ADVERTISEMENT

IND VS AUS 3rd T20: ಬ್ಯಾಟರ್‌ಗಳಿಗೆ ಲಯಕ್ಕೆ ಮರಳಲು ಅವಕಾಶ

* ಹ್ಯಾಜಲ್‌ವುಡ್‌ ಅನುಪಸ್ಥಿತಿ

ಪಿಟಿಐ
Published 1 ನವೆಂಬರ್ 2025, 13:17 IST
Last Updated 1 ನವೆಂಬರ್ 2025, 13:17 IST
<div class="paragraphs"><p>ಅರ್ಷದೀಪ್‌</p></div>

ಅರ್ಷದೀಪ್‌

   

ಹೋಬಾರ್ಟ್‌: ಆಸ್ಟ್ರೇಲಿಯಾದ ವೇಗದ ಬೌಲರ್‌ ಜೋಶ್‌ ಹ್ಯಾಜಲ್‌ವುಡ್‌ ಟಿ20 ಸರಣಿಯ ಉಳಿದ ಪಂದ್ಯಗಳಲ್ಲಿ ಆಡದಿರುವ ಕಾರಣ ಭಾರತ ಬ್ಯಾಟರ್‌ಗಳು ಇನ್ನು ಸ್ವಲ್ಪ ನಿರಾಳರಾಗಬಹುದು. ಈ ಸರಣಿಯ ಮೂರನೇ ಪಂದ್ಯ ಭಾನುವಾರ ಇಲ್ಲಿ ನಡೆಯಲಿದ್ದು, ಎಡಗೈ ವೇಗಿ ಅರ್ಷದೀಪ್ ಅವರನ್ನು ಕೈಬಿಡುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.

ಸರಿಯಾದ ಲೆಂಗ್ತ್‌ನೊಂದಿಗೆ ಕರಾರುವಾಕ್‌ ಆಗಿ ಬೌಲ್‌ ಮಾಡಿದ್ದ ಹ್ಯಾಜಲ್‌ವುಡ್‌ ಭಾರತದ ಬ್ಯಾಟರ್‌ಗಳಿಗೆ ದುಃಸ್ವಪ್ನವಾಗಿದ್ದರು. ಆ್ಯಷಸ್‌ ಟೆಸ್ಟ್ ಸರಣಿ ಸಮೀಪಿಸುತ್ತಿರುವ ಕಾರಣ ಹ್ಯಾಜಲ್‌ವುಡ್‌ ಅವರಿಗೆ ವಿಶ್ರಾಂತಿ ನೀಡಲು ಕ್ರಿಕೆಟ್‌ ಆಸ್ಟ್ರೇಲಿಯಾ ನಿರ್ಧರಿಸಿದ್ದು ಮೊದಲೆರಡು ಪಂದ್ಯಗಳಲ್ಲಿ ಮಾತ್ರ ಅವಕಾಶ ನೀಡಿತ್ತು.

ADVERTISEMENT

‘ನಿಜವಾಗಿಯೂ ನಿರಾಳವೇ. ನಾನೆಂದೂ ಇಂಥ ಬೌಲಿಂಗ್ ಎದುರಿಸಿರಲಿಲ್ಲ’ ಎಂದು ಭಾರತದ ಸ್ಟಾರ್ ಓಪನರ್ ಅಭಿಷೇಕ್ ಶರ್ಮಾ ಅವರು ಮೆಲ್ಬರ್ನ್‌ನ ಪಂದ್ಯದ ನಂತರ ಹೇಳಿದ್ದರು. ಪಂದ್ಯದಲ್ಲಿ  ಆಸ್ಟ್ರೇಲಿಯಾದ ವೇಗಿಗಳನ್ನು ನಿಭಾಯಿಸುವ ವೇಳೆ ಭಾರತದ ಬ್ಯಾಟರ್‌ಗಳ ತಾಂತ್ರಿಕ ದೌರ್ಬಲ್ಯವೂ  ಬಯಲಾಗಿತ್ತು. 

ಕ್ಸೇವಿಯರ್‌ ಬಾರ್ಟ್ಲೆಟ್‌, ನಥಾನ್ ಎಲ್ಲಿಸ್ ಮತ್ತು ಸೀನ್‌ ಅಬೋಟ್‌ ಅವರನ್ನು ಎದುರಿಸುವಾಗ ತಂಡದ ಮೇಲೆ ಮೊದಲಿದ್ದ ಒತ್ತಡ ಕಡಿಮೆಯಾಗಲಿದೆ. ಕೆನ್‌ಬೆರಾದ ಮೊದಲ ಪಂದ್ಯದಲ್ಲಿ ಭರವಸೆ ಮೂಡಿಸಿದರೂ, ಎರಡನೇ ಪಂದ್ಯದಲ್ಲಿ ಎಕ್ಸ್‌ಟ್ರಾ ಬೌನ್ಸ್‌ ನಿಭಾಯಿಸುವಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಉಪನಾಯಕ ಶುಭಮನ್ ಗಿಲ್ ತೊಂದರೆಗಳನ್ನು ಎದುರಿಸಿದ್ದರು. 

ಬೆಲೆರಿವ್‌ ಓವಲ್‌ನ ಪಿಚ್‌ನ ಎರಡೂ ಬದಿಯ ಬೌಂಡರಿಗಳು ಸಣ್ಣವು. ಇದೇ ಮೈದಾನದಲ್ಲಿ ಭಾರತದ ದಿಗ್ಗಜ ವಿರಾಟ್‌ ಕೊಹ್ಲಿ ಅವರು 2012ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 321 ರನ್‌ಗಳ ಚೇಸಿಂಗ್ ವೇಳೆ ಅಧಿಕಾರಯುತವಾಗಿ ಆಡಿ 86 ಎಸೆತಗಳಲ್ಲಿ ಅಜೇಯ 133 ರನ್‌ ಗಳಿಸಿದ್ದು ಗಮನಸೆಳೆದಿತ್ತು.

ವೇಗಿ ಎಲ್ಲಿಸ್‌ ಅವರಿಗೆ ಇದು ಬಿಗ್‌ಬ್ಯಾಷ್‌ ಲೀಗ್‌ನಲ್ಲಿ ತವರು ಮೈದಾನ.

ಅರ್ಷದೀಪ್‌ಗೆ ಸಿಗುವುದೇ ಅವಕಾಶ?: ಇತ್ತೀಚಿನ ದಿನಗಳಲ್ಲಿ ತಂಡವು ಕೆಳಕ್ರಮಾಂಕದವರೆಗೆ ಬ್ಯಾಟಿಂಗ್ ಆಳಕ್ಕೆ ಆದ್ಯತೆ ನೀಡುತ್ತ ಬಂದಿದೆ. ಆದರೆ ಇದರಿಂದ ಎಂಸಿಜಿಯಲ್ಲಿ ಹೆಚ್ಚಿನ ಪ್ರಯೋಜವಾಗಿರಲಿಲ್ಲ. ವೇಗಕ್ಕೆ ನೆರವಾಗುತ್ತಿದ್ದ ಆ ಪಿಚ್‌ನಲ್ಲಿ ತಂಡವು ಮೂವರು ಪರಿಣತ ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಸಿದ್ದು, ಹುಬ್ಬೇರಲು ಕಾರಣವಾಗಿತ್ತು.

ಟಿ20 ಕ್ರಿಕೆಟ್‌ನಲ್ಲಿ 100 ವಿಕೆಟ್‌ ಪಡೆದಿರುವ ಭಾರತದ ಏಕೈಕ ವೇಗಿಯಾಗಿದ್ದರೂ ಅರ್ಷದೀಪ್ ಮೊದಲೆರಡೂ ಪಂದ್ಯಗಳಲ್ಲಿ ಆಡುವ 11ರಲ್ಲಿ ಸ್ಥಾನ ಪಡೆದಿರಲಿಲ್ಲ. ‘ಜಸ್‌ಪ್ರೀತ್ ಬೂಮ್ರಾ ಆಡಿದಲ್ಲಿ, ಅರ್ಷದೀಪ್ ಸಿಂಗ್ ಅವರ ಹೆಸರು ಪಟ್ಟಿಯಲ್ಲಿ ಎರಡನೇ ವೇಗಿಯ ಸ್ಥಾನದಲ್ಲಿರಬೇಕು. ಬೂಮ್ರಾ ಆಡದಿದ್ದಲ್ಲಿ ಅವರು ಮೊದಲ ಸ್ಥಾನದಲ್ಲಿರಬೇಕು’ ಎಂದು ರವಿಚಂದ್ರನ್ ಅಶ್ವಿನ್ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದರು.

ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, ಕಳೆದ 15 ರಿಂದ 20 ಪಂದ್ಯಗಳಲ್ಲಿ ಭಾರತದ ಎಂಟನೇ ಕ್ರಮಾಂಕದ ಆಟಗಾರ ಸರಾಸರಿ ಐದು ಎಸೆತಗಳನ್ನೂ ಎದುರಿಸಿಲ್ಲ. ಹೀಗಾಗಿ ಬ್ಯಾಟಿಂಗ್‌ ಆಳಕ್ಕೆ ಒತ್ತು ನೀಡುವ ತಂತ್ರ ಸರಿಯೇ ಎಂಬ ಪ್ರಶ್ನೆ ಎದುರಾಗಿದೆ. ಹರ್ಷಿತ್‌ ರಾಣಾ ಆಲ್‌ರೌಂಡರ್‌ ಆಗಿ ಆಡುವ ಕಾರಣ ಪರಿಣತ ವೇಗಿಗೆ ಸ್ಥಾನ ಸಿಗುತ್ತಿಲ್ಲ.

ಪಂದ್ಯ ಆರಂಭ: ಮಧ್ಯಾಹ್ನ 1.45

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.