ADVERTISEMENT

ಜೀವನದ ಶತಕ ಪೂರೈಸಿ ಅನಿಲ್ ಭಾಯ್..!

ಜಂಬೋಗೆ ಜನ್ಮದಿನಕ್ಕೆ ಸೆಹ್ವಾಗ್ ವಿಶಿಷ್ಟ ಶುಭಾಶಯ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 20:18 IST
Last Updated 17 ಅಕ್ಟೋಬರ್ 2019, 20:18 IST
ಅನಿಲ್ ಕುಂಬ್ಳೆ ಅವರ ಮುಖಕ್ಕೆ ಕೇಕ್ ಬಳಿಯುತ್ತಿರುವ ವೀರೇಂದ್ರ ಸೆಹ್ವಾಗ್. ಇದು ಸುಮಾರು ಹತ್ತು ವರ್ಷಗಳ ಹಿಂದಿನ ಚಿತ್ರ. ಟ್ವೀಟರ್‌ನಲ್ಲಿ ಈಗ ಬಹಳ ಸುದ್ದಿ ಮಾಡಿದೆ
ಅನಿಲ್ ಕುಂಬ್ಳೆ ಅವರ ಮುಖಕ್ಕೆ ಕೇಕ್ ಬಳಿಯುತ್ತಿರುವ ವೀರೇಂದ್ರ ಸೆಹ್ವಾಗ್. ಇದು ಸುಮಾರು ಹತ್ತು ವರ್ಷಗಳ ಹಿಂದಿನ ಚಿತ್ರ. ಟ್ವೀಟರ್‌ನಲ್ಲಿ ಈಗ ಬಹಳ ಸುದ್ದಿ ಮಾಡಿದೆ   

ಬೆಂಗಳೂರು: ವಿಶ್ವದ ಶ್ರೇಷ್ಠ ಲೆಗ್‌ಸ್ಪಿನ್ನರ್‌ಗಳಲ್ಲಿ ಒಬ್ಬರಾದ ಅನಿಲ್ ಕುಂಬ್ಳೆ ಅವರಿಗೆ ಗುರುವಾರ 49ನೇ ಜನ್ಮದಿನದ ಸಂಭ್ರಮ. ಅವರೊಂದಿಗೆ ಸುಮಾರು ಒಂದು ದಶಕ ಭಾರತ ತಂಡದಲ್ಲಿ ಆಡಿದ್ದ ದಿಗ್ಗಜ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಮಾಡಿರುವ ಶುಭಾಶಯದ ಟ್ವೀಟ್ ಈಗ ಅಪಾರ ಜನಮೆಚ್ಚುಗೆ ಗಳಿಸಿದೆ.

‘ಭಾರತದ ಮ್ಯಾಚ್‌ ವಿನ್ನಿಂಗ್ ಆಟಗಾರ ಮತ್ತು ಪ್ರೇರಣಾದಾಯಿ ವ್ಯಕ್ತಿ ನೀವು. ಅವತ್ತು ಟೆಸ್ಟ್‌ ಕ್ರಿಕೆಟ್‌ನಲ್ಲಿ ನಿಮ್ಮ ಎರಡನೇ ಶತಕ ದಾಖಲಾಗುವ ಅವಕಾಶ ನನ್ನಿಂದ ಹಾಳಾಗಿತ್ತು. ಅದಕ್ಕಾಗಿ ಕ್ಷಮಿಸಿ. ಆದರೆ, ನಿಜ ಜೀವನದಲ್ಲಿ ನೀವು ಶತಕ ದಾಖಲಿಸಬೇಕು. ಇನ್ನೂ 51 ಹೆಜ್ಜೆಗಳನ್ನು ಯಶಸ್ವಿಯಾಗಿ ಸಾಗಬೇಕು ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಕಮ್ ಆನ್..ಕಮ್‌ ಆನ್.. ಅನಿಲ್‌ ಭಾಯ್..! ಹ್ಯಾಪಿ ಬರ್ತಡೆ’ ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

ಈ ಸಂದೇಶಕ್ಕೆ ಪ್ರತಿಕ್ರಿಯಿಸಿರುವ ಕುಂಬ್ಳೆ, ‘ಧನ್ಯವಾದಗಳು ವೀರೂ, ನಿಮಗೆ ವಿಷಯವನ್ನು ಹೇಳುವ ಕಲೆ ಸಿದ್ಧಿಸಿದೆ’ ಎಂದು ಬರೆದಿದ್ದಾರೆ.

ADVERTISEMENT

ಅಡಿಲೇಡ್‌ನಲ್ಲಿ ನಡೆದಿದ್ದ 2008ರಲ್ಲಿ ಬಾರ್ಡರ್‌–ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಟೆಸ್ಟ್ ಪಂದ್ಯದಲ್ಲಿ ನಡೆದ ಘಟನೆಯನ್ನು ವೀರೂ, ತಮ್ಮ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

‘ಆ ದಿನದಾಟದ ಚಹಾವಿರಾಮದ ವೇಳೆಗೆ ನಾನು ಮತ್ತು ಇಶಾಂತ್ (ಶರ್ಮಾ)ಕ್ರೀಸ್‌ನಲ್ಲಿದ್ದೆವು. 87 ರನ್‌ ಗಳಿಸಿದ್ದ ನನಗೆ ವೀರೂ ಒಂದು ಸಲಹೆ ಕೊಟ್ಟಿದ್ದರು. ಅನಿಲ್ ಭಾಯ್ ಎಷ್ಟು ನಿಧಾನವಾಗಿ ಆಡುತ್ತೀರಿ?. ಈಗ ಮರಳಿ ಹೋದಾಗ ಬೌಂಡರಿ, ಸಿಕ್ಸರ್‌ ಹೊಡೆಯಿರಿ. ಬೇಗ ಶತಕ ಗಳಿಸಿ ಎಂದಿದ್ದರು. ನಾನೂ ಅವರ ಮಾತು ಒಪ್ಪಿದೆ. ಮತ್ತೆ ಬ್ಯಾಟಿಂಗ್ ಆರಂಭವಾದ ಕೆಲವೇ ನಿಮಿಷಗಳಲ್ಲಿ ಚೆಂಡನ್ನು ಸಿಕ್ಸರ್‌ಗೆ ಎತ್ತುವ ಪ್ರಯತ್ನ ಮಾಡಿದೆ. ಫೀಲ್ಡರ್ ಪಡೆದ ಕ್ಯಾಚ್‌ಗೆ ಔಟಾದೆ’ ಎಂದು ಆ ಘಟನೆಯ ಕುರಿತು ಅನಿಲ್ ಅವರೇ ಕೆಲವು ದಿನಗಳ ಹಿಂದೆ ಒಂದು ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದರು.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಅನಿಲ್ ಒಂದು ಶತಕ ಮತ್ತು ಐದು ಅರ್ಧಶತಕಗಳನ್ನು ಗಳಿಸಿದ್ದಾರೆ. 619 ವಿಕೆಟ್‌ಗಳನ್ನೂ ಗಳಿಸಿದ್ದಾರೆ. ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 337 ವಿಕೆಟ್‌ಗಳನ್ನು ಗಳಿಸಿದ್ದಾರೆ. ಸದ್ಯ ಐಪಿಎಲ್‌ನ ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದ ಕೋಚ್ ಆಗಿ ನೇಮಕವಾಗಿದ್ದಾರೆ.

ಗುರುವಾರ ಕ್ರಿಕೆಟ್‌ ಲೋಕದ ಹಲವಾರು ದಿಗ್ಗಜರು, ಅಭಿಮಾನಿಗಳು ಅವರಿಗೆ ಶುಭ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.