ADVERTISEMENT

IND vs ENG Test: ಸಹೋದರಿಗೆ ಸಾಧನೆ ಸಮರ್ಪಿಸಿದ ಆಕಾಶ್

ಪಿಟಿಐ
Published 7 ಜುಲೈ 2025, 15:25 IST
Last Updated 7 ಜುಲೈ 2025, 15:25 IST
<div class="paragraphs"><p>ವಿಕೆಟ್ ಗಳಿಸಿದ ಆಕಾಶ್ ದೀಪ್ ಅವರನ್ನು ಅಭಿನಂದಿಸಿದ ಕೆ.ಎಲ್. ರಾಹುಲ್ ಮತ್ತು ಕರುಣ್ ನಾಯರ್‌&nbsp; &nbsp;</p></div>

ವಿಕೆಟ್ ಗಳಿಸಿದ ಆಕಾಶ್ ದೀಪ್ ಅವರನ್ನು ಅಭಿನಂದಿಸಿದ ಕೆ.ಎಲ್. ರಾಹುಲ್ ಮತ್ತು ಕರುಣ್ ನಾಯರ್‌   

   

–ಎಎಫ್‌ಪಿ ಚಿತ್ರ

ಬರ್ಮಿಂಗ್‌ಹ್ಯಾಮ್: ‘ಪ್ರತಿಯೊಂದು ಎಸೆತ ಹಾಕುವಾಗಲೂ, ಕ್ಯಾನ್ಸರ್‌ ಕಾಯಿಲೆಯೊಂದಿಗೆ ಹೋರಾಟ ನಡೆಸುತ್ತಿರುವ ನನ್ನ ಸಹೋದರಿಯ ಕುರಿತ ಯೋಚನೆ ಹಾದುಹೋಗುತ್ತಿತ್ತು. ನನ್ನ ಈ ಸಾಧನೆಯು ಆಕೆಗೆ ಸಮರ್ಪಣೆ. ನಿನ್ನೊಂದಿಗೆ ನಾವೆಲ್ಲರೂ ಇದ್ದೇವೆ ಸಹೋದರಿ’–

ADVERTISEMENT

ಎಜ್‌ಬಾಸ್ಟನ್‌ನಲ್ಲಿ ಭಾನುವಾರ ಮುಕ್ತಾಯವಾದ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಐತಿಹಾಸಿ ಜಯಸಾಧನೆ ಮಾಡಿದ ಭಾರತ ತಂಡದ ವೇಗಿ ಆಕಾಶ್ ದೀಪ್ ಅವರ ಭಾವುಕ ಮಾತುಗಳಿವು. ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಆರು ವಿಕೆಟ್ ಗಳಿಸಿ ತಂಡದ ಜಯದಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಆಕಾಶ್. ಪಂದ್ಯದ ನಂತರ ‘ಜಿಯೊ ಹಾಟ್‌ಸ್ಟಾರ್‌’ವಾಹಿನಿಯ ಸಂವಾದದಲ್ಲಿ ವೀಕ್ಷಕ ವಿವರಣೆಗಾರ ಚೇತೇಶ್ವರ್ ಪೂಜಾರ ಅವರೊಂದಿಗೆ ಆಕಾಶ್ ಮಾತನಾಡಿದರು. ಈ ಸಂದರ್ಭದಲ್ಲಿ ಅವರು ತಮ್ಮ ಸಹೋದರಿಯನ್ನು ನೆನಪಿಸಿಕೊಂಡರು. 

‘ಈ ವಿಷಯದ ಕುರಿತು ಯಾರೊಂದಿಗೂ ನಾನು ಮಾತನಾಡಿಲ್ಲ. ಎರಡು ತಿಂಗಳುಗಳ ಹಿಂದೆ ನನ್ನ ತಂಗಿಗೆ ಕ್ಯಾನ್ಸರ್‌ ಇರುವುದು ಪತ್ತೆಯಾಯಿತು. ಇವತ್ತು ನಾನು ಉತ್ತಮವಾಗಿ ಆಡಿರುವುದು  ಆಕೆಯಲ್ಲಿ ಸಂತಸ ಮೂಡಿಸಿದೆ. ಅವರ ಮುಖದ ಮೇಲೆ ನಗು ಮೂಡಿಸಲು ನನ್ನ ಆಟ ಕಾರಣವಾಗಿದೆ’ ಎಂದು ಆಕಾಶ್ ಭಾವುಕರಾದರು. 

ಪಂದ್ಯದ ಕುರಿತು ಮಾತನಾಡಿದ ಅವರು, ‘ಪಿಚ್‌ನ ಗಟ್ಟಿ ಪ್ಯಾಚ್ ಇರುವಲ್ಲಿ ಚೆಂಡು ಪುಟಿದೇಳುವಂತೆ ಎಸೆತ ಹಾಕುವುದು ನನ್ನ ಗುರಿಯಾಗಿತ್ತು. ಜೋ ರೂಟ್ ಅವರಿಗೆ ತುಸು ಕ್ರೀಸ್‌ನ ವೈಡ್‌ ಲೆಂಗ್ತ್‌ನಲ್ಲಿ ಹಾಕಿದ್ದೆ. ಅದು ಫಲ ನೀಡಿತು. ಅದೇ ಹ್ಯಾರಿ ಬ್ರೂಕ್ ಅವರು ಬ್ಯಾಕ್‌ಫುಟ್‌ನಲ್ಲಿ ಚೆನ್ನಾಗಿ ಆಡುವ ಆಟಗಾರ. ಅವರಿಗೂ ಹಾರ್ಡ್‌ ಸೀಮ್ ಮತ್ತು ಫುಲ್ಲರ್ ಲೆಂಗ್ತ್‌ನಲ್ಲಿ ಎಸೆತಗಳನ್ನು ಹಾಕಿದೆ’ ಎಂದರು. 

ಜಸ್‌ಪ್ರೀತ್ ಬೂಮ್ರಾ ಅವರು ವಿಶ್ರಾಂತಿ ಪಡೆದ ಕಾರಣ ಆಕಾಶ್ ಅವರು ಆಡುವ ಅವಕಾಶ ಪಡೆದಿದ್ದರು. ಈ ಟೆಸ್ಟ್‌ನಲ್ಲಿ ಅವರು ಒಟ್ಟು 10 ವಿಕೆಟ್ ಗಳಿಸಿದರು. ಸರಣಿಯಲ್ಲಿ ಭಾರತವು ಈಗ 1–1ರ ಸಮಬಲ ಸಾಧಿಸಿತು. ಮೂರನೇ ಪಂದ್ಯವು ಲಾರ್ಡ್ಸ್‌ನಲ್ಲಿ ಇದೇ 10 ರಿಂದ 14ರವರೆಗೆ ನಡೆಯಲಿದೆ. 

‘ಮುಂದಿನ ಪಂದ್ಯದ ಕುರಿತು ನಾನಿನ್ನೂ ಯೋಚಿಸಿಲ್ಲ. ಲಾರ್ಡ್ಸ್‌ನಲ್ಲಿಯ ಸ್ಥಿತಿ ಇಲ್ಲಿಗಿಂತ ವಿಭಿನ್ನವಾಗಿರುವ ಸಾಧ್ಯತೆ ಇದೆ. ಪರಿಸ್ಥಿತಿ ಏನೇ ಇರಲಿ. ನಮ್ಮ ಸಾಮರ್ಥ್ಯ ಮತ್ತು ಆತ್ಮವಿಶ್ವಾಸವನ್ನು ಸಂಪೂರ್ಣವಾಗಿ ವಿನಿಯೋಗಿಸುವುದರತ್ತ ಪೂರ್ಣ ಗಮನ ನೀಡುತ್ತೇವೆ’ ಎಂದರು. 

ಕುಲದೀಪ್‌ಗೆ ಅವಕಾಶ ನೀಡುವ ಆಶಯವಿತ್ತು: ಗಿಲ್

ಬರ್ಮಿಂಗ್‌ಹ್ಯಾಮ್: ಎರಡನೇ ಟೆಸ್ಟ್‌ ಪಂದ್ಯದಲ್ಲಿ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನೇ ಆಡಿಸಬೇಕು ಎಂಬ ಆಶಯ ತಮಗಿತ್ತು. ಆದರೆ ಬ್ಯಾಟಿಂಗ್ ಕ್ರಮಾಂಕವನ್ನು ಹೆಚ್ಚು ಬೆಳೆಸುವ ಉದ್ದೇಶದಿಂದ ವಾಷಿಂಗ್ಟನ್ ಸುಂದರ್ ಅವರಿಗೆ ಅವಕಾಶ ನೀಡಲಾಯಿತು ಎಂದು ಭಾರತ ತಂಡದ ನಾಯಕ ಶುಭಮನ್ ಗಿಲ್ ಸ್ಪಷ್ಟಪಡಿಸಿದ್ದಾರೆ.

ಎಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಆದ್ದರಿಂದ ವಿಕೆಟ್‌ಗಳಿಸುವ ಸಮರ್ಥ ಬೌಲರ್ ಕುಲದೀಪ್ ಅವರಿಗೆ ಅವಕಾಶ ನೀಡಬೇಕು ಎಂಬ ಚರ್ಚೆಗಳು ಮಾಧ್ಯಮಗಳಲ್ಲಿ ನಡೆದಿದ್ದವು. ಆದರೆ ಆಲ್‌ರೌಂಡರ್‌ ವಾಷಿಂಗ್ಟನ್ ಅವರನ್ನು ಕಣಕ್ಕಿಳಿಸಿದ ಸಂದರ್ಭದಲ್ಲಿ ತಂಡದ ವ್ಯವಸ್ಥಾಪನ ಮಂಡಳಿಯ ಕುರಿತು ಟೀಕೆಗಳೂ ಕೇಳಿಬಂದಿದ್ದವು. 

ಪಂದ್ಯದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಗಿಲ್ ‘ನನ್ನ ಹಾಗೂ ವಾಷಿಂಗ್ಟನ್ ಜೊತೆಯಾಟವು ಮಹತ್ವದ್ದಾಗಿತ್ತು. 180 ರನ್‌ಗಳ  ಮುನ್ನಡೆಯ ಬದಲು 70–80 ರ ಲೀಡ್‌ಗೆ ಬಹಳ ವ್ಯತ್ಯಾಸವಾಗುತ್ತದೆ. ಎದುರಾಳಿಗಳ ಮೇಲೆ ಇದು ಬೀರುವ ಪರಿಣಾಮವೂ ಬೇರೆಯೇ ಆಗುತ್ತದೆ. ಆದ್ದರಿಂದ ಮುನ್ನಡೆ ಬೆಳೆಸುವಲ್ಲಿ ಆ ಜೊತೆಯಾಟ ಮುಖ್ಯವಾಗಿತ್ತು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.