ಸ್ಮೃತಿ ಮಂದಾನ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್
ಪಿಟಿಐ ಚಿತ್ರ
ವಡೋದರ: ಭಾರತ ತಂಡ, ಭಾನುವಾರ ಇಲ್ಲಿ ಆರಂಭವಾಗಲಿರುವ ಮೂರು ಪಂದ್ಯಗಳ ಮಹಿಳಾ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ. ಇತ್ತೀಚಿನ ವರ್ಷಗಳ ಉತ್ತಮ ಫಾರ್ಮ್ ಆಧಾರವಾಗಿಟ್ಟುಕೊಂಡು ಕಣಕ್ಕಿಳಿಯಲು ಆತಿಥೇಯ ತಂಡ ಉತ್ಸುಕವಾಗಿದೆ.
ಹೊಸದಾಗಿ ನಿರ್ಮಾಣಗೊಂಡಿರುವ ಕೋತಂಬಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಅಂತರರಾಷ್ಟ್ರೀಯ ಪಂದ್ಯ ಇದು.
ಭಾರತ ತಂಡ ಐದು ವರ್ಷಗಳಲ್ಲಿ ಇದೇ ಮೊದಲ ಬಾರಿ ಟಿ20 ಸರಣಿಯಲ್ಲಿ 2–1 ರಿಂದ ಕೆರೀಬಿಯನ್ನರ ಮೇಲೆ ಈ ವಾರದ ಆದಿಯಲ್ಲಿ ಜಯಗಳಿಸಿತ್ತು.
2017ರಿಂದೀಚೆಗೆ ವೆಸ್ಟ್ ಇಂಡೀಸ್ ವಿರುದ್ಧ ಆಡಿರುವ ಏಕದಿನ ಪಂದ್ಯಗಳ ಮುಖಾಮುಖಿಯಲ್ಲಿ ಭಾರತ 4:1 ಗೆಲುವಿನ ದಾಖಲೆ ಹೊಂದಿದೆ.
ಭಾರತ ತಂಡಕ್ಕೆ ಇರುವ ಒಂದೇ ಚಿಂತೆಯ ವಿಷಯ ಎಂದರೆ ಪೂರ್ಣಾವಧಿ ನಾಯಕಿ ಹರ್ಮನ್‌ಪ್ರೀತ್ ಅವರ ಫಿಟ್ನೆಸ್. ಅವರು ಮೊಣಕಾಲು ನೋವಿನಿಂದ ವೆಸ್ಟ್ ಇಂಡೀಸ್ ವಿರುದ್ಧ ಕೊನೆಯ ಟಿ20 ಪಂದ್ಯ ಆಡಿರಲಿಲ್ಲ. ಅವರ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ ಸ್ಮೃತಿ ಮಂದಾನ ಅರ್ಧ ಶತಕ ಬಾರಿಸಿ ಗೆಲುವಿಗೆ ನೆರವಾಗಿದ್ದರು. ಅದು ಅವರ ಸತತ ಮೂರನೇ ಅರ್ಧಶತಕ ಆಗಿತ್ತು.
ಎಡಗೈ ಆಟಗಾರ್ತಿ ಈಗ ಅದೇ ಲಯವನ್ನು ಏಕದಿನ ಸರಣಿಗೂ ಮುಂದುವರಿಸುವ ತವಕದಲ್ಲಿದ್ದಾರೆ. ಕೊನೆಯ ಹತ್ತು ಏಕದಿನ ಪಂದ್ಯಗಳಲ್ಲಿ ಸ್ಮೃತಿ 60ರ ಸರಾಸರಿಯಲ್ಲಿ 599 ರನ್ ಗಳಿಸಿದ್ದಾರೆ. ಸ್ಟ್ರೈಕ್ ರೇಟ್ 98.
ಮಧ್ಯಮ ಕ್ರಮಾಂಕ ಬಲವಾಗಿದೆ. ಸ್ಮೃತಿ ಜೊತೆಗೆ ಜೆಮಿಮಾ ರಾಡ್ರಿಗಸ್ ಅವರೂ ಎಂದಿನ ಆಟಕ್ಕೆ ಕುದುರಿಕೊಳ್ಳುವ ಲಕ್ಷಣ ತೋರಿಸಿದ್ದಾರೆ. ತೇಜಲ್ ಹಸಬ್ನಿಸ್ ಮತ್ತು ಹರ್ಲೀನ್ ಡಿಯೋಲ್ ಕೂಡ ಉಪಯುಕ್ತ ಆಟವಾಡುವ ಸಾಮರ್ಥ್ಯ ಉಳ್ಳವರು.
ದೀಪ್ತಿ ಶರ್ಮಾ, ರೇಣುಕಾ ಸಿಂಗ್ ಮತ್ತು ಸೈಮಾ ಠಾಕೂರ್ ಜೊತೆ ಯುವ ಉತ್ಸಾಹಿ ತಿತಾಸ್ ಸಾಧು ಬೌಲಿಂಗ್ ಹೊಣೆ ವಹಿಸಲಿದ್ದಾರೆ.
ವೆಸ್ಟ್ ಇಂಡೀಸ್ ತಂಡವು ಅನುಭವಿಗಳಾದ ನಾಯಕಿ ಹೇಯ್ಲಿ ಮ್ಯಾಥ್ಯೂಸ್, ಡಿಯಾಂಡ್ರಾ ಡೊಟಿನ್ ಮತ್ತು ಶೆರ್ಮೆನ್ ಕ್ಯಾಂಪ್‌ಬೆಲ್ ಅವರ ಮೇಲೆ ಹೆಚ್ಚಿನ ಭರವಸೆಯಿಟ್ಟಿದೆ. ಹೇಯ್ಲಿ ಕಳೆದ ಏಳು ಪಂದ್ಯಗಳಲ್ಲಿ 45ರ ಸರಾಸರಿಯಲ್ಲಿ 308 ರನ್ ಪೇರಿಸಿದ್ದಾರೆ. ಆದರೆ ಬೌಲಿಂಗ್ ವಿಭಾಗ ಇಷ್ಟು ಬಲವಾಗಿಲ್ಲ.
ಪಂದ್ಯ ಆರಂಭ: ಮಧ್ಯಾಹ್ನ 1.30
ನೇರ ಪ್ರಸಾರ: ಸ್ಪೋರ್ಟ್ಸ್ 18 ಮತ್ತು ಜಿಯೊ ಸಿನಿಮಾ ಆ್ಯಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.