
ಟ್ರಾವಿಸ್ ಹೆಡ್
ಪಿಟಿಐ ಚಿತ್ರ
ಸಿಡ್ನಿ: ಆರಂಭ ಆಟಗಾರ ಟ್ರಾವಿಸ್ ಹೆಡ್ ಅವರ ಭರ್ಜರಿ ಶತಕ ಮತ್ತು ಸ್ಟೀವ್ ಸ್ಮಿತ್ ಅವರ ಅಜೇಯ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ ಆ್ಯಷಸ್ ಸರಣಿಯ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೂರನೇ ದಿನವಾದ ಮಂಗಳವಾರ ಇಂಗ್ಲೆಂಡ್ ತಂಡದ ವಿರುದ್ಧ ಹಿಡಿತ ಸಾಧಿಸಿತು.
ಇಂಗ್ಲೆಂಡ್‌ನ 384 ರನ್‌ಗಳಿಗೆ ಉತ್ತರವಾಗಿ ಆಸ್ಟ್ರೇಲಿಯಾ (ಸೋಮವಾರ: 2 ವಿಕೆಟ್‌ಗೆ 166) ದಿನದಾಟ ಮುಗಿದಾಗ ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್‌ಗೆ 518 ರನ್ ಕಲೆಹಾಕಿದೆ. ಆ ಮೂಲಕ 134 ರನ್ ಮುನ್ನಡೆ ಗಳಿಸಿದೆ.
91 ರನ್‌ಗಳೊಡನೆ ಮಂಗಳವಾರ ಆಟ ಮುಂದುವರಿಸಿದ ಹೆಡ್ 166 ಎಸೆತಗಳಲ್ಲಿ 163 ರನ್ (4x24, 6x1)ಬಾರಿಸಿದರು. ಇದು ಅವರಿಗೆ ಸರಣಿಯಲ್ಲಿ ಮೂರನೇ ಶತಕ. ಮೊದಲ ಟೆಸ್ಟ್‌ನಲ್ಲಿ (ಪರ್ತ್) ಅವರ 123 ರನ್‌ಗಳು ಆಸ್ಟ್ರೇಲಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಆಡಿಲೇಡ್‌ನಲ್ಲಿ ನಡೆದ ಮೂರನೆ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಅವರು 170 ರನ್ ಹೊಡೆದಿದ್ದರು.
ಒಂದೆಡೆ ಹೆಡ್ ಅಬ್ಬರ ಮುಂದುವರಿದರೆ, ಇನ್ನೊಂದೆಡೆ ಅನುಭವಿ ಸ್ಟೀವ್ ಸ್ಮಿತ್ ಸರಣಿಯಲ್ಲಿ ಮೊದಲ ಶತಕ ದಾಖಲಿಸಿದರು. ಅವರು 129 ರನ್ (205 ಎ, 4x15, 6x1) ಗಳಿಸಿ ಔಟಾಗದೇ ಉಳಿದಿದ್ದಾರೆ. ಅಡಿಲೇಡ್‌ನಲ್ಲಿ 61 ರನ್ ಗಳಿಸಿದ್ದೇ ಸರಣಿಯಲ್ಲಿ ಅವರ ಈ ಹಿಂದಿನ ಗರಿಷ್ಠ ಮೊತ್ತವೆನಿಸಿತ್ತು. ಇದು ಸ್ಮಿತ್‌ಗೆ ಟೆಸ್ಟ್‌ಗಳಲ್ಲಿ 37ನೇ ಶತಕ.
ಆಲ್‌ರೌಂಡರ್ ಬ್ಯೂ ವೆಬ್‌ಸ್ಟರ್ 42 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ. ಸ್ಮಿತ್ ಜೊತೆ ಮುರಿಯದ ಎಂಟನೇ ವಿಕೆಟ್‌ಗೆ ಅವರಿ 81 ರನ್ ಸೇರಿಸಿದ್ದಾರೆ
ಪ್ರೇಕ್ಷಕರಿಂದ ಗೌರವ
ಹೆಡ್ ನಿರ್ಗಮಿಸಿದ ಮೇಲೆ ಉಸ್ಮಾನ್ ತಾರಿಖ್ ಖ್ವಾಜಾ ಬ್ಯಾಟಿಂಗಿಗೆ ಇಳಿದಾಗ ಭಾರಿ ಹರ್ಷೋದ್ಗಾರಗಳು ಕೇಳಿಬಂದವು. ವಿದಾಯದ ಟೆಸ್ಟ್ ಆಡುತ್ತಿರುವ ಅವರಿಗೆ ಪ್ರೇಕ್ಷಕರು ಎದ್ದುನಿಂತು ಗೌರವ ಸಲ್ಲಿಸಿದರು. ಅವರಿಗೆ ಇದು 88ನೇ ಟೆಸ್ಟ್. ಜನಾಂಗೀಯ ಭೇದದ ಬಗ್ಗೆ ಧೈರ್ಯವಾಗಿ ಮಾತನಾಡುವ ಪಾಕ್ ಸಂಜಾತ ಆಟಗಾರನಿಗೆ ಸಾಕಷ್ಟು ಅಭಿಮಾನಿವರ್ಗವಿದೆ.
ಆದರೆ 49 ಎಸೆತಗಳಲ್ಲಿ 17 ರನ್ ಬಾರಿಸಿದ ಅವರು ಬ್ರೈಡನ್ ಕಾರ್ಸ್ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು. 39 ವರ್ಷ ವಯಸ್ಸಿನ ಖ್ವಾಜಾ 15 ವರ್ಷಗಳ ಹಿಂದೆ ಇದೇ ಮೈದಾನದಲ್ಲಿ ಆ್ಯಷಸ್ ಸರಣಿಯಲ್ಲೆ ಪದಾರ್ಪಣೆ ಮಾಡಿದ್ದರು.
ಸಂಕ್ಷಿಪ್ತ ಸ್ಕೋರು
ಮೊದಲ ಇನಿಂಗ್ಸ್: ಇಂಗ್ಲೆಂಡ್: 384
ಆಸ್ಟ್ರೇಲಿಯಾ: 124 ಓವರುಗಳಲ್ಲಿ 7 ವಿಕೆಟ್‌ಗೆ 518
(ಟ್ರಾವಿಸ್ ಹೆಡ್ 163, ಸ್ಟೀವ್ ಸ್ಮಿತ್ ಬ್ಯಾಟಿಂಗ್ 129, ಕ್ಯಾಮರಾನ್ ಗ್ರೀನ್ 37, ಬ್ಯೂ ವೆಬ್‌ಸ್ಟರ್ ಬ್ಯಾಟಿಂಗ್ 42; ಬ್ರೈಡನ್ ಕಾರ್ಸ್ 108ಕ್ಕೆ3).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.