
ಗೋಲ್ಡ್ ಕೋಸ್ಟ್: ಆಡುವ 11ರ ಬಳಗ ಆಯ್ಕೆ ಮಾಡುವಾಗ ಕೆಲವೊಮ್ಮೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ವಿಭಿನ್ನ ಸಂಯೋಜನೆಯೊಂದಿಗೆ ಕಣಕ್ಕಿಳಿಯಲು ನಾವು ಯೋಜನೆ ರೂಪಿಸುತ್ತೇವೆ. ಇದನ್ನು ಅನುಭವಿ ವೇಗಿ ಅರ್ಷದೀಪ್ ಸಿಂಗ್ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಭಾರತ ತಂಡದ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಹೇಳಿದ್ದಾರೆ.
ಅರ್ಷದೀಪ್ ಭಾರತದ ಪರ ಟಿ20ಐ ಕ್ರಿಕೆಟ್‌ನಲ್ಲಿ 100ಕ್ಕಿಂತ ಅಧಿಕ ವಿಕೆಟ್ ಪಡೆದ ಏಕೈಕ ಬೌಲರ್. ಆದರೂ ಅವರನ್ನು ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಎರಡು ಪಂದ್ಯಗಳಿಂದ ಹೊರಗಿಡಲಾಗಿತ್ತು. ಆದರೆ, ಮೂರನೇ ಪಂದ್ಯದಲ್ಲಿ ಆಡಲು ಅವಕಾಶ ಪಡೆದ ಅವರು ಪ್ರಮುಖ ವಿಕೆಟ್‌ಗಳನ್ನು ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
‘ನಾವು ತಂಡದಲ್ಲಿ ವಿಭಿನ್ನ ಸಂಯೋಜನೆಯನ್ನು ತರಲು ಪ್ರಯತ್ನಿಸುತ್ತಿದ್ದೇವೆ ಎಂಬುದು ಅನುಭವಿ ಅರ್ಷದೀಪ್ ಅವರಿಗೆ ತಿಳಿದಿದೆ. ಅವರು ವಿಶ್ವ ದರ್ಜೆಯ ಬೌಲರ್. ಮಾತ್ರವಲ್ಲ, ಅವರು ಪವರ್‌ಪ್ಲೇನಲ್ಲಿ ಹೆಚ್ಚಿನ ವಿಕೆಟ್‌ಗಳನ್ನು ಪಡೆದಿದ್ದಾರೆ’ ಎಂದು ನಾಲ್ಕನೇ ಟಿ20 ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾರ್ಕೆಲ್ ತಿಳಿಸಿದರು.
‘ಅರ್ಷದೀಪ್ ತಂಡಕ್ಕೆ ಎಷ್ಟು ಮುಖ್ಯವೆಂದು ನಮಗೆ ತಿಳಿದಿದೆ. ಆದರೆ ನಾವು ಕೆಲವೊಮ್ಮೆ ಬೇರೆ ಬೇರೆ ಸಂಯೋಜನೆಗಳು ಹೇಗೆ ಕೆಲಸ ಮಾಡುತ್ತೆ ಎಂಬುದನ್ನು ಸಹ ನೋಡಬೇಕಾಗುತ್ತದೆ. ಅವರು ಇದನ್ನು ಅರ್ಥಮಾಡಿಕೊಂಡಿದ್ದಾರೆ’ ಎಂದು ಮಾರ್ಕೆಲ್ ಹೇಳಿದರು.
‘ತಂಡದಿಂದ ಹೊರಗಿಟ್ಟಿರುವುದನ್ನು ಅರಗಿಸಿಕೊಳ್ಳುವುದು ಸುಲಭದ ವಿಚಾರವಲ್ಲ. ಆಟಗಾರರಿಗೆ ಆಯ್ಕೆಯ ವಿಷಯದಲ್ಲಿ ಯಾವಾಗಲೂ ನಿರಾಶೆ ಇದ್ದೇ ಇರುತ್ತದೆ. ಕೆಲವೊಮ್ಮೆ ಆಟಗಾರರಿಗೆ ಇದು ಕಷ್ಟದ ಸಂದರ್ಭವಾಗಿರುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.