ADVERTISEMENT

T20 WC | IND vs AFG: ರೋಹಿತ್ -ರಾಹುಲ್ ಅಬ್ಬರ, ಬಸವಳಿದ ಅಫ್ಗನ್ ಬೌಲರ್‌ಗಳು

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2021, 1:57 IST
Last Updated 4 ನವೆಂಬರ್ 2021, 1:57 IST
ರೋಹಿತ್ ಶರ್ಮಾ ಮತ್ತು ಕೆ.ಎಲ್. ರಾಹುಲ್
ರೋಹಿತ್ ಶರ್ಮಾ ಮತ್ತು ಕೆ.ಎಲ್. ರಾಹುಲ್   

ಅಬುಧಾಬಿ: ಮೊದಲ ಎರಡು ಪಂದ್ಯಗಳಲ್ಲಿ ನೀರಸ ಆಟವಾಡಿ ಸೋಲಿನ ಕಹಿಯುಂಡ ಭಾರತ ತಂಡ ವಿಶ್ವಕಪ್‌ ಟೂರ್ನಿಯಲ್ಲಿ ಗೆಲುವಿನ ಲಯಕ್ಕೆ ಮರಳಿತು.

ಶೇಖ್ ಝಯೇದ್ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಸೂಪರ್ 12ರ ಎರಡನೇ ಗುಂಪಿನ ಪಂದ್ಯದಲ್ಲಿ ಅಫ್ಗಾನಿಸ್ತಾನ ವಿರುದ್ಧ ಆಲ್‌ರೌಂಡ್ ಆಟವಾಡಿದ ಭಾರತ 66 ರನ್‌ಗಳ ಜಯ ಸಾಧಿಸಿತು.

ಆರಂಭಿಕ ಜೋಡಿ ರೋಹಿತ್ ಶರ್ಮಾ ಮತ್ತು ಕೆ.ಎಲ್. ರಾಹುಲ್ ಅವರ ಶತಕದ ಜೊತೆಯಾಟದ ಬಲದಿಂದ ಭಾರತ ಎರಡು ವಿಕೆಟ್‌ಗಳಿಗೆ 210 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ಅಫ್ಗಾನಿಸ್ತಾನ ಏಳು ವಿಕೆಟ್‌ಗಳಿಗೆ 144 ರನ್ ಕಲೆ ಹಾಕಿತು.

ADVERTISEMENT

ಆರಂಭದಲ್ಲಿ ತಂಡ ವಿಕೆಟ್‌ಗಳನ್ನು ಕಳೆದುಕೊಂಡಿತು. ಹೀಗಾಗಿ ಭಾರತಕ್ಕೆ ಸುಲಭ ಜಯ ಒಲಿಯುವ ನಿರೀಕ್ಷೆ ಮೂಡಿತ್ತು, ಆದರೆ ಮೊಹಮ್ಮದ್ ನಬಿ ಮತ್ತು ಕರೀಂ ಜನ್ನತ್‌ ಭರ್ಜರಿ ಬ್ಯಾಟಿಂಗ್ ಮಾಡಿ ಮಿಂಚಿದರು. ಆದರೂ ಜಯ ಕಸಿದುಕೊಳ್ಳಲು ಆವರಿಗೆ ಸಾಧ್ಯವಾಗಲಿಲ್ಲ.

ರಾಹುಲ್‌–ರೋಹಿತ್ ಭರ್ಜರಿ ಬ್ಯಾಟಿಂಗ್‌: ಗುಂಪಿನ ಮೊದಲೆರಡು ಪಂದ್ಯಗಳಲ್ಲಿ ಕ್ರಮವಾಗಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಎದುರು ಸೋತಿರುವ ಭಾರತ ತಂಡಕ್ಕೆ ಮುಂದಿನ ಎಲ್ಲ ಪಂದ್ಯಗಳನ್ನೂ ಉತ್ತಮ ರನ್‌ ರೇಟ್ ಮೂಲಕ ಜಯಿಸುವ ಅಗತ್ಯ ಇದೆ. ಈಚೆಗೆ ಪಾಕಿಸ್ತಾನ ತಂಡದ ವಿರುದ್ಧ ಸೋತರೂ ವಿರೋಚಿತವಾಗಿ ಹೋರಾಟ ಮಾಡಿದ್ದ ಅಫ್ಗಾನಿಸ್ತಾನ ತಂಡದ ಬೌಲಿಂಗ್ ಭಾರತದ ಮುಂದೆ ಮಂಕಾಯಿತು.

ಟಾಸ್ ಗೆದ್ದು ಫೀಲ್ಡಿಂಗ್ ಮಾಡುವ ಅಫ್ಗನ್ ತಂಡದ ನಿರ್ಧಾರ ದುಬಾರಿಯಾಯಿತು. ರಾಹುಲ್ (69; 48ಎ) ಮತ್ತು ರೋಹಿತ್ (74; 47ಎ) ಮೊದಲ ವಿಕೆಟ್‌ಗೆ 140 ರನ್‌ಗಳನ್ನು ಪೇರಿಸಿದರು.

ಅಫ್ಗನ್ ತಂಡದ ನಾಯಕ ಮೊಹಮ್ಮದ್ ನಬಿ ಬೌಲಿಂಗ್‌ನಲ್ಲಿ ಮಾಡಿದ ಪ್ರಯೋಗಗಳಿಗೆ ಫಲ ಸಿಗಲಿಲ್ಲ. 14 ಓವರ್‌ಗಳವರೆಗೂ ಭಾರತದ ಆರಂಭಿಕ ಜೋಡಿಯ ಪಾರುಪತ್ಯ ನಡೆಯಿತು.

ರೋಹಿತ್ ಶರ್ಮಾ 37 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರೆ, ರಾಹುಲ್ 35 ಎಸೆತಗಳಲ್ಲಿ 50ರ ಗಡಿ ಮುಟ್ಟಿದರು.

15ನೇ ಓವರ್‌ನಲ್ಲಿ ಕರೀಂ ಜನತ್ ಬೌಲಿಂಗ್‌ನಲ್ಲಿ ರೋಹಿತ್ ಔಟಾದಾಗ ಜೊತೆಯಾಟ ಮುರಿದುಬಿತ್ತು.

ಎರಡು ಓವರ್‌ಗಳ ನಂತರ ರಾಹುಲ್ ಅವರನ್ನು ಗುಲ್ಬದಿನ್ ಕ್ಲೀನ್‌ ಬೌಲ್ಡ್ ಮಾಡಿದರು.

ಆದರೆ, ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದ ರಿಷಭ್ ಪಂತ್ (ಔಟಾಗದೆ 27) ಮತ್ತು ಹಾರ್ದಿಕ್ ಪಾಂಡ್ಯ (ಔಟಾಗದೆ 35) ಜೊತೆಗೂಡಿ ಕೇವಲ 21 ಎಸೆತಗಳಲ್ಲಿ 63 ರನ್‌ಗಳನ್ನು ಸೂರೆ ಮಾಡಿದರು. ಪಾಂಡ್ಯ ಎರಡು ಮತ್ತು ಪಂತ್ ಮೂರು ಸಿಕ್ಸರ್ ಸಿಡಿಸಿದರು. ಇದರಿಂದಾಗಿ ತಂಡದ ಮೊತ್ತವು ಇನ್ನೂರರ ಗಡಿ ದಾಟಿತು.

ಹೋದ ಪಂದ್ಯದಲ್ಲಿ ಆಡಿದ್ದ ಇಶಾನ್ ಕಿಶನ್ ಅವರನ್ನು ಕೈಬಿಟ್ಟು ಸೂರ್ಯಕುಮಾರ್ ಯಾದವ್ ಅವರಿಗೆ ಮತ್ತು ಗಾಯಗೊಂಡಿರುವ ವರುಣ್ ಚಕ್ರವರ್ತಿ ಬದಲು ಆರ್. ಅಶ್ವಿನ್ ಅವರಿಗೆ ಅವಕಾಶ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.