ADVERTISEMENT

ಪಾಕ್‌ ದಾಳಿಯಲ್ಲಿ ಮೂರು ಕ್ರಿಕೆಟಿಗರು ಸಾವು: ತ್ರಿಕೋನ ಸರಣಿ ಹಿಂದೆ ಸರಿದ ಅಫ್ಗಾನ್

ಪಿಟಿಐ
Published 18 ಅಕ್ಟೋಬರ್ 2025, 16:26 IST
Last Updated 18 ಅಕ್ಟೋಬರ್ 2025, 16:26 IST
ಅಫ್ಗನ್‌ ಕ್ರಿಕೆಟ್‌ ಮಂಡಳಿ
ಅಫ್ಗನ್‌ ಕ್ರಿಕೆಟ್‌ ಮಂಡಳಿ   

ಲಾಹೋರ್‌: ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯಲ್ಲಿ ತಮ್ಮ ದೇಶದ ಮೂವರು ಸ್ಥಳೀಯ ಕ್ರಿಕೆಟಿಗರು ಸಾವೀಗಿಡಾದ ಬಳಿಕ ಅಫ್ಗಾನಿಸ್ತಾನ ಕ್ರಿಕೆಟ್ ಮಂಡಳಿಯು ನವೆಂಬರ್ 17ರಿಂದ ನಿಗದಿಯಾಗಿರುವ ತ್ರಿಕೋನ ಸರಣಿಯಿಂದ ಹಿಂದೆ ಸರಿದಿದೆ. ಪಾಕಿಸ್ತಾನದ ಆತಿಥ್ಯದಲ್ಲಿ ಸರಣಿ ನಡೆಯಬೇಕಿದೆ.

ಶ್ರೀಲಂಕಾ ಸೇರಿದಂತೆ ಮೂರು ರಾಷ್ಟ್ರಗಳನ್ನು ಒಳಗೊಂಡ ಟಿ20 ಸರಣಿಯು ನ.17ರಿಂದ 29ರವರೆಗೆ ಲಾಹೋರ್‌ನಲ್ಲಿ ನಿಗದಿಯಾಗಿದೆ. ಆದರೆ, ಅಫ್ಗಾನಿಸ್ತಾನ ಹಿಂದೆ ಸರಿದರೂ ಸರಣಿಯು ನಿಗದಿಯಂತೆ ನಡೆಯಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಶನಿವಾರ ತಿಳಿಸಿದೆ.

ಅಫ್ಗನ್‌ ಬದಲು ಮೂರನೇ ತಂಡವನ್ನು ಸರಣಿಗೆ ಸೇರಿಸಿಕೊಳ್ಳುವ ಕುರಿತು ಇತರೆ ಕ್ರಿಕೆಟ್ ಮಂಡಳಿಗಳ ಜೊತೆಗೆ ಮಾತುಕತೆ ನಡೆಸುತ್ತಿದೆ ಎಂದು ಪಿಸಿಬಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

‘ಸರಣಿಯು ನಿಗದಿತ ವೇಳಾಪಟ್ಟಿಯಂತೆ ನಡೆಯಲಿದೆ. ಅಫ್ಗಾನಿಸ್ತಾನಕ್ಕೆ ಬದಲಿ ತಂಡವನ್ನು ಹುಡುಕುತ್ತಿದ್ದೇವೆ. ಅಂತಿಮಗೊಂಡ ಬಳಿಕ ಘೋಷಣೆ ಮಾಡುತ್ತೇವೆ’ ಎಂದು ಅವರು ಹೇಳಿದ್ದಾರೆ. 

ಗಡಿಭಾಗದ ಪಕ್ತಿಕಾ ಪ್ರಾಂತ್ಯದಲ್ಲಿ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯಲ್ಲಿ ಅಫ್ಗಾನಿಸ್ತಾನದ ಮೂವರು ಸ್ಥಳೀಯ ಕ್ರಿಕೆಟಿಗರಾದ ಕಬೀರ್ ಆಘಾ, ಸಿಬ್ಗತ್‌ಉಲ್ಲಾ ಮತ್ತು ಹರೂನ್‌ ಸಾವಿಗೀಡಾಗಿದ್ದರು. ಆಡಿದ ನಂತರ ಅವರು ಊರಿಗೆ ಮರಳುವಾಗ ದಾಳಿಗೆ ಸಿಲುಕಿದ್ದರು. ಇದಾದ ಬಳಿಕ ಅಲ್ಲಿನ ಕ್ರಿಕೆಟ್ ಮಂಡಳಿಯು ತ್ರಿಕೋನ ಸರಣಿಗೆ ತನ್ನ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸುವುದಿಲ್ಲ ಎಂದು ಹೇಳಿದೆ. ಈ ದಾಳಿಯನ್ನು ಹೇಡಿತನದ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಐಸಿಸಿ, ಬಿಸಿಸಿಐ ಖಂಡನೆ: ಅಫ್ಗಾನಿಸ್ತಾನದ ಮೂವರು ಪ್ರತಿಭಾನ್ವಿತ ಕ್ರಿಕೆಟಿಗರ ಸಾವಿಗೆ ಕಾರಣವಾದ ವೈಮಾನಿಕ ದಾಳಿಯನ್ನು  ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಮತ್ತು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ತೀವ್ರವಾಗಿ ಖಂಡಿಸಿದೆ.  ಈ ವಿಚಾರದಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತದೆ ಎಂದು ಅವು ಹೇಳಿವೆ.

ತ್ರಿಕೋನ ಸರಣಿಯಿಂದ ಹಿಂದೆಸರಿಯುವ ಅಫ್ಗಾನಿಸ್ತಾನ ಮಂಡಳಿಯ ನಿರ್ಧಾರವನ್ನು ಸ್ವಾಗತಿಸುವುದಾಗಿ ಹಿರಿಯ ಆಟಗಾರ ರಶೀದ್‌ ಖಾನ್ ಹೇಳಿದ್ದಾರೆ. 

ಪಾಕ್‌ ಕ್ರಿಕೆಟ್‌ ಮಂಡಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.