
ದುಬೆ: ಅಭಿಗ್ಯಾನ್ ಕುಂದು (ಔಟಾಗದೇ 209) ಅವರ ದ್ವಿಶತಕ ಮತ್ತು ದೀಪೇಶ್ ದೇವೇಂದ್ರನ್ (22ಕ್ಕೆ5) ಅಮೋಘ ಬೌಲಿಂಗ್ ಬಲದಿಂದ ಭಾರತ 19 ವರ್ಷದೊಳಗಿನವರ ತಂಡವು ಇಲ್ಲಿ ನಡೆಯುತ್ತಿರುವ ಯೂತ್ ಏಷ್ಯಾ ಕಪ್ ಏಕದಿನ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಜಯಿಸಿತು.
ಮಂಗಳವಾರ ಮಲೇಷ್ಯಾ 19 ವರ್ಷದೊಳಗಿನವರ ತಂಡದ ಎದುರು ಭಾರತ ತಂಡವು 315 ರನ್‌ಗಳ ಬೃಹತ್ ಜಯ ಸಾಧಿಸಿತು. ಯೂತ್ ಏಕದಿನ ಕ್ರಿಕೆಟ್‌ನಲ್ಲಿ ಭಾರತವು ದಾಖಲಿಸಿದ ಎರಡನೇ ಅತಿ ದೊಡ್ಡ ಅಂತರದ ಜಯಸಾಧಿಸಿತು. 2022ರಲ್ಲಿ ಉಗಾಂಡ ಎದುರು 326 ರನ್‌ಗಳ ಜಯ ಸಾಧಿಸಿತ್ತು.
ಭಾರತ ತಂಡದ ಅಭಿಗ್ಯಾನ್ ಕುಂದು ಅವರು ಯೂತ್ ಏಕದಿನ ಮಾದರಿಯಲ್ಲಿ ದ್ವಿಶತಕ ಹೊಡೆದ ಮೊದಲ ಭಾರತೀಯ ಆಟಗಾರನಾದರು. ಅವರು 125 ಎಸೆತಗಳಲ್ಲಿ 17 ಬೌಂಡರಿ ಮತ್ತು 9 ಸಿಕ್ಸರ್‌ಗಳೊಂದಿಗೆ ದ್ವಿಶತಕ ದಾಖಲಿಸಿದರು. ಅವರ ಬ್ಯಾಟಿಂಗ್ ಬಲದಿಂದ ತಂಡವು ನಿಗದಿಯ ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 408 ರನ್ ಗಳಿಸಿತು.
ಬಲಗೈ ಮಧ್ಯಮವೇಗಿ ದೀಪೇಶ್ ಅವರ ದಾಳಿಯ ಮುಂದೆ ಮಲೇಷ್ಯಾ ತಂಡವು 32.1 ಓವರ್‌ಗಳಲ್ಲಿ 93 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು.
ಸಂಕ್ಷಿಪ್ತ ಸ್ಕೋರು: ಭಾರತ 19 ವರ್ಷದೊಳಗಿನವರು: 50 ಓವರ್‌ಗಳಲ್ಲಿ 7ಕ್ಕೆ408 (ವೈಭವ್ ಸೂರ್ಯವಂಶಿ 50, ವೇದಾಂತ್ ತ್ರಿವೇದಿ 90, ಅಭಿಗ್ಯಾನ್ ಕುಂದು ಔಟಾಗದೇ 209, ಮೊಹಮ್ಮದ್ ಅಕ್ರಮ್ 89ಕ್ಕೆ5) ಮಲೇಷ್ಯಾ: 32.1 ಓವರ್‌ಗಳಲ್ಲಿ 93 (ಹಮ್ಜಾ ಪಾಂಗಿ 35, ದೀಪೇಶ್ ದೇವೆಂದ್ರನ್ 22ಕ್ಕೆ5, ಉದವ್ ಮೋಹನ್ 24ಕ್ಕೆ2) ಭಾರತ ತಂಡಕ್ಕೆ 315 ರನ್ ಜಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.