ADVERTISEMENT

ವಿಶ್ವಕಪ್ ಫೈನಲ್ ಫಿಕ್ಸಿಂಗ್: ಕುಮಾರ ಸಂಗಕ್ಕಾರ ವಿಚಾರಣೆ

ಪಿಟಿಐ
Published 2 ಜುಲೈ 2020, 20:15 IST
Last Updated 2 ಜುಲೈ 2020, 20:15 IST
ವಿಶೇಷ ತನಿಖಾ ದಳದ ಮುಂದೆ ಹಾಜರಾಗಲು ತೆರಳುತ್ತಿರುವ ಕುಮಾರ ಸಂಗಕ್ಕಾರ  –ಎಎಫ್‌ಪಿ ಚಿತ್ರ
ವಿಶೇಷ ತನಿಖಾ ದಳದ ಮುಂದೆ ಹಾಜರಾಗಲು ತೆರಳುತ್ತಿರುವ ಕುಮಾರ ಸಂಗಕ್ಕಾರ  –ಎಎಫ್‌ಪಿ ಚಿತ್ರ   

ಕೊಲಂಬೊ: ಮುಂಬೈನಲ್ಲಿ 2011ರಲ್ಲಿ ನಡೆದಿದ್ದ ವಿಶ್ವಕಪ್ ಕ್ರಿಕೆಟ್ ಫೈನಲ್‌ನಲ್ಲಿ ಫಿಕ್ಸಿಂಗ್ ನಡೆದಿತ್ತು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಆಗ ಶ್ರೀಲಂಕಾ ತಂಡದ ನಾಯಕರಾಗಿದ್ದ ಕುಮಾರ ಸಂಗಕ್ಕಾರ ಅವರನ್ನು ಗುರುವಾರ ವಿಚಾರಣೆಗೊಳಪಡಿಸಲಾಯಿತು.

ವಿಶೇಷ ತನಿಖಾ ಘಟಕದಲ್ಲಿ ಸುಮಾರು ಹತ್ತು ಗಂಟೆ ಕಳೆದ ಸಂಗಕ್ಕಾರ ಅವರ ಹೇಳಿಕೆಯನ್ನು ದಾಖಲಿಸಲಾಯಿತು.

2011ರಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಣ ಫೈನಲ್ ನಡೆದಿತ್ತು. ಅದರಲ್ಲಿ ಭಾರತ ತಂಡವು ಗೆದ್ದಿತ್ತು.

ADVERTISEMENT

’ಆ ಪಂದ್ಯವನ್ನು ಎರಡು ಪಕ್ಷಗಳು ಸೇರಿ ಮಾರಾಟ ಮಾಡಿವೆ. ಸಮಗ್ರ ತನಿಖೆಯಾಗಬೇಕು‘ ಎಂದು ಲಂಕಾದ ಮಾಜಿ ಕ್ರೀಡಾ ಸಚಿವ ಮಹಿದಾನಂದ ಅಳತುಗಮಗೆ ಈಚೆಗೆ ಆಗ್ರಹಿಸಿದ್ದರು.

’ದೇಶದ ಕ್ರೀಡಾ ಸಚಿವಾಲಯದ ವಿಶೇಷ ಪೊಲೀಸ್ ತನಿಖಾ ವಿಭಾಗಕ್ಕೆ ಸಂಗಕ್ಕಾರ ಬಂದಿದ್ದರು. ಅವರು ಸುಮಾರು ಹತ್ತು ಗಂಟೆ ಕಾಲ ವಿಚಾರಣೆಗೊಳಪಟ್ಟು ಹೇಳಿಕೆ ನೀಡಿದ್ದಾರೆ‘ ಎಂದು ನ್ಯೂಸ್‌ವೈರ್ ಡಾಟ್ ಎಲ್‌ಕೆ ವೆಬ್‌ಸೈಟ್ ವರದಿ ಮಾಡಿದೆ.

ಸಂಗಕ್ಕಾರ ಅವರು ತಮ್ಮ ಹೇಳಿಕೆಯನ್ನು ನೀಡಲು ಮುಂದಿನ ವಾರ ಬರಬೇಕಿತ್ತು. ಆದರೆ ತನಿಖಾ ದಳವು ಮನವಿ ಮಾಡಿದ್ದರಿಂದ ಗುರುವಾರ ಹಾಜರಾದರು ಎಂದು ಹೇಳಲಾಗುತ್ತಿದೆ.

2011ರಲ್ಲಿ ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥರಾಗಿದ್ದ ಅರವಿಂದ ಡಿಸಿಲ್ವಾ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ಉಪುಲ್ ತರಂಗಾ ಅವರ ಹೇಳಿಕೆಗಳನ್ನೂ ತನಿಖಾ ದಳವು ಬುಧವಾರ ಪಡೆದಿತ್ತು.

ಆದರೆ ವಿಚಾರಣೆಗೊಳಗಾದ ಯಾವುದೇ ಆಟಗಾರ ಇದುವರೆಗೆ ಬಹಿರಂಗವಾಗಿ ಯಾವುದೇ ಹೇಳಿಕೆಯನ್ನು ನೀಡಿಲ್ಲ.

ಫೈನಲ್ ನಡೆದ ಸಂದರ್ಭದಲ್ಲಿ ಮಹಿದಾನಂದ ಅವರು ಲಂಕಾದ ಕ್ರೀಡಾ ಸಚಿವರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.