ ಸಹಿತ 64 ರನ್‌ ಕಲೆ ಹಾಕಿ ಅಶ್ವಿನ್‌ಗೆ ವಿಕೆಟ್‌ ಒಪ್ಪಿಸಿದರು.ಅಂತಿಮವಾಗಿ ಬಾಂಗ್ಲಾ ತಂಡ 213 ರನ್‌ಗಳಿಗೆ ಎಲ್ಲ ವಿಕೆಟ್‌ ಕಳೆದುಕೊಂಡು ಸೋಲೊಪ್ಪಿಕೊಂಡಿತು.

ಭಾರತ ಪರ ಮೊದಲ ಇನಿಂಗ್ಸ್‌ನಲ್ಲಿ 3 ವಿಕೆಟ್‌ ಉರುಳಿಸಿದ್ದ ಮೊಹಮದ್‌ ಶಮಿ ಈ ಬಾರಿ 4 ವಿಕೆಟ್‌ ಪಡೆದರು. ಉಳಿದಂತೆ, ರವಿಚಂದ್ರನ್‌ ಅಶ್ವಿನ್‌ 3, ಉಮೇಶ್‌ ಯಾದವ್‌ 2, ಇಶಾಂತ್‌ ಶರ್ಮಾ 1 ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರು
ಬಾಂಗ್ಲಾದೇಶ ಮೊದಲ ಇನಿಂಗ್ಸ್‌ 58.3 ಓವರ್‌ಗಳಲ್ಲಿ 150

ಮುಫಿಕರ್‌ ರಹೀಂ 43 ರನ್‌
ಮೊಮಿನುಲ್‌ ಹಕ್‌ 37 ರನ್‌
ಮೊಹಮದ್‌ ಶಮಿ 3 ವಿಕೆಟ್‌

ಭಾರತ ಮೊದಲ ಇನಿಂಗ್ಸ್‌ 114 ಓವರ್‌ಗಳಲ್ಲಿ 493
ಮಯಂಕ್‌ ಅಗರವಾಲ್‌ 243 ರನ್‌
ಅಜಿಂಕ್ಯ ರಹಾನೆ 86 ರನ್‌
ಆಲ್ರೌಂಡರ್‌ ರವೀಂದ್ರ ಜಡೇಜಾ ಅಜೇಯ 60 ರನ್‌
ಚೇತೇಶ್ವರ ಪೂಜಾರ 54 ರನ್‌
ಅಬು ಜಯೆದ್‌ 4 ವಿಕೆಟ್‌

ಬಾಂಗ್ಲಾದೇಶ ಮೊದಲ ಇನಿಂಗ್ಸ್‌ 69.2 ಓವರ್‌ಗಳಲ್ಲಿ 213
ಮುಫಿಕರ್‌ ರಹೀಂ 64 ರನ್‌
ಮೆಹದಿ ಹಸನ್‌ 38 ರನ್‌
ಮೊಹಮದ್‌ ಶಮಿ 4ವಿಕೆಟ್‌
ರವಿಚಂದ್ರನ್‌ ಅಶ್ವಿನ್‌ 3 ವಿಕೆಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.