
ಚೆನ್ನೈ: ಆರಂಭ ಆಟಗಾರ ಇಬ್ರಾಹಿಂ ಜದ್ರಾನ್ ಕೇವಲ ಐದು ರನ್‌ಗಳ ಅಂತರದಿಂದ ಶತಕ ತಪ್ಪಿಸಿಕೊಂಡರು. ಬಳಿಕ, ಸ್ಪಿನ್ನರ್ ಮೊಹಮ್ಮದ್ ನಬಿ (7ಕ್ಕೆ4) ಕೈಚಳಕ ಮೆರೆದರು. ಇವರಿಬ್ಬರ ಅಮೋಘ ಆಟದ ಬಲದಿಂದ ಅಫ್ಗಾನಿಸ್ತಾನ ತಂಡವು 82 ರನ್‌ಗಳಿಂದ ಕೆನಡಾ ತಂಡವನ್ನು ಮಣಿಸಿತು.
ಎಂ.ಎ. ಚಿದಂಬರಂ ಕ್ರೀಡಾಂಗಣ ದಲ್ಲಿ ಗುರುವಾರ ನಡೆದ ಟಿ20 ವಿಶ್ವಕಪ್ ಡಿ ಗುಂಪಿನ ಪಂದ್ಯದಲ್ಲಿ ಇಬ್ರಾಹಿಂ (ಔಟಾಗದೇ 95, 56ಎ, 4x7, 6x5) ಅವರ ಆಟದ ಬಲದಿಂದ ಅಫ್ಗಾನಿಸ್ತಾನ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 200 ರನ್ ಗಳಿಸಿತು. ಕಠಿಣ ಗುರಿ ಬೆನ್ನಟ್ಟಿದ ಕೆನಡಾ ತಂಡವು ನಬಿ ಹಾಗೂ ನಾಯಕ ರಶೀದ್ ಖಾನ್ (19ಕ್ಕೆ2) ಬೌಲಿಂಗ್ ಎದುರು 8 ವಿಕೆಟ್‌ಗೆ 118 ರನ್ ಗಳಿಸಿ ಓವರ್ ಪೂರೈಸಿತು.
ಮಧ್ಯಮ ಕ್ರಮಾಂಕದ ಆಟಗಾರರಾದ ಹರ್ಷ್ ಥಾಕರ್ (30; 24ಎ, 4x3, 6x1) ಹಾಗೂ ಸಾದ್ ಬಿನ್ ಜಫರ್ (28; 26ಎ, 4x3, 6x1) ಹೋರಾಟ ತೋರಿದ್ದು ಬಿಟ್ಟರೆ, ಉಳಿದ ಬ್ಯಾಟರ್‌ಗಳು ಅಫ್ಗನ್ ತಂಡದ ಸ್ಪಿನ್ ಬೌಲಿಂಗ್ ದಾಳಿ ಎದುರಿಸುವಲ್ಲಿ ವಿಫಲರಾದರು.
ಇದಕ್ಕೆ ಮೊದಲು, ಟಾಸ್ ಗೆದ್ದ ಕೆನಡಾ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಜೋಡಿ ರೆಹಮಾನುಲ್ಲಾ ಗುರ್ಬಾಜ್ (30; 20ಎ) ಮತ್ತು ಇಬ್ರಾಹಿಂ ಅವರು ಉತ್ತಮ ಆರಂಭ ನೀಡಿದರು.
ಆರನೇ ಓವರ್‌ನಲ್ಲಿ ಜಸ್ಕರಣ್ ದೀಪ್ ಅವರು ರೆಹಮಾನುಲ್ಲಾ ವಿಕೆಟ್ ಗಳಿಸಿ, ಜೊತೆಯಾಟ ಮುರಿದರು. ಅದೇ ಓವರ್‌ನಲ್ಲಿ ಗುಲ್ಬದೀನ್ ನೈಬ್ ಅವರ ವಿಕೆಟ್ ಕೂಡ ತಮ್ಮದಾಗಿಸಿಕೊಂಡರು. ಆದರೆ ಇನ್ನೊಂದೆಡೆ ಇಬ್ರಾಹಿಂ ಅವರು ಬೀಸಾಟ ಮುಂದುವಿರಿಸಿದರು. ಬೌಲರ್‌ಗಳನ್ನು ಆತ್ಮವಿಶ್ವಾಸದಿಂದ ಎದುರಿಸಿದರು. ಅವರಿಗೆ ಸೆದಿಕ್‌ವುಲ್ಲಾ ಅಟಲ್ (44; 32ಎ) ಬೆಂಬಲ ನೀಡಿದರು. ಇವರಿಬ್ಬರು ಮೂರನೇ ವಿಕೆಟ್ ಜೊತೆಯಾಟದಲ್ಲಿ 95 ರನ್ ಗಳಿಸಿದರು.
ಅಟಲ್ ಅವರ ವಿಕೆಟ್ ಕೂಡ ಗಳಿಸಿದ ಜಸ್ಕರಣ್ ಜತೆಯಾಟ ಮುರಿದರು. ಆದರೆ ಇಬ್ರಾಹಿಂ ಅವರು ಮಾತ್ರ ವೇಗವಾಗಿ ರನ್ ಗಳಿಸುತ್ತ ಮೊತ್ತವನ್ನು ಹೆಚ್ಚಿಸಿದರು.
ಸಂಕ್ಷಿಪ್ತ ಸ್ಕೋರು: ಅಫ್ಗಾನಿಸ್ತಾನ: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 200 (ರೆಹಮಾನುಲ್ಲಾ ಗುರ್ಬಾಜ್ 30, ಇಬ್ರಾಹಿಂ ಜದ್ರಾನ್ ಔಟಾಗದೇ 95, ಸೆದಿಕ್‌ವುಲ್ಲಾ ಅಟಲ್ 44, ಜಸ್ಕರಣ್ ಸಿಂಗ್ 52ಕ್ಕೆ3). ಕೆನಡಾ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 118 (ಹರ್ಷ್ ಥಾಕರ್ 30, ಸಾದ್ ಬಿನ್ ಜಫರ್ 28; ಮೊಹಮ್ಮದ್ ನಬಿ 7ಕ್ಕೆ4, ರಶೀದ್ ಖಾನ್ 19ಕ್ಕೆ2).
ಪಂದ್ಯದ ಆಟಗಾರ: ಇಬ್ರಾಹಿಂ ಜದ್ರಾನ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.