ADVERTISEMENT

ತಂದೆಯನ್ನೇ ಮೀರಿಸಿದ ಮಗ! ಅಪರೂಪದ ಸಾಧನೆ ಮಾಡಿದ ಅರ್ಜುನ್ ತೆಂಡೂಲ್ಕರ್: ಏನದು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಡಿಸೆಂಬರ್ 2025, 2:31 IST
Last Updated 6 ಡಿಸೆಂಬರ್ 2025, 2:31 IST
<div class="paragraphs"><p>ಅರ್ಜುನ್‌ ತೆಂಡೂಲ್ಕರ್‌, ಒಳಚಿತ್ರದಲ್ಲಿ – ಸಚಿನ್‌ ತೆಂಡೂಲ್ಕರ್‌</p></div>

ಅರ್ಜುನ್‌ ತೆಂಡೂಲ್ಕರ್‌, ಒಳಚಿತ್ರದಲ್ಲಿ – ಸಚಿನ್‌ ತೆಂಡೂಲ್ಕರ್‌

   

ಕೃಪೆ: ಪಿಟಿಐ

ಗೋವಾ ತಂಡದ ಆಲ್‌ರೌಂಡರ್‌ ಅರ್ಜುನ್‌ ತೆಂಡೂಲ್ಕರ್‌ ಅವರು ಕ್ರಿಕೆಟ್‌ ಜಗತ್ತಿನಲ್ಲಿ ಅತ್ಯಂತ ಅಪರೂಪದ ಸಾಧನೆ ಮಾಡಿದ್ದಾರೆ. ಅವರ ತಂದೆ, ದಿಗ್ಗಜ ಆಟಗಾರ ಸಚಿನ್‌ ತೆಂಡೂಲ್ಕರ್‌ ಅವರಿಗೂ ಈ ಸಾಧನೆ ಮಾಡಲು ಸಾದ್ಯವಾಗಿರಲಿಲ್ಲ ಎಂಬುದು ವಿಶೇಷ.

ADVERTISEMENT

ದೇಶೀಯ ಕ್ರಿಕೆಟ್‌ನಲ್ಲಿ ಮುಂಬೈ ತಂಡದ ಪರ ಆಡುತ್ತಿದ್ದ ಅರ್ಜುನ್‌, 2022ರಲ್ಲಿ ಗೋವಾ ಪಡೆ ಸೇರಿಕೊಂಡಿದ್ದಾರೆ.

ಸದ್ಯ ಸೈಯದ್ ಮುಷ್ತಾಕ್‌ ಅಲಿ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಆಡುತ್ತಿರುವ ಅವರು, ಮಧ್ಯಪ್ರದೇಶ ವಿರುದ್ಧದ ಪಂದ್ಯದಲ್ಲಿ ಗೋವಾ ಪರ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡನ್ನೂ ಆರಂಭಿಸಿದ್ದಾರೆ. ಇದರೊಂದಿಗೆ, ಚುಟುಕು ಕ್ರಿಕೆಟ್‌ನಲ್ಲಿ ಈ ರೀತಿ ಆಡಿದ ಅಪರೂಪದ ಕ್ರಿಕೆಟಿಗ ಎನಿಸಿದ್ದಾರೆ.

ಡಿಸೆಂಬರ್‌ 2ರಂದು ಮಧ್ಯಪ್ರದೇಶ ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಗೋವಾ, ಬೌಲಿಂಗ್ ಆಯ್ದುಕೊಂಡಿತ್ತು. ಅರ್ಜುನ್‌ ಮೊದಲ ಓವರ್‌ ಬೌಲಿಂಗ್ ಮಾಡುವ ಮೂಲಕ ದಾಳಿ ಆರಂಭಿಸಿದ್ದರು. ಒಟ್ಟು 4 ಓವರ್‌ ಎಸೆದ ಅವರು, 36 ರನ್‌ ಬಿಟ್ಟುಕೊಟ್ಟು ಪ್ರಮುಖ ಮೂರು ವಿಕೆಟ್‌ಗಳನ್ನು ಉರುಳಿಸಿದ್ದರು.

ಮಧ್ಯಪ್ರದೇಶ ತಂಡ ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ಗೆ 170 ರನ್‌ ಕಲೆಹಾಕಿತ್ತು. ಸವಾಲಿಗ ಗುರಿ ಎದುರು ಇಶಾನ್‌ ಗಾಡೇಕರ್‌ ಜೊತೆ ಇನಿಂಗ್ಸ್‌ ಆರಂಭಿಸಿದ ಅವರು, 10 ಎಸೆತಗಳಲ್ಲಿ 16 ರನ್‌ ಬಾರಿಸಿದ್ದರು. ಗೋವಾ ಪಡೆ, 18.3 ಓವರ್‌ಗಳಲ್ಲಿ ಕೇವಲ ಮೂರು ವಿಕೆಟ್‌ಗಳನ್ನು ಕಳೆದುಕೊಂಡು 171 ರನ್‌ ಗಳಿಸುವ ಮೂಲಕ ಜಯ ಸಾಧಿಸಿತ್ತು.

ಇನ್ನು ಡಿಸೆಂಬರ್‌ 4ರಂದು ಬಿಹಾರ ಎದುರು ನಡೆದ ಪಂದ್ಯದಲ್ಲೂ ಅರ್ಜುನ್‌ ಇದೇ ರೀತಿ ಆಡಿದ್ದರು. ಬೌಲಿಂಗ್ ಆಯ್ದುಕೊಂಡ ಗೋವಾ ಪರ ಮೊದಲ ಓವರ್ ಮಾಡಿದ್ದು ಅವರೇ. 4 ಓವರ್‌ಗಳಲ್ಲಿ 32 ರನ್‌ ನೀಡಿದ ಎರಡು ವಿಕೆಟ್‌ ಕಬಳಿಸಿದರು.

ಬಿಹಾರ ನೀಡಿದ 181 ರನ್‌ಗಳ ಸವಾಲಿನ ಗುರಿ ಎದುರು ಕಶ್ಯಪ್‌ ಬಖಲೆ ಅವರೊಂದಿಗೆ ಇನಿಂಗ್ಸ್ ಆರಂಭಿಸಿ, ಕೇವಲ 5 ರನ್‌ಗೆ ಔಟಾದರು. ಆದರೆ, ಗೋವಾ ಈ ಪಂದ್ಯವನ್ನು 5 ವಿಕೆಟ್‌ ಅಂತರದಿಂದ ಗೆದ್ದಿದೆ.

ಗೋವಾ ಪಡೆ ಲೀಗ್‌ನಲ್ಲಿ ಈವರೆಗೆ ಆಡಿರುವ 5 ಪಂದ್ಯಗಳ ಪೈಕಿ 3ರಲ್ಲಿ ಜಯ ಸಾಧಿಸಿದೆ. ಎಲ್ಲ ಪಂದ್ಯಗಳಲ್ಲೂ ಆಡಿರುವ ಅರ್ಜುನ್‌, 70 ರನ್‌ ಗಳಿಸಿದ್ದು, 8 ವಿಕೆಟ್ ಉರುಳಿಸಿದ್ದಾರೆ.

ಟಿ20 ಮಾದರಿಯಲ್ಲಿ ಸಚಿನ್ ಸಾಧನೆ
ಮಾಸ್ಟರ್‌ ಬ್ಲಾಸ್ಟರ್ ಸಚಿನ್‌ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ (2006ರಲ್ಲಿ) ಏಕೈಕ ಟಿ20 ಪಂದ್ಯವಾಡಿದ್ದು, 10 ರನ್‌ ಅವರ ಖಾತೆಯಲ್ಲಿವೆ. ಒಂದು ವಿಕೆಟ್‌ ಸಹ ಪಡೆದುಕೊಂಡಿದ್ದಾರೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಪರ 78 ಪಂದ್ಯ ಆಡಿರುವ ಅವರು, 2,334 ರನ್‌ ಗಳಿಸಿದ್ದಾರೆ. 4 ಇನಿಂಗ್ಸ್‌ಗಳಲ್ಲಿ ಬೌಲಿಂಗ್‌ ಮಾಡಿದ್ದರೂ, ವಿಕೆಟ್ ಸಿಕ್ಕಿಲ್ಲ.

ಒಟ್ಟಾರೆ 96 ಟಿ20 ಪಂದ್ಯ ಆಡಿ, ಎರಡು ವಿಕೆಟ್‌ ಪಡೆದಿರುವ ಸಚಿನ್‌ಗೆ, ಮೊದಲ ಓವರ್‌ ಬೌಲಿಂಗ್‌ ಮಾಡುವ ಅವಕಾಶ ಸಿಕ್ಕಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.