ADVERTISEMENT

ಕ್ರೀಡೆಗೆ ರಾಜಕೀಯ ಬೆರೆಸಬೇಡಿ: ಭಾರತ-ಪಾಕ್ ಏಷ್ಯಾ ಕಪ್ ಬಗ್ಗೆ ಎಬಿಡಿ ಪ್ರತಿಕ್ರಿಯೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಅಕ್ಟೋಬರ್ 2025, 6:10 IST
Last Updated 2 ಅಕ್ಟೋಬರ್ 2025, 6:10 IST
<div class="paragraphs"><p>ಎಬಿ ಡಿವಿಲಿಯರ್ಸ್</p></div>

ಎಬಿ ಡಿವಿಲಿಯರ್ಸ್

   

ಕೇಪ್‌ಟೌನ್‌: 2025ರ ಏಷ್ಯಾ ಕಪ್‌ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ನಾಟಕೀಯ ಬೆಳವಣಿಗೆಗಳ ಬಗ್ಗೆ ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಪಾಕ್‌ ಸಚಿವರಿಂದ ಟ್ರೋಫಿ ಸ್ವೀಕರಿಸದಿರುವ ಭಾರತದ ಆಟಗಾರರ ನಿಲುವನ್ನು ಎಬಿಡಿ ಖಂಡಿಸಿದ್ದಾರೆ.

ಈ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಅವರು, ಕ್ರೀಡೆ ಮತ್ತು ರಾಜಕೀಯ ನಡುವೆ ಅಂತರ ಕಾಯ್ದುಕೊಳ್ಳುವುದು ಉತ್ತಮ ಎಂದು ಹೇಳಿದ್ದಾರೆ.

ADVERTISEMENT

‘ಟ್ರೋಫಿಯನ್ನು ಯಾರು ಹಸ್ತಾಂತರಿಸುತ್ತಿದ್ದಾರೆ ಎಂಬುದರ ಬಗ್ಗೆ ಟೀಮ್ ಇಂಡಿಯಾಗೆ ಸಮಾಧಾನವಿರಲಿಲ್ಲ. ಇದು ಕ್ರೀಡೆಗೆ ಸಂಬಂಧಪಟ್ಟಿರುವುದು ಎಂದು ನಾನು ಭಾವಿಸುವುದಿಲ್ಲ. ರಾಜಕೀಯ ಕ್ರೀಡೆಯಿಂದ ದೂರವಿರಬೇಕು. ಕ್ರೀಡೆಯನ್ನು ಕ್ರೀಡೆಯಾಗಿ ನೋಡಿ ಸಂಭ್ರಮಿಸಬೇಕು. ಮೊನ್ನೆ ನಡೆದದನ್ನು ಕಂಡು ಬೇಸರವಾಯಿತು. ಆದರೆ, ಭವಿಷ್ಯದಲ್ಲಿ ಇದು ಪುನರಾವರ್ತಿಸುವುದಿಲ್ಲ ಎಂದು ಆಶಿಸುತ್ತೇನೆ. ಇದು ಕ್ರೀಡೆ, ಆಟಗಾರರು ಮತ್ತು ಕ್ರಿಕೆಟಿಗರನ್ನು ತುಂಬಾ ಕಠಿಣ ಸ್ಥಾನದಲ್ಲಿ ಇರಿಸುತ್ತದೆ. ಇದನ್ನೇ ನಾನು ದ್ವೇಷಿಸುತ್ತೇನೆ. ಆ ಕ್ಷಣ ನೋಡಲು ತುಂಬಾ ವಿಚಿತ್ರವಾಗಿತ್ತು’ ಎಂದು ಹೇಳಿದ್ದಾರೆ.

ಏಷ್ಯಾ ಕಪ್‌ ಪಂದ್ಯದ ಟಾಸ್‌ನಿಂದ ಪ್ರಶಸ್ತಿ ಸ್ವೀಕಾರ ಸಮಾರಂಭದವರೆಗೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಹಲವು ವಿವಾದಗಳಿಗೆ ಕಾರಣವಾದವು. ಆಪರೇಷನ್‌ ಸಿಂಧೂರ ನಂತರ ಉಭಯ ದೇಶಗಳ ನಡುವಿನ ಬಿಕ್ಕಟ್ಟು ಉಲ್ಭಣವಾಗಿತ್ತು. ಕ್ರಿಕೆಟ್‌ ಅಂಗಳದಲ್ಲೂ ಇದು ಕಾಣಿಸಿಕೊಂಡಿತ್ತು.

ಲೀಗ್‌ ಪಂದ್ಯದ ವೇಳೆ ಭಾರತದ ಆಟಗಾರರು ಪಾಕ್‌ ಆಟಗಾರರ ನಡುವೆ ಹಸ್ತಲಾಘವ ಮಾಡಲು ನಿರಾಕರಿಸಿದ್ದರು. ಸೂಪರ್‌ –4 ಪಂದ್ಯದಲ್ಲಿ ಪಾಕ್‌ ಆಟಗಾರರು ಮಾಡಿದ ಅನುಚಿತ ವರ್ತನೆಯು ಭಾರತೀಯರನ್ನು ಕೆರಳಿಸಿತ್ತು.

ಫೈನಲ್‌ನಲ್ಲಿ ಗೆದ್ದರೂ ಪಾಕ್‌ ಸಚಿವ, ಎಸಿಸಿ ಅಧ್ಯಕ್ಷ ಮೊಹಸೀನ್‌ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಭಾರತ ತಂಡ ನಿರಾಕರಿಸಿತ್ತು. ತಮ್ಮ ಜತೆಯಲ್ಲಿ ಟ್ರೋಫಿಯನ್ನು ಕೊಂಡೊಯ್ಯುವ ಮೂಲಕ ನಖ್ವಿ ವಿವಾದಗಳಿಗೆ ಮತ್ತಷ್ಟು ತುಪ್ಪ ಸುರಿದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.