ADVERTISEMENT

ಚಿನ್ನಸ್ವಾಮಿ ಮೈದಾನದಲ್ಲಿ ಜನದಟ್ಟಣೆ ನಿಯಂತ್ರಿಸಲು ಎಐ ಬಳಕೆಗೆ ಆರ್‌ಸಿಬಿ ಮನವಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜನವರಿ 2026, 10:21 IST
Last Updated 16 ಜನವರಿ 2026, 10:21 IST
   

ಬೆಂಗಳೂರು: ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) ವೇಳೆ ತವರು ಮೈದಾನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜನದಟ್ಟಣೆ ನಿಯಂತ್ರಿಸಲು ಎಐ ಕ್ಯಾಮೆರಾ ಅಳವಡಿಸಲು, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(ಆರ್‌ಸಿಬಿ) ತಂಡವು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ(ಕೆಎಸ್‌ಸಿಎ) ಮನವಿ ಮಾಡಿದೆ.

ಐಪಿಎಲ್‌ 19ನೇ ಆವೃತ್ತಿಗೂ ಮುನ್ನ, ಸುಧಾರಿತ ಎಐ ವಿಡಿಯೊ ವಿಶ್ಲೇಷಣಾ ತಂತ್ರಜ್ಞಾನ ಹೊಂದಿರುವ 300 ರಿಂದ 350 ಕ್ಯಾಮೆರಾ ಅಳವಡಿಸಬೇಕೆಂದು ಮನವಿ ಮಾಡಿದೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಆರ್‌ಸಿಬಿ, ‘ಅಧುನಿಕ ತಂತ್ರಜ್ಞಾನದ ನೆರವಿನಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜನದಟ್ಟಣೆ ನಿಯಂತ್ರಣ ಮಾಡಬಹುದು. ಇದು ಕೆಎಸ್‌ಸಿಎ ಹಾಗೂ ಪೊಲೀಸರ ಕೆಲಸವನ್ನು ಸುಗಮಗೊಳಿಸುತ್ತದೆ. ಇದರಿಂದ ಮೈದಾನಕ್ಕೆ ಪ್ರವೇಶ ಮಾಡುವವರು ಮತ್ತು ನಿರ್ಗಮಿಸುವವರ ಮೇಲೆ ಸುಲಭವಾಗಿ ಕಣ್ಣಿಡಬಹುದಾಗಿದೆ. ಅಭಿಮಾನಿಗಳ ಸುರಕ್ಷತೆಯ ದೃಷ್ಟಿಯಿಂದ ಇದನ್ನು ಅಳವಡಿಸಲು ಮನವಿ ಮಾಡುತ್ತೇವೆ’ ಎಂದು ತಿಳಿಸಿದೆ.

ADVERTISEMENT

ಎಐ ಕ್ಯಾಮೆರಾ ಅಳವಡಿಕೆಗೆ ಸುಮಾರು ₹4.5 ಕೋಟಿ ಖರ್ಚಾಗಲಿದ್ದು, ಅದನ್ನು ಆರ್‌ಸಿಬಿ ತಂಡವು ನೀಡಲಿದೆ. ಇದಕ್ಕಾಗಿ ಎಐ ಕ್ಯಾಮೆರಾ ತಂತ್ರಜ್ಞಾನ ಹೊಂದಿರುವ ಸ್ಟಾಕ್ಯೂ ಕಂಪನಿಯ ಜೊತೆ ಕೈಜೋಡಿಸಲು ಬಯಸಿದ್ದೇವೆ ಎಂದು ಹೇಳಿದೆ.

ಆರ್‌ಸಿಬಿ ತಂಡವು ಐಪಿಎಲ್‌ 18ನೇ ಆವೃತ್ತಿಯಲ್ಲಿ ಮೊದಲ ಬಾರಿಗೆ ಟ್ರೋಫಿ ಗೆದ್ದಿತ್ತು. ಜೂನ್‌ 4ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ವಿಜಯೋತ್ಸವ ಮೆರವಣಿಗೆಯ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟಿದ್ದರು. 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಅದರ ನಂತರ, ಸುರಕ್ಷತೆಯ ದೃಷ್ಟಿಯಿಂದ ಮೈದಾನದಲ್ಲಿ ಯಾವುದೇ ದೊಡ್ಡ ಟೂರ್ನಿ ಅಥವಾ ಪ್ರಮುಖ ಪಂದ್ಯಗಳು ಜರುಗಿಲ್ಲ.

ಮಾರ್ಚ್‌ 26ರಿಂದ ಐಪಿಎಲ್‌ 19ನೇ ಆವೃತ್ತಿ ಆರಂಭವಾಗಲಿದೆ. ಈ ನಡುವೆ ಆರ್‌ಸಿಬಿ ತಂಡವು ರಾಯಪುರ ಅಥವಾ ನವಿ ಮುಂಬೈನಲ್ಲಿ ತವರಿನ ಪಂದ್ಯಗಳನ್ನು ಆಡಲು ಸಿದ್ದತೆ ನಡೆಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.